ADVERTISEMENT

ಮಂಠಾಳ ಗ್ರಾಮಕ್ಕೆ ಮಳೆ ನೀರಿನ ತೊಂದರೆ

ಮಾಣಿಕ ಆರ್ ಭುರೆ
Published 12 ಸೆಪ್ಟೆಂಬರ್ 2017, 6:47 IST
Last Updated 12 ಸೆಪ್ಟೆಂಬರ್ 2017, 6:47 IST
ಬಸವಕಲ್ಯಾಣ ತಾಲ್ಲೂಕಿನ ಮಂಠಾಳದಲ್ಲಿ ಚರಂಡಿ ಇಲ್ಲದ್ದರಿಂದ ರಸ್ತೆ ಮೇಲೆ ನೀರು ಹರಿಯುತ್ತಿರುವುದು (ಎಡಚಿತ್ರ) ಗ್ರಾಮದಲ್ಲಿ ಚರಂಡಿ ನೀರು ಮುಂದಕ್ಕೆ ಸಾಗದೆ ಸಂಗ್ರಹಗೊಂಡಿರುವುದು
ಬಸವಕಲ್ಯಾಣ ತಾಲ್ಲೂಕಿನ ಮಂಠಾಳದಲ್ಲಿ ಚರಂಡಿ ಇಲ್ಲದ್ದರಿಂದ ರಸ್ತೆ ಮೇಲೆ ನೀರು ಹರಿಯುತ್ತಿರುವುದು (ಎಡಚಿತ್ರ) ಗ್ರಾಮದಲ್ಲಿ ಚರಂಡಿ ನೀರು ಮುಂದಕ್ಕೆ ಸಾಗದೆ ಸಂಗ್ರಹಗೊಂಡಿರುವುದು   

ಬಸವಕಲ್ಯಾಣ: ತಾಲ್ಲೂಕಿನ ಮಂಠಾಳ ಗ್ರಾಮದ ಮಧ್ಯಭಾಗದಲ್ಲಿರುವ ಶಾಲೆ, ಕಾಲೇಜಿನ ಆವರಣದಲ್ಲಿ ಮಳೆ ನೀರು ಸಂಗ್ರಹಗೊಳ್ಳುವ ಕಾರಣ ಮಕ್ಕಳಿಗೆ ತೊಂದರೆ ಆಗುತ್ತಿದೆ. ಚರಂಡಿ ನೀರು ಸರಾಗವಾಗಿ ಸಾಗಲು ವ್ಯವಸ್ಥೆ ಇಲ್ಲದ್ದರಿಂದ ಎಲ್ಲೆಡೆ ಅಸ್ವಚ್ಛತೆ ಇದೆ.

ತಗ್ಗುಪ್ರದೇಶ ಇರುವುದರಿಂದ ಗ್ರಾಮದ ಓಣಿಗಳಲ್ಲಿನ ಚರಂಡಿ ನೀರು ಮತ್ತು ಮಳೆ ನೀರು ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಆವರಣದಲ್ಲಿ ಮೊಳಕಾಲು ಮಟ್ಟ ನಿಲ್ಲುತ್ತದೆ. ಇದೇ ಕೆಸರಿನಲ್ಲಿಯೇ ವಿದ್ಯಾರ್ಥಿಗಳು ದಾಟಿಕೊಂಡು ಶಾಲೆ ಪ್ರವೇಶಿಸುವ ಪರಿಸ್ಥಿತಿ ಇದೆ.

`ಸುಮಾರು 20 ಎಕರೆಯಲ್ಲಿನ ಮಳೆ ನೀರು ಊರ ಹೊರಗೆ ಸರಾಗವಾಗಿ ಸಾಗುವಂತಾಗಲು ದೊಡ್ಡದಾದ ಚರಂಡಿ ನಿರ್ಮಿಸುವ ಅಗತ್ಯವಿದೆ. ಇದಕ್ಕಾಗಿ ಯೋಜನೆ ರೂಪಿಸಬೇಕು ಎಂದು ಹಲವಾರು ಸಲ ಆಗ್ರಹಿಸಿದರೂ ಪ್ರಯೋಜನ ಆಗಿಲ್ಲ. ಓಣಿಗಳಲ್ಲಿನ ಚರಂಡಿ ನೀರು ಕೂಡ ಅಲ್ಲಲ್ಲಿ ಸಂಗ್ರಹಗೊಳ್ಳುತ್ತಿದೆ. ಅದರಲ್ಲಿ ಮಣ್ಣು, ಕಸ ಕಡ್ಡಿ ಬಿದ್ದು ಕೆಸರು ಆಗುತ್ತಿದೆ. ದುರ್ಗಂಧ ಸೂಸುತ್ತಿದ್ದು ಸೊಳ್ಳೆ ಮತ್ತು ನೊಣಗಳ ಕಾಟ ಹೆಚ್ಚಿದೆ’ ಎಂದು ರಾಜಪ್ಪ ಹೇಳುತ್ತಾರೆ.

ADVERTISEMENT

`ಇಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಆಗುತ್ತಿಲ್ಲ. ಅಲ್ಲದೆ ಸಿಬ್ಬಂದಿ ಕೊರತೆಯೂ ಇರುವುದರಿಂದ ಎಲ್ಲೆಡೆ ಚರಂಡಿ ನಿರ್ಮಾಣ ಸಾಧ್ಯವಾಗುತ್ತಿಲ್ಲ. ಚರಂಡಿ ಸ್ವಚ್ಛತೆಗೂ ವಿಳಂಬ ಆಗುತ್ತಿದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಅಂಬಾದಾಸ ಸ್ಪಷ್ಟಪಡಿಸಿದ್ದಾರೆ.

ಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೌಲಭ್ಯಗಳ ಕೊರತೆಯಿದೆ. ಇದನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಿದ್ದರೂ ಕಟ್ಟಡ ನಿರ್ಮಿಸಿಲ್ಲ ಮತ್ತು ಇತರೆ ಸೌಲಭ್ಯ ಒದಗಿಸಿಲ್ಲ. ಆಸ್ಪತ್ರೆ ಸಿಬ್ಬಂದಿ ವಸತಿ ಕಟ್ಟಡಗಳು ಕೂಡ ಶಿಥಿಲಗೊಂಡಿವೆ. ಅವುಗಳನ್ನು ನೆಲಸಮಗೊಳಿಸಿ ಹೊಸ ಕೊಠಡಿಗಳನ್ನು ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಅನೇಕ ದಿನಗಳ ಬೇಡಿಕೆಯಾಗಿದೆ.

`ಸಮುದಾಯ ಆರೋಗ್ಯ ಕೇಂದ್ರಕ್ಕಾಗಿ ಹಣ ಬಿಡುಗಡೆ ಆಗುವ ಹಂತದಲ್ಲಿದ್ದು ಕಟ್ಟಡ ನಿರ್ಮಾಣ ಕಾರ್ಯ ಶೀಘ್ರದಲ್ಲಿ ಆರಂಭಿಸುವಂತೆ ಸಂಬಂಧಿತರಿಗೆ ಕೇಳಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ನಿರ್ಮಲಾ ಮಾನಿಗೋಪಾಳೆ ತಿಳಿಸಿದ್ದಾರೆ. `ಗ್ರಾಮದಲ್ಲಿನ ಗ್ರಂಥಾಲಯ ವ್ಯವಸ್ಥೆಯನ್ನು ಸುಧಾರಿಸಬೇಕು. ಪ್ರತಿದಿನ ಗ್ರಂಥಗಳನ್ನು ಮತ್ತು ಪತ್ರಿಕೆಗಳನ್ನು ಓದಲು ವ್ಯವಸ್ಥೆ ಕಲ್ಪಿಸಬೇಕು.

ಒಂದೇ ಸ್ಥಳದಲ್ಲಿ ಬಸ್ ನಿಲುಗಡೆಗೆ ಮತ್ತು ಪ್ರಯಾಣಿಕರಿಗೆ ತಂಗಲು ವ್ಯವಸ್ಥೆ ಇರುವ ಬಸ್ ನಿಲ್ದಾಣ ಕಟ್ಟಬೇಕು’ ಎಂದು ಶಂಕರ ಕುಕ್ಕಾಪಾಟೀಲ ಒತ್ತಾಯಿಸಿದ್ದಾರೆ.
‘ಗ್ರಾಮದಲ್ಲಿ ಕೆಲವೆಡೆ ಕಚ್ಚಾ ರಸ್ತೆಗಳಿದ್ದು, ಸಿಸಿ ರಸ್ತೆ ನಿರ್ಮಿಸಬೇಕು. ಸರ್ಕಾರಿ ಪ್ರೌಢಶಾಲೆ ಎದುರಲ್ಲಿನ ತೆರೆದ ಬಾವಿಯಿಂದ ಅಪಾಯ ಸಂಭವಿಸಬಹುದು. ಆದ್ದರಿಂದ ಅದನ್ನು ಮುಚ್ಚಬೇಕು. ಮಹಿಳೆಯರಿಗಾಗಿ ಸಾಮೂಹಿಕ ಶೌಚಾಲಯಗಳನ್ನು ನಿರ್ಮಿಸಬೇಕು’ ಎಂಬುದು ಜನರ ಬೇಡಿಕೆಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.