ADVERTISEMENT

ಮನೆಗಳ ನಕಲಿ ದಾಖಲೆ ಸೃಷ್ಟಿಸಿ ಅವ್ಯವಹಾರ

ಶಾಸಕ ಮಲ್ಲಿಕಾರ್ಜುನ ಖೂಬಾ ಆರೋಪ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 4:46 IST
Last Updated 22 ಏಪ್ರಿಲ್ 2017, 4:46 IST
ಬಸವಕಲ್ಯಾಣ: ‘ಪಟ್ಟಣದಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ಮನೆ ಮತ್ತು ನಿವೇಶನಗಳ ನಕಲಿ ದಾಖಲೆ ಸೃಷ್ಟಿಸಿ ಭ್ರಷ್ಟಾಚಾರ ನಡೆಸಿ, ಸರ್ಕಾರಕ್ಕೆ ಬರುವ ಆದಾಯವನ್ನು ತಪ್ಪಿಸಲಾಗಿದೆ. ಅಲ್ಲದೆ ಸರ್ಕಾರದ ಮನೆಗಳು ಕೂಡ ಅರ್ಹ ಫಲಾನುಭವಿಗಳಿಗೆ ದೊರೆತಿಲ್ಲ’ ಎಂದು ಶಾಸಕ ಮಲ್ಲಿಕಾರ್ಜುನ ಖೂಬಾ ದೂರಿದರು.
 
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
 
‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಮೀನನ್ನು ಕೆಲವರು ಒತ್ತುವರಿ ಮಾಡಿಕೊಂಡು ಅನ್ಯಾಯ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಅಧಿಕಾರಿಗಳು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದರೆ ಇಂಥ ಪ್ರಕರಣಗಳು ನಡೆಯುವುದಿಲ್ಲ’ ಎಂದರು.
 
ಗ್ರಾಮಗಳಲ್ಲಿನ ಸಿ.ಸಿ ರಸ್ತೆ, ಶಾಲಾ ಕಟ್ಟಡಗಳ ನಿರ್ಮಾಣ ಮತ್ತು ದುರುಸ್ತಿ ಕಾರ್ಯ ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ಸರ್ಕಾರದ ಅನುದಾನ ನಿಗದಿತ ಕೆಲಸಕ್ಕೆ ಮತ್ತು ನಿಗದಿತ ಸಮಯದಲ್ಲಿ ಬಳಕೆ ಆಗಲಿ. ಇಲ್ಲದಿದ್ದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
 
‘ಮೇ ತಿಂಗಳಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ನೇತೃತ್ವದಲ್ಲಿ ಇಲ್ಲಿ ಸಭೆ ನಡೆಯಲಿದೆ. ಅಭಿವೃದ್ಧಿ ಅಧಿಕಾರಿಗಳು ಅಭಿವೃದ್ಧಿ ಕಾರ್ಯದ ಮತ್ತು ಸಮಸ್ಯೆಗಳ ಸಮಗ್ರ ಮಾಹಿತಿಯ ಪಟ್ಟಿ ಸಿದ್ಧಪಡಿಸಬೇಕು. ನಂತರದಲ್ಲಿ ಆಯಾ ಗ್ರಾಮಗಳಿಗೆ ಭೇಟಿನೀಡಿ ಪರಿಶೀಲನೆ ಸಹ ನಡೆಸಲಾಗುವುದು’ ಎಂದರು.
 
ತಹಶೀಲ್ದಾರ್ ಕೀರ್ತಿ ಚಾಲಾಕ ಮಾತನಾಡಿ, ‘ಪ್ರಗತಿ ವರದಿ ಸಲ್ಲಿಸಲು ಅಧಿಕಾರಿಗಳು ವಿಳಂಬ ಮಾಡಬಾರದು. ಗದ್ಲೇಗಾಂವ, ಹಾರಕೂಡ, ಗುಂಡೂರ, ಚಿಕ್ಕನಾಗಾಂವ, ಜಾಫರವಾಡಿ, ರಾಮನಗರ ತಾಂಡಾ, ಗಂಗಾಧರತಾಂಡಾ, ನೀರ್ಗುಡಿ, ಹನುಮಾನ ತಾಂಡಾದಲ್ಲಿ ಕುಡಿಯುವ ನೀರಿನ ಮತ್ತು ವಿದ್ಯುತ್ ಸಮಸ್ಯೆ ತಲೆದೂರಿದ್ದು ಶೀಘ್ರದಲ್ಲಿ ಬಗೆಹರಿಸಬೇಕು’ ಎಂದು ಸಲಹೆ ನೀಡಿದರು.
 
ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಬಸವರಾಜ ಚಿರಡೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ವಿಜಯಕುಮಾರ ಮಡ್ಡೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.