ADVERTISEMENT

ರಾಯಣ್ಣ ಬದುಕು ಯುವಜನರಿಗೆ ಆದರ್ಶ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 5:28 IST
Last Updated 25 ಏಪ್ರಿಲ್ 2017, 5:28 IST
ಬೀದರ್‌ನ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುರಿ ಮತ್ತು ಮೇಕೆ ಸಹಕಾರ ಸಂಘಗಳ ಮಹಾಮಂಡಳ ಅಧ್ಯಕ್ಷ ಪಂಡಿತರಾವ್ ಚಿದ್ರಿ ದೀಪ ಬೆಳಗಿಸಿದರು. ರಹೀಂಖಾನ್, ಎಂ.ಜಿ.ಗಂಗನಪಳ್ಳಿ, ಬಾಬುರಾವ್‌ ಪಾಸ್ವಾನ್, ಗೀತಾ ಚಿದ್ರಿ ಇದ್ದಾರೆ
ಬೀದರ್‌ನ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುರಿ ಮತ್ತು ಮೇಕೆ ಸಹಕಾರ ಸಂಘಗಳ ಮಹಾಮಂಡಳ ಅಧ್ಯಕ್ಷ ಪಂಡಿತರಾವ್ ಚಿದ್ರಿ ದೀಪ ಬೆಳಗಿಸಿದರು. ರಹೀಂಖಾನ್, ಎಂ.ಜಿ.ಗಂಗನಪಳ್ಳಿ, ಬಾಬುರಾವ್‌ ಪಾಸ್ವಾನ್, ಗೀತಾ ಚಿದ್ರಿ ಇದ್ದಾರೆ   

ಬೀದರ್‌: ‘ಶಿಕ್ಷಣ ಹಾಗೂ ಸಂಘಟನೆಯ ಮೂಲಕ ಸಮಾಜವನ್ನು ಬಲಪಡಿಸುವ ಅಗತ್ಯವಿದೆ’ ಎಂದು ಕುರಿ ಮತ್ತು ಮೇಕೆ ಸಹಕಾರ ಸಂಘಗಳ ಮಹಾಮಂಡಳ ಅಧ್ಯಕ್ಷ ಪಂಡಿತರಾವ್ ಚಿದ್ರಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ನಗರದ ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಂಘಟನೆಯಿಂದ ಸಮಾಜ ಕಟ್ಟಬಹುದಾದರೆ, ಹೋರಾಟದಿಂದ ಸಮುದಾಯಕ್ಕೆ ಅಗತ್ಯವಿರುವ ಸೌಲಭ್ಯ ಪಡೆಯಬಹುದು. ಆದ್ದರಿಂದ ಪ್ರತಿಯೊಬ್ಬರೂ ಸಮಾಜ ಸಂಘಟನೆಗೆ ಒತ್ತು ಕೊಡಬೇಕು’ ಎಂದು ಹೇಳಿದರು.

ADVERTISEMENT

‘ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ವೀರ ಸಂಗೊಳ್ಳಿ ರಾಯಣ್ಣ ಅವರ ಬದುಕು ಯುವಜನರಿಗೆ ಆದರ್ಶವಾಗಿದೆ’ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಉಗ್ರಾಣ ನಿಮಗದ ಅಧ್ಯಕ್ಷ ರಹೀಂ ಖಾನ್ ಮಾತನಾಡಿ, ‘ದೇಶಕಂಡ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಸಂಗೊಳ್ಳಿ ರಾಯಣ್ಣ ಅಗ್ರಗಣ್ಯರಾಗಿದ್ದಾರೆ. ಸಂಗೊಳ್ಳಿ ರಾಯಣ್ಣನವರ ಆದರ್ಶವನ್ನು  ಪ್ರತಿಯೊಬ್ಬರೂ ಪಾಲಿಸಬೇಕು’ ಎಂದು ಸಲಹೆ ನೀಡಿದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಎಂ.ಜಿ. ಗಂಗನಪಳ್ಳಿ ಮಾತನಾಡಿ, ‘ಅನುಭವ ಹಾಗೂ ಅನುಕರಣೆಯಿಂದ ಉತ್ತಮ ಕವಿತೆಗಳನ್ನು ರಚಿಸಬಹುದು. ಉದಯೋನ್ಮುಖ ಕವಿಗಳು ಅಧ್ಯಯನ ಪ್ರವೃತ್ತಿ ಬೆಳೆಸಿಕೊಳ್ಳುವ ಮೂಲಕ ಅರ್ಥಪೂರ್ಣವಾದ ಕವನಗಳ ರಚನೆ ಮಾಡಬೇಕು’ ಎಂದು ಹೇಳಿದರು.

ನಾಗಪ್ಪ ಜಾನಕನೋರ್ ಅವರು ‘ಸಂಗೊಳ್ಳಿ  ರಾಯಣ್ಣನವರ ಹೋರಾಟದ ಬದುಕು’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸುನಿತಾ ಕೂಡ್ಲಿಕರ್ ಮಾತನಾಡಿದರು. ಕವಿಗೋಷ್ಠಿಯಲ್ಲಿ 15 ಕವಿಗಳು ಕವನ ವಾಚನ ಮಾಡಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಮಾರು 30 ಕಲಾ ತಂಡಗಳು ಕಲೆಗಳ ಪ್ರದರ್ಶನ ನೀಡಿದವು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ ಜೋಳದಾಪಕೆ ಪ್ರಾಸ್ತಾವಿಕವಾಗಿ ಮಾತನಾಡಿ,‘ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಕೆಚ್ಚದೆಯಿಂದ ಹೋರಾಡಿದ ಸಂಗೊಳ್ಳಿ ರಾಯಣ್ಣ ಶೌರ್ಯ ಹಾಗೂ ಸಾಹಸವನ್ನು ಯುವಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ’ ಎಂದರು.

‘ಕಿತ್ತೂರಿನ ಹುಲಿ ಎಂದೇ ಪ್ರಸಿದ್ಧಿ ಪಡೆದಿದ್ದ ರಾಯಣ್ಣನವರ ಹೋರಾಟ ಮನೋಭಾವ ಯುವ ಜನಾಂಗಕ್ಕೆ ಸ್ಫೂರ್ತಿಯಾಗಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾ ಚಿದ್ರಿ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಸಂಚಾಲಕ ಬಾಬುರಾವ್ ಪಾಸ್ವಾನ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಜಿಲ್ಲಾ ಸಂಚಾಲಕ ಬಸವರಾಜ ಪವಾರ ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಮುರ್ಕೆ ಹಳೆಂಬುರ್ ನಿರೂಪಿಸಿದರು. ತುಕಾರಾಮ ಚಿಮಕೋಡ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.