ADVERTISEMENT

‘ವಚನ ಸಾಹಿತ್ಯ ರಕ್ಷಿಸಿದ ಚನ್ನಬಸವಣ್ಣ’

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 5:58 IST
Last Updated 10 ನವೆಂಬರ್ 2017, 5:58 IST

ಬೀದರ್: ‘ಚನ್ನಬಸವಣ್ಣ ಅವರು ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ವಚನ ಸಾಹಿತ್ಯವನ್ನು ರಕ್ಷಿಸಿದ್ದರು’ ಎಂದು ಪ್ರಾಚಾರ್ಯ ವಿಶ್ವನಾಥ ಗಂಧಿಗುಡಿ ಹೇಳಿದರು. ನಗರದ ನೌಬಾದ್‌ನ ಯಲ್ಲಾಲಿಂಗ ಕಾಲೊನಿಯ ಬಸವ ಮಂಟಪದಲ್ಲಿ 57ನೇ ಶರಣ ಸಂಗಮ ಕಾರ್ಯಕ್ರಮದ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಚನ್ನಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಿಜ್ಜಳ ಅರಸ ಶರಣರಿಗೆ ಎಳೆಹೂಟೆ ಶಿಕ್ಷೆ ನೀಡಿ ಕಲ್ಯಾಣದ ಬೀದಿಯಲ್ಲಿ ಆನೆ ಕಾಲಿಗೆ ಕಟ್ಟಿ ಎಳೆಯುತ್ತಿದ್ದಾಗ ಶರಣೆ ಬೋಂತಲದೇವಿ ನೇತೃತ್ವದ ಶರಣರ ತಂಡ ಮತ್ತು ಬಿಜ್ಜಳನ ಸೈನ್ಯದ ಮಧ್ಯೆ ಯುದ್ಧ ನಡೆಯುತ್ತದೆ. ಆಗ ಚನ್ನಬಸವಣ್ಣ ಶರಣರ ವಚನಗಳ ಕಟ್ಟುಗಳನ್ನು(ತಾಡಮಲೆ ಗ್ರಂಥ) ರಕ್ಷಿಸಿ, ವಿಜಯಪುರ, ಧಾರವಾಡ ಕಡೆಗೆ ತೆಗೆದುಕೊಂಡು ಹೋಗಿ ಸಂರಕ್ಷಿಸಲು ಶರಣರಿಗೆ ಮಾರ್ಗದರ್ಶನ ಮಾಡಿದ್ದರು’ ಎಂದು ತಿಳಿಸಿದರು.

‘ಲಿಂಗಾಯತ ಧರ್ಮದ ಸಿದ್ಧಾಂತಗಳಾದ ಅಷ್ಠಾವರಣ, ಷಟ್‌ಸ್ಥಲ, ಪಂಚಾಚಾರಗಳನ್ನು ರೂಪಿಸಿ ಧರ್ಮಕ್ಕೆ ಆಚರಣೆಯ ಆಯಾಮ ನೀಡಿದವರೇ ಚನ್ನಬಸವಣ್ಣ’ ಎಂದು ಬಣ್ಣಿಸಿದರು. ‘ಜಗತ್ತಿನ ಸಾಮಾಜಿಕ, ಆರ್ಥಿಕ, ರಾಜಕೀಯ ಸೇರಿದಂತೆ ಎಲ್ಲ ಸಮಸ್ಯೆಗಳಿಗೆ ಶರಣರ ವಚನಗಳಲ್ಲಿ ಪರಿಹಾರ ಇದೆ. ಆದ್ದರಿಂದ ವಚನಗಳನ್ನು ಅಧ್ಯಯನ ಮಾಡಿ ಬದುಕು ಹಸನಾಗಿಸಿಕೊಳ್ಳಬೇಕು’ ಎಂದು ಶರಣ ಸಂಸ್ಕೃತಿ ಪ್ರಸಾರ ವೇದಿಕೆಯ ಸಂಚಾಲಕ ಸಿದ್ರಾಮಪ್ಪ ಕಪಲಾಪುರೆ ಹೇಳಿದರು.

ADVERTISEMENT

ಜಾನಪದ ಗಾಯಕಿ ಸೂಗಮ್ಮ ಹಿಪ್ಪಳಗಾಂವ್, ಸಿದ್ದರಾಮಯ್ಯ ಸ್ವಾಮಿ, ಕಮಲಾಬಾಯಿ, ಯಲ್ಲಾಲಿಂಗ ಕಾಲೊನಿ, ಕಮಲಾಬಾಯಿ ಬಕಚೌಡಿ, ಕಂಟೆಪ್ಪ ಗಂಧಿಗುಡಿ, ನಾಗಮ್ಮ ಕುಂಬಾರ, ಮಡೆಮ್ಮ, ವಿಜಯಲಕ್ಷ್ಮಿ, ಸಂಗಮ್ಮ, ಲಲಿತಾಬಾಯಿ, ಉಮಾ ಅಲಿಯಾಬಾದ್, ಶಾರದಾಬಾಯಿ ಅವರನ್ನು ಶರಣ ಸಂಸ್ಕೃತಿ ಪ್ರಸಾರ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.

ಓಂಕಾರ ಮೂಲಗೆ, ಸಂಜು ಪಾಂಚಾಳ, ಬಸವರಾಜ ಯಲ್ಲಾಲಿಂಗ ಕಾಲೊನಿ, ಮಡಿವಾಳಪ್ಪ ಔರಾದ್, ಓಂಕಾರ ಕಮಲಾಪುರ, ಶಿವಶರಣಪ್ಪ ಕೊಳಾರ, ಅಣೆಪ್ಪ ಶೇರಿಕಾರ, ಸೂರ್ಯಕಾಂತ ಸ್ವಾಮಿ, ಹಣಮಂತ ಟೆಕುರೆ, ಅಣ್ಣೆಪ್ಪ ಶೇರಿಕಾರ, ಸೂರ್ಯಕಾಂತ ಸ್ವಾಮಿ ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ಹಾಲಹಳ್ಳಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.