ADVERTISEMENT

‘ವಿದ್ಯಾರ್ಥಿಗಳಿಗೆ ಪರೀಕ್ಷಾ ಪದ್ಧತಿ ತಿಳಿವಳಿಕೆ ನೀಡಿ’

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜ ಗೌನಳ್ಳಿ ಶಿಕ್ಷಕರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2017, 5:59 IST
Last Updated 7 ಮಾರ್ಚ್ 2017, 5:59 IST
ಬೀದರ್‌: 2017ನೇ ಸಾಲಿನ ಎಸ್ಸೆಸ್ಸೆಲ್ಸಿ  ಪರೀಕ್ಷೆ ಪದ್ಧತಿಯಲ್ಲಿ ಆಗಿರುವ ಮಾರ್ಪಾಟುಗಳ ಬಗೆಗೆ ವಿದ್ಯಾರ್ಥಿಗಳಿಗೆ ಸರಿಯಾದ ತಿಳಿವಳಿಕೆ ನೀಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜ ಗೌನಳ್ಳಿ  ಶಿಕ್ಷಕರಿಗೆ ಸೂಚಿಸಿದ್ದಾರೆ.
 
ಮಾರ್ಚ್ 30ರಿಂದ ಪ್ರಾರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ನಿಯಮಗಳಲ್ಲಿ ಕೆಲವು ಮಾರ್ಪಾಟುಗಳಾಗಿವೆ.  ಪರೀಕ್ಷೆಗಳು ನಿಗದಿತ ದಿನಾಂಕದಂದು ಬೆಳಿಗ್ಗೆ 9.30ಕ್ಕೆ ಆರಂಭವಾಗಲಿದೆ.  ತಡವಾಗಿ ಬರುವ ಅಭ್ಯರ್ಥಿಗಳಿಗೆ ಪರೀಕ್ಷಾ ಕೊಠಡಿಗೆ ಹಾಜರಾಗಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.
 
ಪ್ರಸಕ್ತ ಸಾಲಿನ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಗಳನ್ನು ಪ್ರತ್ಯೇಕವಾಗಿ ಮುದ್ರಿಸಿ ವಿತರಿಸಲಾಗುವುದು. ಪ್ರಶ್ನೆ ಹಾಗೂ ಉತ್ತರ ಪತ್ರಿಕೆಗಳು ಪ್ರತ್ಯೇಕವಾಗಿರುವುದರಿಂದ ಬರೆದಿರುವ ಉತ್ತರವು ತಪ್ಪೆಂದು ವಿದ್ಯಾರ್ಥಿಗಳಿಗೆ ತಿಳಿದಾಗ, ಮೊದಲು ಬರೆದಿರುವ ಉತ್ತರವನ್ನು ಕೆಡಿಸಿ ಇನ್ನೊಂದು ಹಾಳೆಯಲ್ಲಿ ಸರಿಯಾದ ಉತ್ತರ ಬರೆಯಲು ಅವಕಾಶ ಇದೆ.
 
ಪರೀಕ್ಷೆ ಪ್ರಾರಂಭವಾದ 30 ನಿಮಿಷದ ವರೆಗೆ ಪರೀಕ್ಷಾ ಕೊಠಡಿಯಿಂದ ವಿದ್ಯಾರ್ಥಿಗಳಿಗೆ ಹೊರಗೆ ಹೋಗಲು ಅನುಮತಿ ನೀಡಲಾಗದು. 30 ನಿಮಿಷದ ನಂತರ ಹೊರಗೆ ಹೋದ ಮೇಲೆ ಕೊಠಡಿಯೊಳಗೆ  ಪ್ರವೇಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. 
 
ವಿದ್ಯಾರ್ಥಿಗಳು ಮುಖ್ಯ ಉತ್ತರ ಪತ್ರಿಕೆಯ ಮುಖಪುಟ ಹಾಗೂ ಹೆಚ್ಚುವರಿ ಪುರವಣಿ ಉತ್ತರ ಪತ್ರಿಕೆಯಲ್ಲಿ ತಮ್ಮ ನೋಂದಣಿ ಸಂಖ್ಯೆಯನ್ನು ಸ್ಪಷ್ಟವಾಗಿ ಬರೆಯಬೇಕು. ನೋಂದಣಿ ಸಂಖ್ಯೆಯ ತಿದ್ದುಪಡಿಯಲ್ಲಿ ಕೊಠಡಿ ಮೇಲ್ವಿಚಾರಕರ ಸಹಿ ಪಡೆದು ದೃಢೀಕರಿಸಿಕೊಳ್ಳಬೇಕು.  ವಸ್ತುನಿಷ್ಠ ಮಾದರಿ ಪ್ರಶ್ನೆಗಳಿಗೆ ಅಭ್ಯರ್ಥಿಯು ಸರಿಯಾದ ಉತ್ತರ ಆಯ್ಕೆ ಮಾಡಿಕೊಂಡು  ಬರೆಯಬೇಕು. ಬಹು ಆಯ್ಕೆ ಪ್ರಶ್ನೆಗಳಿಗೆ ಒಂದು ಬಾರಿ ಮಾತ್ರ ಉತ್ತರಿಸಬೇಕು.
 
ಈ ಪ್ರಶ್ನೆಗಳಿಗೆ ಒಂದು ಬಾರಿಗಿಂತ ಹೆಚ್ಚು ಸಲ ಉತ್ತರಿಸಿದರೆ, ಮೊದಲನೇ ಉತ್ತರವನ್ನು ಮಾತ್ರ ಮೌಲ್ಯಮಾಪನಕ್ಕೆ ಪರಿಗಣಿಸಲಾಗುತ್ತದೆ. ಹೆಚ್ಚುವರಿ ಪುರವಣಿ ಉತ್ತರ ಪತ್ರಿಕೆ ಪಡೆದಲ್ಲಿ ಮುಖ್ಯ ಉತ್ತರ ಪತ್ರಿಕೆಯ ಮುಖಪುಟದಲ್ಲಿ ಪುರವಣಿ ಉತ್ತರ ಪತ್ರಿಕೆಯ ಕ್ರಮ ಸಂಖ್ಯೆ ಬರೆಯಬೇಕು.  ಮುಖ್ಯ ಉತ್ತರ ಪತ್ರಿಕೆಯ ಕ್ರಮ ಸಂಖ್ಯೆ ಪುರವಣಿ ಉತ್ತರ ಪತ್ರಿಕೆಯಲ್ಲಿ ನಿಗದಿತ ಸ್ಥಳದಲ್ಲಿಯೇ ಬರೆಯಬೇಕು.
 
ವಿದ್ಯಾರ್ಥಿಗಳು  ಪೆನ್ಸಿಲ್‌ನಿಂದ ಉತ್ತರ ಬರೆಯುವಂತಿಲ್ಲ. ನಕ್ಷೆಗಳು, ರೇಖಾಚಿತ್ರಗಳು ಮತ್ತು ಭೂಪಟಗಳನ್ನು ಮಾತ್ರ ಸೀಸದ ಕಡ್ಡಿಯಿಂದ ಅಂದವಾಗಿ ಸ್ಪಷ್ಟವಾಗಿ ಬರೆಯಬೇಕು. ಉತ್ತರ ಪತ್ರಿಕೆಯ ಎರಡು ಭಾಗವನ್ನು ಉಪಯೋಗಿಸಿಕೊಂಡು, ನೀಲಿ ಅಥವಾ ಕಪ್ಪು ಶಾಹಿಯ ಬಾಲ್ ಪೆನ್ನಿನಿಂದ ಉತ್ತರಿಸಬೇಕು. ಬೇರೆ ಶಾಹಿಯ ಪೆನ್ನು ಬದಲಾಯಿಸಲು ಕೊಠಡಿ ಮೇಲ್ವಿಚಾರಕರ ಸಹಿಯೊಂದಿಗೆ ಅನುಮತಿ ಪಡೆಯಬೇಕು ಎಂದು ತಿಳಿಸಿದ್ದಾರೆ.
 
ಈ ಅಂಶಗಳ ಬಗೆಗೆ ಶಾಲಾ ಹಂತದಲ್ಲಿ ನಡೆಯುವ ಪೂರ್ವ ಸಿದ್ಧತಾ ಪರೀಕ್ಷೆಯ ಮೊದಲು ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ ಅದರಂತೆ ಪೂರ್ವಸಿದ್ಧತಾ ಪರೀಕ್ಷೆ ನಡೆಸಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಕುರಿತು ಕಡ್ಡಾಯವಾಗಿ ತಮ್ಮ ಹಂತದಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢ ಶಾಲಾ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಬೇಕು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.