ADVERTISEMENT

ವೈದ್ಯರ ಶ್ರಮ: ತ್ರಿವಳಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 6:29 IST
Last Updated 2 ಸೆಪ್ಟೆಂಬರ್ 2017, 6:29 IST
ಬೀದರ್‌ನ ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳು
ಬೀದರ್‌ನ ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳು   

ಬೀದರ್‌: ಕಡಿಮೆ ತೂಕ ಹಾಗೂ ದಮ್ಮಿನಿಂದ ಬಳಲುತ್ತಿದ್ದ ತ್ರಿವಳಿ ಇಲ್ಲಿನ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸ್ಟೇಟ್ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದ್ದಾರೆ.

ಭಾಲ್ಕಿ ತಾಲ್ಲೂಕಿನ ಧನ್ನೂರಾ(ಎಚ್) ಗ್ರಾಮದ ಮುತ್ತಮ್ಮ ಶಿವಕಾಂತ ಬಂಧು (25) ಆಗಸ್ಟ್ 24ರಂದು ನಗರದ ಆಸ್ಪತ್ರೆಯೊಂದರಲ್ಲಿ ಎರಡು ಗಂಡು ಹಾಗೂ ಒಂದು ಹೆಣ್ಣು ಮಗು ಸೇರಿ ತ್ರಿವಳಿಗೆ ಜನ್ಮ ನೀಡಿದ್ದರು. ಸಾಮಾನ್ಯವಾಗಿ ಆರೋಗ್ಯವಂತ ಮಕ್ಕಳ ತೂಕ ಜನಿಸಿದ ಸಂದರ್ಭದಲ್ಲಿ ಎರಡೂವರೆ ಕೆ.ಜಿ.ಗಿಂತ ಹೆಚ್ಚು ಇರುತ್ತದೆ.

ಆದರೆ, ಮುತ್ತಮ್ಮ ಅವರ ಎರಡು ಗಂಡು ಮಕ್ಕಳ ತೂಕ ಒಂದೂವರೆ ಕೆ.ಜಿ. ಹಾಗೂ ಹೆಣ್ಣು ಮಗುವಿನ ತೂಕ 1 ಕೆಜಿ 400 ಗ್ರಾಂ. ಮಾತ್ರ ಇತ್ತು. ಅಲ್ಲದೆ, ಅವರಿಗೆ ದಮ್ಮು ಕೂಡ ಕಾಡುತ್ತಿತ್ತು.

ADVERTISEMENT

ನಾಲ್ಕು ದಿನ ಅದೇ ಆಸ್ಪತ್ರೆಯಲ್ಲಿ ಕಳೆದ ಮುತ್ತಮ್ಮ ದಂಪತಿ ಮಕ್ಕಳ ಸುರಕ್ಷತೆ ಬಗೆಗೆ ಚಿಂತಿತರಾಗಿದ್ದರು. ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯಲ್ಲಿ ಮಕ್ಕಳ ಚಿಕಿತ್ಸೆ ಹಾಗೂ ಆರೈಕೆಗೆ ಅತ್ಯಾಧುನಿಕ ಸೌಕರ್ಯ ಇರುವುದನ್ನು ಅರಿತು ಆಗಸ್ಟ್ 29ರಂದು ತ್ರಿವಳಿಗಳನ್ನು ನಾಗಮಾರಪಳ್ಳಿ ಆಸ್ಪತ್ರೆಗೆ ದಾಖಲಿಸಿದರು.

ಮಕ್ಕಳ ತಜ್ಞ ಡಾ. ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದ ತಂಡ ನಾಲ್ಕು ದಿನ ತ್ರಿವಳಿಗಳನ್ನು ನವಜಾತ ಶಿಶುಗಳ ವಿಶೇಷ ಚಿಕಿತ್ಸಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಒದಗಿಸಿತು. ಅದರ ಫಲವಾಗಿ ಮಕ್ಕಳಲ್ಲಿ ಚೇತರಿಕೆ ಕಂಡು ಬಂದಿತು. ತೂಕ ಹೆಚ್ಚತೊಡಗಿತು. ದಮ್ಮು ಸಂಪೂರ್ಣ ಕಡಿಮೆಯಾಯಿತು.

ತ್ರಿವಳಿಗಳ ತಾಯಿ ಮುತ್ತಮ್ಮ , ‘ನನಗೆ ಮೊದಲ ಎರಡು ಹೆರಿಗೆಯಲ್ಲಿ ಇಬ್ಬರು ಗಂಡು ಮಕ್ಕಳು ಜನಿಸಿದ್ದವು. ಮೂರನೇ ಹೆರಿಗೆಯಲ್ಲಿ ತ್ರಿವಳಿ ಜನಿಸಿವೆ. ದೇವರು ಒಟ್ಟಿಗೆ ಮೂರು ಮಕ್ಕಳನ್ನು ನೀಡಿದ್ದಕ್ಕೆ ಖುಷಿಯಾಗಿದೆ’ ಎಂದು ತಿಳಿಸಿದರು.

‘ತ್ರಿವಳಿ ಇರುವುದು ಐದನೇ ತಿಂಗಳಲ್ಲಿ ನಡೆಸಿದ ಸ್ಕ್ಯಾನಿಂಗ್‌ನಲ್ಲಿ ಗೊತ್ತಾಗಿತ್ತು. ನಂತರ ಸಂಪೂರ್ಣ ವಿಶ್ರಾಂತಿ ಪಡೆದೆ. 8 ತಿಂಗಳು 8 ದಿನಗಳಲ್ಲೇ ತ್ರಿವಳಿ ಜನಿಸಿದ್ದಾರೆ’ ಎಂದು ಹೇಳಿದರು.

‘ಆಸ್ಪತ್ರೆಯಲ್ಲಿ ಸಕಾಲಕ್ಕೆ ನೀಡಿದ ಚಿಕಿತ್ಸೆಯಿಂದ ಮಕ್ಕಳು ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ನಾಳೆ ಬಿಡುಗಡೆ ಹೊಂದಲಿದ್ದಾರೆ’ ಎಂದು ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಕೃಷ್ಣರೆಡ್ಡಿ ತಿಳಿಸಿದರು. ‘ಆಸ್ಪತ್ರೆಯಲ್ಲಿ ಜನಜಾತ ಶಿಶುಗಳ ಚಿಕಿತ್ಸೆಗಾಗಿ ವಿಶೇಷ ಘಟಕವಿದೆ. ಹೀಗಾಗಿ ಜಿಲ್ಲೆಯ ಜನ ತುರ್ತು ಚಿಕಿತ್ಸೆಗಾಗಿ ಬೇರೆಡೆಗೆ ಹೋಗಬೇಕಾದ ಅಗತ್ಯವಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.