ADVERTISEMENT

ಶೂನ್ಯ ಫಲಿತಾಂಶ: ಭವಿಷ್ಯಕ್ಕೆ ಅಪಾಯ

ಚಂದ್ರಕಾಂತ ಮಸಾನಿ
Published 25 ಮೇ 2016, 11:23 IST
Last Updated 25 ಮೇ 2016, 11:23 IST
ಬೀದರ್‌ ಹೊರವಲಯದಲ್ಲಿರುವ ನೂರ್‌  ಪ್ರೌಢಶಾಲೆ
ಬೀದರ್‌ ಹೊರವಲಯದಲ್ಲಿರುವ ನೂರ್‌ ಪ್ರೌಢಶಾಲೆ   

ಬೀದರ್‌: ಜಿಲ್ಲೆಯಲ್ಲಿ ಕೆಲ ಅನುದಾನ ರಹಿತ ಶಾಲೆಗಳು 20 ವರ್ಷಗಳಿಂದ ಬಾಡಿಗೆ ಮನೆಗಳಲ್ಲೇ ಇವೆ. ಕೆಲವು ಶಾಲೆಗಳು ಬಯಲಿನಲ್ಲಿ ಹಾಕಿರುವ ತಗಡಿನ ಶೆಡ್‌ಗಳಲ್ಲಿ ನಡೆಯುತ್ತಿವೆ. ಕೆಲವು ಶಿಕ್ಷಣ ಸಂಸ್ಥೆಗಳು ಅನುದಾನ ಪಡೆಯುವ ಆಸೆಯಿಂದ  ಪ್ರೌಢಶಾಲೆ ಗಳನ್ನು ಮುಂದುವರಿಸಿರು ವುದು ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಪಾಯ ತಂದೊಡ್ಡಿವೆ.

ಒಂದು ದಶಕದಿಂದ ಜಿಲ್ಲೆಯಲ್ಲಿ ಅನುದಾನ ರಹಿತ ಕೆಲ ಶಾಲೆಗಳು ಶೂನ್ಯ ಫಲಿತಾಂಶ ಪಡೆಯುತ್ತಲೇ ಇವೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 2007ರಲ್ಲಿ ಜಿಲ್ಲೆಯ 20 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿದ್ದವು. 2014ರಿಂದ ಬಸವಕಲ್ಯಾಣ ತಾಲ್ಲೂಕಿನ  ಪರ್ತಾಪುರದ ಮಹಾತ್ಮ ಗಾಂಧಿ ಪ್ರೌಢ ಶಾಲೆಯ ಒಬ್ಬ ವಿದ್ಯಾರ್ಥಿಯೂ ಪಾಸಾಗಿಲ್ಲ. ಆದರೂ ಈ ಶಾಲೆಗೆ ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಕಳೆದ ಬಾರಿ ಆರು ಶಾಲೆಗಳು ಶೂನ್ಯ ಫಲಿತಾಂಶ ಪಡೆದಿದ್ದವು. ಈ ಬಾರಿ ಜಿಲ್ಲೆಯಲ್ಲಿ ಒಟ್ಟು ಐದು ಶಾಲೆಗಳು ಕಳಪೆ ಫಲಿತಾಂಶ ಪಡೆದಿವೆ.

‘ಕಳೆದ ವರ್ಷ ಶೂನ್ಯ ಫಲಿತಾಂಶ ಪಡೆದ ಭಾಲ್ಕಿ ತಾಲ್ಲೂಕಿನ ಮೊರಂಬಿಯ ಒಂದು ಶಾಲೆ ಮುಚ್ಚಲಾಗಿದೆ. ಮಕ್ಕಳ ಹಿತದೃಷ್ಟಿಯಿಂದ ಒಂದು ವರ್ಷಕ್ಕೆ ಸೀಮಿತವಾಗಿ ತಾತ್ಕಾಲಿಕ ಮಾನ್ಯತೆ ನೀಡಬೇಕು ಎಂದು 2015ರಲ್ಲಿ  ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು. ಹೀಗಾಗಿ ಷರತ್ತು ವಿಧಿಸಿ ಒಂದು ವರ್ಷದ ಮಟ್ಟಿಗೆ ಐದು ಶಾಲೆಗಳಿಗೆ ಅನುಮತಿ ನೀಡಲಾಗಿತ್ತು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಎನ್‌.ಚಂದ್ರೇಗೌಡ ಹೇಳುತ್ತಾರೆ.

ಖಾಸಗಿ ಶಾಲೆ ಆರಂಭಿಸಬೇಕಾದರೆ ಕನಿಷ್ಠ ಒಂದು ಎಕರೆ ಸ್ವಂತ ಭೂಮಿ ಅಥವಾ ಶಿಕ್ಷಣ ಸಂಸ್ಥೆಯ ಹೆಸರಲ್ಲಿ  30 ವರ್ಷದ ಅವಧಿಗೆ ಭೂಮಿಯನ್ನು  ಲೀಸ್‌ ಪಡೆದಿರಬೇಕು. 18X20 ಅಡಿ ಅಳತೆಯ ಕನಿಷ್ಠ ಒಂಬತ್ತು ಕೊಠಡಿಗಳಿರಬೇಕು. ಬಾಲಕಿಯರು ಹಾಗೂ ಬಾಲಕರಿಗೆ ತಲಾ 4 ಶೌಚಾಲಯ ಇರಬೇಕು. ಕುಡಿಯುವ ನೀರು ಸೇರಿದಂತೆ ಎಲ್ಲ ಸೌಲಭ್ಯಗಳು ಇರಬೇಕು. ಪ್ರಯೋಗಾಲಯ, ಶಿಕ್ಷಕರ ಕೊಠಡಿ, ಮುಖ್ಯಶಿಕ್ಷಕರ ಕೊಠಡಿ ಪ್ರತ್ಯೇಕವಾಗಿ ಇರಬೇಕು. ಆದರೆ ಬಹುತೇಕ ಅನುದಾನ ರಹಿತ ಶಾಲೆಗಳಲ್ಲಿ ಈ ಸೌಲಭ್ಯವೇ ಇಲ್ಲ.

‘ಶಾಲೆಗಳ  ಶೂನ್ಯ ಫಲಿತಾಂಶಕ್ಕೆ  ಅಗತ್ಯ  ಮೂಲಸೌಕರ್ಯಗಳ ಕೊರ ತೆಯೇ  ಕಾರಣ ಎನ್ನುವುದು ಕಂಡು ಬಂದಿದೆ. ಶೂನ್ಯ ಹಾಗೂ ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳಿಗೆ ಭೇಟಿ ನೀಡಿ ವರದಿ ನೀಡುವಂತೆ ಸಂಬಂಧಪಟ್ಟ ಬಿಇಒಗಳಿಗೆ ಸೂಚನೆ ನೀಡಿದ್ದೇನೆ. 26ರಿಂದ ಕಳಪೆ ಸಾಧನೆ ತೋರಿದ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುತ್ತೇನೆ’ ಎಂದು ಹೇಳುತ್ತಾರೆ.

‘ರಾಜಕಾರಣಿಗಳ ನೆರವಿನಿಂದ ಶಿಕ್ಷಣ ಸಂಸ್ಥೆಗಳ ಪ್ರಮುಖರು ಬೆಂಗಳೂರಿಗೆ ತೆರಳಿ ಅಲ್ಲಿಂದಲೇ ಅನುಮತಿ ಪಡೆಯು ತ್ತಾರೆ. ಅನುದಾನದ ಆಸೆಗಾಗಿ ಬಡ ಮಕ್ಕಳ ಭವಿಷ್ಯ ಹಾಳು ಮಾಡುತ್ತಾರೆ. ಜತೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವ ಹಿಸದಿರುವುದೇ ಈ ಎಲ್ಲ ಅನಾಹುತಕ್ಕೆ ಕಾರಣ’ ಎಂದು ವಕೀಲ ಮನ್ಮಥ ಮೀನಕೇರಾ ಹೇಳುತ್ತಾರೆ.

ಶೂನ್ಯ ಫಲಿತಾಂಶಕ್ಕೆ ನಿರಾಸಕ್ತಿ ಕಾರಣ : ನಗರದ  ಹೊರವಲಯದಲ್ಲಿರುವ ನೂರ್‌ ಹೈಸ್ಕೂಲ್‌ ಸುಸಜ್ಜಿತ ಕಟ್ಟಡ ಹೊಂದಿದೆ. ಇಲ್ಲಿ ಎಲ್ಲ ವಿಷಯಗಳ ಶಿಕ್ಷಕರೂ ಇದ್ದಾರೆ. ನಗರದಿಂದ ದೂರ ಇರುವ ಕಾರಣಕ್ಕೆ ಇಲ್ಲಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ   ಕುಸಿದಿದೆ. ಶಿಕ್ಷಕರ ನಿರಾ ಸಕ್ತಿ ಹಾಗೂ ವಿದ್ಯಾರ್ಥಿಗಳ ನಿರುತ್ಸಾಹ ದಿಂದಾಗಿ ಶಾಲೆ ಫಲಿತಾಂಶ ಶೂನ್ಯಕ್ಕೆ ಇಳಿದಿದೆ.

2002ರಲ್ಲಿಯೇ ಆರಂಭವಾಗಿರುವ ಈ ಶಾಲೆಯಲ್ಲಿ ಪ್ರಸ್ತುತ ಎಂಟನೆಯ ತರಗತಿಯಲ್ಲಿ 16, ಒಂಬತ್ತನೆಯ ತರಗತಿ ಯಲ್ಲಿ 15 ವಿದ್ಯಾರ್ಥಿಗಳು ಇದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾದ ಎಲ್ಲ ಐದು ಮಕ್ಕಳು ಅನುತ್ತೀರ್ಣರಾಗಿದ್ದಾರೆ. ಐವರಲ್ಲಿ ಮೂವರು ಬಾಹ್ಯ ವಿದ್ಯಾರ್ಥಿಗಳು ಎನ್ನುವುದು ವಿಶೇಷ. ಮೂಲ ಸೌಕರ್ಯದ ಕೊರತೆ ಇಲ್ಲದಿದ್ದರೂ ಬೋಧಕರ ಹಾಗೂ ವಿದ್ಯಾರ್ಥಿಗಳಲ್ಲಿನ  ನಿರಾಸಕ್ತಿಯು ಕಳಪೆ ಸಾಧನೆಗೆ ಎಡೆ ಮಾಡಿಕೊಟ್ಟಿದೆ.

ನಗರದ ಹೊರವಲಯದಲ್ಲಿರುವ ಕಾರಣ ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. 14 ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ನಮ್ಮ ಶಾಲೆ ಶೂನ್ಯ ಫಲಿತಾಂಶ ಪಡೆದಿದೆ. 2012 ಹಾಗೂ 2013ರಲ್ಲಿ ತಲಾ10 ವಿದ್ಯಾರ್ಥಿಗಳಿದ್ದರೂ ನಾಲ್ಕು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. 2014ರಲ್ಲಿ  8ರ ಪೈಕಿ 4, 2015ರಲ್ಲಿ  6 ವಿದ್ಯಾರ್ಥಿಗಳ ಪೈಕಿ ಒಬ್ಬರು ಮಾತ್ರ ಪಾಸಾಗಿದ್ದಾರೆ ಎಂದು ನೂರ್‌ ಪ್ರೌಢಶಾಲೆಯ (ಕನ್ನಡ ಮಾಧ್ಯಮ) ಮುಖ್ಯ ಶಿಕ್ಷಕಿ ರಾಹಿ ವಿವರಿಸುತ್ತಾರೆ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆಯನ್ನು ಮುಂದುವರಿಸಿದ್ದೇವೆ. ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ನೂರ್‌ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಮಹಮ್ಮದ್‌ ಇಸೂಫ್‌ಖಾನ್‌ ಹೇಳುತ್ತಾರೆ.

ಮನೆಯೇ ಪಾಠ ಶಾಲೆ
ಔರಾದ್: ತಾಲ್ಲೂಕಿನ ಕೊರೆಕಲ್ ಗ್ರಾಮದ ಛತ್ರಪತಿ ಶಿವಾಜಿ ಮಹಾರಾಜ ಪ್ರೌಢ ಶಾಲೆ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೂನ್ಯ ಸಾಧನೆ ಮಾಡಿದ ಅಪಕೀರ್ತಿ ಪಡೆದಿದೆ.

16 ವರ್ಷಗಳಿಂದ ಯಾರ ಕಣ್ಣಿಗೆ ಕಾಣದ ಈ ಶಾಲೆ ಈಗ ಶೂನ್ಯ ಫಲಿತಾಂಶದಿಂದ  ಸುದ್ದಿಯಲ್ಲಿ ಇದೆ. ಶಾಲೆ ಮುಖ್ಯಸ್ಥರಿಗೆ ನೋಟಿ ಜಾರಿ ಮಾಡಿ ಮುಚ್ಚುವುದಾಗಿ ಬೆದರಿಕೆ ಹಾಕುತ್ತಿ ದ್ದಾರೆ. ಶಿಕ್ಷಣ ಇಲಾಖೆ ಈ ಕ್ರಮಕ್ಕೆ ಛತ್ರಪತಿ ಶಿವಾಜಿ ಮಹಾ ರಾಜ ಪ್ರೌಢ ಶಾಲೆ ಅಧ್ಯಕ್ಷ ಕೇಶವರಾವ ಬಿರಾದಾರ ಆಕ್ಷೇಪ ವ್ಯಕ್ತಪಡಿಸದ್ದಾರೆ.

ಶೂನ್ಯ ಫಲಿತಾಂಶ ಬಂದಿರುವು ದಕ್ಕೆ ನಮಗೂ ವಿಷಾದವಿದೆ. ಆದರೆ ಸರ್ಕಾರದ ಒಂದು ಪೈಸೆ ನೆರವಿಲ್ಲದೆ ಶಾಲೆ ನಡೆಸಿಕೊಂಡು ಬರುತ್ತಿದ್ದೇವೆ. ತೀರಾ ಬಡವರು, ಅರ್ಧದಲ್ಲಿ ಶಾಲೆ ಬಿಟ್ಟವರು, ಕೆಲಸ ಅರಸಿ ಗುಳೆ ಹೊರಟ ಮಕ್ಕಳು ನಮ್ಮಲ್ಲಿ ಇದ್ದಾರೆ. ಅವರಿಂದ ನಾವು ಏನನ್ನೂ ಅಪೇಕ್ಷೆ ಪಡದೆ ಅವರ ಪರೀಕ್ಷಾ ಶುಲ್ಕ ಕೂಡ ನಾವೇ ಭರಿಸುತ್ತೇವೆ ಎನ್ನುತ್ತಾರೆ ಬಿರಾದಾರ.

ಮರಾಠಿ ಮಾಧ್ಯಮದ ಈ ಶಾಲೆ ಯಲ್ಲಿ ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕುಳಿತ ಎಲ್ಲ 16 ವಿದ್ಯಾರ್ಥಿಗಳು ಅನುತ್ತೀ ರ್ಣರಾಗಿದ್ದಾರೆ. 8,9,10 ಒಟ್ಟು ಮೂರು ತರಗತಿಗಳಲ್ಲಿ 75 ಮಕ್ಕಳ ದಾಖಲಾತಿ ಇದೆ. ಆದರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿ ಆಗಿರುವುದರಿಂದ ಈಗ ನಮ್ಮಲ್ಲಿ ಎರಡು ತರಗತಿ ಮಾತ್ರ ಇವೆ. ಮನೆ ಆವರಣದಲ್ಲಿ ಎರಡು ಕೊಠಡಿ ಕಟ್ಟಿ ಅಲ್ಲಿ ತರಗತಿ ನಡೆಸಲಾಗುತ್ತದೆ. ಮೂವರು ಶಿಕ್ಷಕರು ಎಲ್ಲ ಆರು ವಿಷಯ ಬೋಧಿಸಬೇಕಾ ಗುತ್ತದೆ. ಸಂಸ್ಥೆ ಅಧ್ಯಕ್ಷರು ನಮಗೆ ವೇತನ ನೀಡುತ್ತಾರೆ. ಶಾಲೆ ಅನುದಾನಕ್ಕೆ ಒಳಪಟ್ಟು ನೌಕರಿ ಭದ್ರತೆ ಸಿಗುವುದೆಂಬ ಆಸೆಯಿಂದ ಕಡಿಮೆ ವೇತನದಲ್ಲಿ ದುಡಿಯುತ್ತಿದ್ದೇವೆ ಎಂದು ಅಲ್ಲಿಯ ಶಿಕ್ಷಕರೊಬ್ಬರು ಹೇಳುತ್ತಾರೆ.
ನಮಗೆ ಶಾಲೆ ನಡೆಸಿ ಮಕ್ಕಳ ಭವಿಷ್ಯ ಹಾಳು ಮಾಡುವ ಉದ್ದೇಶ ವಿಲ್ಲ. ಇಷ್ಟು ವರ್ಷ ಕಷ್ಟಪಟ್ಟು ನಡೆಸಿದ ಶಾಲೆ ಮುಚ್ಚಿ ದರೆ ಮಕ್ಕಳ ಭವಿಷ್ಯ ಹಾಳಾಗುತ್ತದೆ. ನಮಗೂ ಕೆಟ್ಟ ಹೆಸರು ಬರುತ್ತದೆ. ಮಕ್ಕಳಿಗೆ ತೊಂದರೆ ಯಾಗದಂತೆ ನೋಡಿ ಕೊಳ್ಳು ತ್ತೇವೆ ಎನ್ನುತ್ತಾರೆ ಸಂಸ್ಥೆ ಪದಾಧಿ ಕಾರಿಗಳು.

ಪರಿಣಿತ ಶಿಕ್ಷಕರು ಮತ್ತು ಸೌಲಭ್ಯ ವಂಚಿತ ಶಾಲೆಗಳಿಂದ ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಫಲಿತಾಂಶ ನಿರೀಕ್ಷೆ ಅಸಾಧ್ಯ. ಅಂಥ ಶಾಲೆಗಳನ್ನು ಮುಚ್ಚುವುದು ಸೂಕ್ತ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಮ್ಮದ್ ಗುಲ್ಷನ್‌ ಹೇಳಿದರು.
- ಮನ್ಮತಪ್ಪ ಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT