ADVERTISEMENT

ಹೆಸರು ನೋಂದಾಯಿಸಲು ನೂಕುನುಗ್ಗಲು

​ಪ್ರಜಾವಾಣಿ ವಾರ್ತೆ
Published 16 ಮೇ 2017, 8:42 IST
Last Updated 16 ಮೇ 2017, 8:42 IST

ಔರಾದ್: ಮುಖ್ಯಮಂತ್ರಿ ಕೌಶಲ್ಯಾಭಿವೃದ್ಧಿ ಯೋಜನೆಯಡಿ ಇಲ್ಲಿಯ ತಾಲ್ಲೂಕು ಪಂಚಾಯಿತಿಯಲ್ಲಿ ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇರಿದ್ದರಿಂದ ನೂಕುನುಗ್ಗಲು ಎದುರಾಯಿತು.

ನೌಕರಿ ಕೊಡಿಸುತ್ತೇವೆ, ನಿರುದ್ಯೋಗ ಭತ್ಯೆ ನೀಡಲಾಗುತ್ತದೆ ಎಂದು ನಂಬಿಸಿ ಯುವಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಈ ಕಾರಣ ಯುವತಿಯರು ಸೇರಿದಂತೆ ತಾಲ್ಲೂಕಿನ ಎಲ್ಲೆಡೆಯಿಂದ ಅಪಾರ ಸಂಖ್ಯೆಯ ಯುವಕರು ಸೇರಿದ ಪರಿಣಾಮ ಅರ್ಜಿ ಪಡೆಯಲು, ಹೆಸರು ನೋಂದಾಯಿಸಲು ಒಬ್ಬರ ಮೇಲೆ ಒಬ್ಬರು ಬೀಳಬೇಕಾಯಿತು. ಇದರಿಂದ ಸ್ಥಳದಲ್ಲಿ ಗದ್ದಲ, ಗೊಂದಲ ಉಂಟಾದಾಗ ಪೊಲೀಸರು ಬಂದು ಸಮಾಧಾನ ಮಾಡಿದರು.

‘ನಿಮಗೆ ನಿರುದ್ಯೋಗ ಭತ್ಯೆ ಕೊಡಿಸಲಾಗುತ್ತದೆ ಎಂದು ಹೇಳಿ ನಮ್ಮನ್ನು ಇಲ್ಲಿಗೆ ಕರೆಸಲಾಗಿದೆ. ಆದರೆ, ಇಲ್ಲಿ ಇರುವುದೇ ಬೇರೆ’ ಎಂದು ಬಳತ ಗ್ರಾಮದ ಯುವತಿಯರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಉದ್ಘಾಟಿಸಿದ ಶಾಸಕ ಪ್ರಭು ಚವಾಣ್‌, ‘ಯುವಕರಿಗೆ ಇದೊಂದು ಅತ್ಯುತ್ತಮ ಕಾರ್ಯಕ್ರಮವಾಗಿದೆ. ಯುವಕರು ಇದರ ಲಾಭ ಪಡೆಯಬೇಕು’ ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿಗಳ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ ವಿವರ ನೀಡಿದ ಪ್ರಾಂಶುಪಾಲ ಲಕ್ಷ್ಮಿಕಾಂತ, ‘ರಾಜ್ಯದಲ್ಲಿ ಐದು ಲಕ್ಷ ಯುವಕರಿಗೆ ವಿವಿಧ ಕೌಶಲ ತರಬೇತಿ ನೀಡಿ ಸುಮಾರು 1 ಲಕ್ಷ ಯುವಕರಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ’ ಎಂದು ಹೇಳಿದರು.

ಪಿಡಿಒ ಶಿವಕುಮಾರ ಘಾಟೆ ಮಾತನಾಡಿ, ‘18ರಿಂದ 35 ವರ್ಷದೊಳಗಿನ ಯುವಕ, ಯುವತಿಯರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿದರೆ ಅವರ ಅರ್ಹತೆ ಅನುಗುಣವಾಗಿ ತರಬೇತಿ ನೀಡಲಾಗುತ್ತದೆ. ಹೀಗೆ ತರಬೇತಿ ಪಡೆದವರಿಗೆ ಉದ್ಯೋಗ ಇಲ್ಲವೆ ಸ್ವ ಉದ್ಯೋಗ ಕಲ್ಪಿಸಿ ಕೊಡಲು ಸರ್ಕಾರ ಮುಂದಾಗಿದೆ’ ಎಂದು ತಿಳಿಸಿದರು.

ಪಿಡಿಒ ಶಿವಾನಂದ ಔರಾದೆ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸವಿತಾ ಪಾಟೀಲ, ಉಪಾಧ್ಯಕ್ಷ ನೆಹರೂ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ಮಾರುತಿ ಚವಾಣ್‌, ತಾಲ್ಲೂಕು ಪಂಚಾಯಿತಿ ಸದಸ್ಯ ಸಚಿನ್ ರಾಠೋಡ, ಅಶೋಕ ಮೇತ್ರೆ, ಶಿವಕುಮಾರ ಮೇತ್ರೆ, ಗಿರೀಶ, ತಹಶೀಲ್ದಾರ್ ಎಂ.ಚಂದ್ರಶೇಖರ, ತಾಲ್ಲೂಕು ಪಂಚಾಯಿತಿ ಮುಖ್ಯಾಧಿಕಾರಿ ಜಗನ್ನಾಥ ಮೂರ್ತಿ ಉಪಸ್ಥಿತರಿದ್ದರು. ಪಿಡಿಒ ಮಲ್ಲಪ್ಪ ಸೊನ್ನದ ಪ್ರಾರ್ಥನೆ ಗೀತೆ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.