ADVERTISEMENT

₹134.5 ಕೋಟಿ ಅನುದಾನಕ್ಕೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 8:53 IST
Last Updated 23 ಏಪ್ರಿಲ್ 2017, 8:53 IST

ಬೀದರ್‌: ನಗರೋತ್ಥಾನ 3ನೇ ಹಂತದ ಯೋಜನೆಯಡಿ ಜಿಲ್ಲೆಯ ಆರು ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆಯಾದ ಒಟ್ಟು ₹134.5 ಕೋಟಿ ಅನುದಾನದ ಕ್ರಿಯಾ ಯೋಜನೆಗಳಿಗೆ ನಗರೋತ್ಥಾನ ಯೋಜನೆಯ ಜಿಲ್ಲಾಮಟ್ಟದ ಸಮಿತಿ ಅನುಮೋದನೆ ನೀಡಿದೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್‌ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯಲ್ಲಿ ಕ್ರಿಯಾಯೋಜನೆಗಳಿಗೆ ಒಪ್ಪಿಗೆ ನೀಡಲಾಯಿತು.

‘ಪೌರಾಡಳಿತ ಇಲಾಖೆಯ ವ್ಯಾಪ್ತಿಗೆ ಬರುವ ರಾಜ್ಯದ 160 ಸ್ಥಳೀಯ ಸಂಸ್ಥೆಗಳಿಗೆ ಅಗತ್ಯ ಅನುದಾನ ನೀಡಲಾಗಿದೆ. ಕಳೆದ ವರ್ಷ ₹1,800 ಕೋಟಿ ನಿಗದಿಪಡಿಸಲಾಗಿತ್ತು. ಈ ಬಾರಿ ₹2,885 ಕೋಟಿ ಯೋಜನೆಗೆ ಅನುಮೋದನೆ ಪಡೆಯಲಾಗಿದೆ. 18,000ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳನ್ನಾಗಿಸಿ ಮೇಲ್ದರ್ಜೆಗೇರಿಸಲಾಗಿದೆ’ ಎಂದು ಸಚಿವರು ತಿಳಿಸಿದರು.

‘ಹೊಸ ಪಟ್ಟಣ ಪಂಚಾಯಿತಿಗಳಿಗೆ ಮೂಲಸೌಕರ್ಯ ಒದಗಿಸಲು ಜಿಲ್ಲಾಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ಮತ್ತು ರಾಜ್ಯಮಟ್ಟದಲ್ಲಿ ಪೌರಾಡಳಿತ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ’ ಎಂದು ಹೇಳಿದರು.‘ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಸಭೆ ನಡೆಸಿ ಜಿಲ್ಲಾಮಟ್ಟದ ಸಮಿತಿಗೆ ಪ್ರಸ್ತಾವ ಕಳಿಸಬೇಕು. ಜಿಲ್ಲಾ ಮಟ್ಟದ ಸಮಿತಿ ರಾಜ್ಯ ಮಟ್ಟದ ಸಮಿತಿಗೆ ಸಲ್ಲಿಸಬೇಕು. ನಗರೋತ್ಥಾನ 3ನೇ ಹಂತದ ಯೋಜನೆಯಲ್ಲಿ ಕುಡಿಯುವ ನೀರಿನ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ಬಳಿಕ ಒಳಚರಂಡಿ, ರಸ್ತೆ ಅಭಿವೃದ್ಧಿ, ಸಾರ್ವಜನಿಕ ಶೌಚಾಲಯ, ಮಾರುಕಟ್ಟೆ ಮಳಿಗೆ ಇತ್ಯಾದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದು’ ಎಂದು ತಿಳಿಸಿದರು.

ADVERTISEMENT

‘ಬೀದರ್‌ ನಗರಸಭೆಗೆ ₹ 35 ಕೋಟಿ, ಬಸವಕಲ್ಯಾಣ ನಗರಸಭೆಗೆ ₹ 25 ಕೋಟಿ, ಹುಮನಾಬಾದ್, ಚಿಟಗುಪ್ಪ ಹಾಗೂ ಭಾಲ್ಕಿ ಪುರಸಭೆಗಳಿಗೆ ತಲಾ ₹ 7.50 ಕೋಟಿ, ಔರಾದ್ ಪಟ್ಟಣ ಪಂಚಾಯಿತಿಗೆ ₹ 2 ಕೋಟಿ, ವಿಶೇಷ ಅನುದಾನವಾಗಿ ಬೀದರ್  ನಗರಸಭೆ ಹಾಗೂ ಭಾಲ್ಕಿ ಪುರಸಭೆಗೆ ತಲಾ ₹25 ಕೋಟಿ ಅನುದಾನ ಒದಗಿಸಲಾಗಿದೆ’ ಎಂದು ಹೇಳಿದರು.

ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜಶೇಖರ ಪಾಟೀಲ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಂ ಖಾನ್, ಶಾಸಕ ಮಲ್ಲಿಕಾರ್ಜುನ ಖೂಬಾ, ನಗರಸಭೆ ಉಪಾಧ್ಯಕ್ಷೆ ಶಾಲಿನಿ ರಾಜು ಚಿಂತಾಮಣಿ, ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ, ಉಪ ವಿಭಾಗಾಧಿಕಾರಿ ಶಿವಕುಮಾರ ಶೀಲವಂತ, ಬಸವಕಲ್ಯಾಣ ಉಪ ವಿಭಾಗಾಧಿಕಾರಿ, ಸ್ಥಳೀಯ ಸಂಸ್ಥೆಗಳ ಆಯುಕ್ತರು, ಪೌರಾಯುಕ್ತರು ಹಾಗೂ ಮುಖ್ಯಾಧಿಕಾರಿಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.