ADVERTISEMENT

ಸಚಿವ ಖಂಡ್ರೆ– ಖೂಬಾ ಮಧ್ಯೆ ವಾಗ್ವಾದ

ಬಸವ ಉತ್ಸವದ ಉದ್ಘಾಟಿಸಿದ ಸಾಹಿತಿ ಗೋ.ರು.ಚನ್ನಬಸಪ್ಪ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 9:24 IST
Last Updated 11 ಫೆಬ್ರುವರಿ 2018, 9:24 IST

ಬಸವಕಲ್ಯಾಣ: ಇಲ್ಲಿನ ತೇರು ಮೈದಾನದಲ್ಲಿ ಶುಕ್ರವಾರ ಸಂಜೆ ನಡೆದ ಬಸವ ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ಈಶ್ವರ ಖಂಡ್ರೆ ಹಾಗೂ ಶಾಸಕ ಮಲ್ಲಿಕಾರ್ಜುನ ಖೂಬಾ ಮಧ್ಯೆ ವಾಗ್ವಾದ ನಡೆದು ಸಮಾರಂಭ ರಾಜಕೀಯ ಬಣ್ಣ ಪಡೆದುಕೊಂಡಿತು.

ಮೊದಲು ಮಾತನಾಡಿದ ಸಚಿವ ಈಶ್ವರ ಖಂಡ್ರೆ ‘ಬಸವ ಉತ್ಸವ ಪ್ರತಿವರ್ಷ ಆಯೋಜಿಸಲಾಗುವುದು. ಅನುಭವ ಮಂಟಪಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ ಗಾಂಧಿ ಭೇಟಿ ನೀಡಲಿದ್ದಾರೆ’ ಎಂದರು. ನಂತರ ಮಾತನಾಡಿದ ಶಾಸಕ ಮಲ್ಲಿಕಾರ್ಜುನ ಖೂಬಾ, ‘ಚುನಾವಣೆ ಬಂದಿದ್ದರಿಂದ ಕಾಂಗ್ರೆಸ್ ಸರ್ಕಾರಕ್ಕೆ ಬಸವ ಉತ್ಸವ ಮತ್ತು ರಾಹುಲ್‌ ಗಾಂಧಿಯನ್ನು ಅನುಭವ ಮಂಟಪಕ್ಕೆ ಕರೆತರುವುದು ನೆನಪಾಗುತ್ತಿದೆ. ಬಸವಣ್ಣನವರ ಹೆಸರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ನೂತನ ಅನುಭವ ಮಂಟಪ ನಿರ್ಮಾಣಕ್ಕೆ ₹ 600 ಕೋಟಿಗಳನ್ನು ಬಿಡುಗಡೆ ಮಾಡುವುದಾಗಿ ಆಗಲೇ ಹೇಳಿದ್ದರೂ ಈ ಬಗ್ಗೆ ಮುಖ್ಯಮಂತ್ರಿಯವರು ಅಧಿಕೃತವಾಗಿ ಘೋಷಣೆ ಮಾಡಿಲ್ಲ’ ಎಂದು ದೂರಿದರು.

ಇದರಿಂದ ಕೆರಳಿದ ಸಚಿವ ಖಂಡ್ರೆ ಮತ್ತೆ ಮೈಕ್ ಹಿಡಿದು ‘ನಾವು ಉತ್ಸವದ ಹೆಸರಲ್ಲಿ ರಾಜಕೀಯ ಮಾಡುತ್ತಿಲ್ಲ. ಚುನಾವಣೆ ಬಂದಿದ್ದರಿಂದ ಇದಕ್ಕೆ ತಪ್ಪು ಅರ್ಥ ಕಲ್ಪಿಸಬಾರದು’ ಎಂದು ಸ್ಪಷ್ಟನೆ ನೀಡಿದರು. ಆಗ ಖೂಬಾ ಮತ್ತೆ ಮೈಕ್ ಹಿಡಿಯಲು ಯತ್ನಿಸಿದಾಗ ‘ನೀವು ಇಲ್ಲಿನ ಶಾಸಕರಿದ್ದೀರಿ. ಉತ್ಸವದ ಮೆರವಣಿಗೆಯಲ್ಲಿ ಎಲ್ಲಿದ್ದೀರಿ. ಇಲ್ಲಿನ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದು ಖಾರವಾಗಿ ಹೇಳಿದರು. ವಾಗ್ವಾದ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ಶಾಂತವಾಗುವಂತೆ ಕೈಜೋಡಿಸಿ ಮನವಿ ಮಾಡಿಕೊಂಡಿದ್ದರಿಂದ ಇಬ್ಬರೂ ಸುಮ್ಮನಾದರು.

ADVERTISEMENT

ಅನುಭಾವ ನಡೆಯಲಿ: ಉತ್ಸವವನ್ನು ಉದ್ಘಾಟಿಸಿದ ಸಾಹಿತಿ ಗೋ.ರು.ಚನ್ನಬಸಪ್ಪ ಮಾತನಾಡಿ, ‘ಇಲ್ಲಿನ ಅನುಭವ ಮಂಟಪ 12ನೇ ಶತಮಾನದಂತೆ ಪ್ರಚಲಿತ ವಿಷಯಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಕೇಂದ್ರವಾಗಬೇಕು. ಇದೊಂದು ಜಾಗತಿಕ ಅಧ್ಯಯನ ಕೇಂದ್ರ ಆಗಬೇಕು’ ಎಂದು ಸಲಹೆ ನೀಡಿದರು.

‘ಬಸವಾದಿ ಶರಣರು ಅನುಭವ ಮಂಟಪದ ಮೂಲಕ ನಮಗೆ ಸಂವಿಧಾನದ ಪರಿಕಲ್ಪನೆಯನ್ನು ನೀಡಿದ್ದಾರೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಅಭಿವೃದ್ಧಿಯ ಚಿಂತನೆ ಅವರದ್ದಾಗಿತ್ತು. ಅವರ ಆಶಯಗಳನ್ನು ಇಂದಿನ ಸಂವಿಧಾನದಲ್ಲಿ ಕಾಣುತ್ತಿದ್ದೇವೆ. ಆದ್ದರಿಂದ ದೇಶದ ಸಂವಿಧಾನ ಬದಲಾವಣೆಯ ಮಾತು ಸರಿಯಲ್ಲ’ ಎಂದರು.

ಹಾರಕೂಡ ಚನ್ನವೀರ ಶಿವಾಚಾರ್ಯರು ಮಾತನಾಡಿದರು. ಶಾಸಕ ರಾಜಶೇಖರ ಪಾಟೀಲ, ರಹೀಂಖಾನ್, ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಶಿವಯೋಗೇಶ್ವರ ಸ್ವಾಮೀಜಿ, ಡಾ.ಗಂಗಾಂಬಿಕಾ ಪಾಟೀಲ, ಹುಲಸೂರ ಶಿವಾನಂದ ಸ್ವಾಮೀಜಿ, ಮುಚಳಂಬ ಪ್ರಣವಾನಂದ ಸ್ವಾಮೀಜಿ, ತಡೋಳಾ ರಾಜೇಶ್ವರ ಶಿವಾಚಾರ್ಯರು, ಬಸವರಾಜ ಬುಳ್ಳಾ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಡಾ.ಪ್ರಕಾಶ ಪಾಟೀಲ, ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ಪಾಲ್ಗೊಂಡಿದ್ದರು.
****
ಕಾರ್ಯಕ್ರಮದಲ್ಲಿ ಖಾಲಿ ಖಾಲಿ ಕುರ್ಚಿಗಳು

ಇಲ್ಲಿನ ತೇರು ಮೈದಾನದಲ್ಲಿ ಶುಕ್ರವಾರ ಸಂಜೆ ನಡೆದ ಬಸವ ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿಲ್ಲವಾದ್ದರಿಂದ ಎಲ್ಲೆಡೆ ಖಾಲಿ ಕುರ್ಚಿಗಳು ಕಂಡು ಬಂದವು.

ಸಚಿವ ಈಶ್ವರ ಖಂಡ್ರೆಯವರು ಮಾತನಾಡುತ್ತಿದ್ದಾಗ ವಿಶೇಷ ಗಣ್ಯರ ಕುರ್ಚಿಗಳು ಮತ್ತು ಪ್ರೇಕ್ಷಕರ ಸಾಲಿನಲ್ಲಿದ್ದ ಬಹುತೇಕ ಕುರ್ಚಿಗಳು ಖಾಲಿ ಇರುವುದು ಕಂಡುಬಂತು. ಬೆಳಿಗ್ಗೆ ನಡೆದ ಉತ್ಸವದ ಮೆರವಣಿಗೆಯೂ ಅಸ್ತವ್ಯಸ್ತ ಆಗಿರುವ ಬಗ್ಗೆ ಇಲ್ಲಿ ಚರ್ಚಿಸಲಾಗುತ್ತಿದೆ. ಮೆರವಣಿಗೆ 2 ಗಂಟೆ ತಡವಾಗಿ ಆರಂಭಗೊಂಡಿತು. ಸಚಿವ ಈಶ್ವರ ಖಂಡ್ರೆಯವರು ಬಸವೇಶ್ವರ ದೇವಸ್ಥಾನದಲ್ಲಿ ಆನೆಯ ಮೇಲಿನ ವಚನ ಸಾಹಿತ್ಯದ ಮೇಲೆ ಪುಷ್ಪವೃಷ್ಟಿ ಮಾಡಿ ಮೆರವಣಿಗೆಗೆ ಚಾಲನೆ ನೀಡುತ್ತಿದ್ದಾಗ ಉದ್ಘಾಟನೆಗಾಗಿ ಕಾದು ಸಾಲಿನಲ್ಲಿ ನಿಂತು ನಿಂತು ಸಾಕಾಗಿದ್ದ ಕಲಾವಿದರು ಮತ್ತು ಶಾಲಾ ಮಕ್ಕಳು ತಮ್ಮ ಕಲೆಯನ್ನು ಪ್ರದರ್ಶಿಸುತ್ತ ಮುಖ್ಯರಸ್ತೆದಿಂದ 2 ಕಿ.ಮೀ ದೂರಕ್ಕೆ ಬಂದಿದ್ದರು.

ಕಾರ್ಯಕ್ರಮದ ಆಮಂತ್ರಣ ಪತ್ರಿಕೆಗಳು ಕೂಡ ಬಹಳಷ್ಟು ಕಲಾವಿದರಿಗೆ, ಸಾರ್ವಜನಿಕರಿಗೆ ಮುಟ್ಟಿಲ್ಲವೆಂಬ ದೂರುಗಳು ಕೇಳಿ ಬಂದವು. ಮಾಧ್ಯಮದವರಿಗೂ ಆಮಂತ್ರಣ ಪತ್ರಿಕೆಗಳು ಸಂಜೆಯವರೆಗೂ ಮುಟ್ಟಿರಲಿಲ್ಲ. ಅಲ್ಲಿ ಇಲ್ಲಿ ಕೇಳಿ ಪಡೆಯಲಾಯಿತು. ಬೀದರ್ ನಿಂದ ಬಂದಿದ್ದ ಕೆಲ ಪತ್ರಕರ್ತರಿಗೆ ಹಿಂದಿರುಗಿ ಹೋಗಲು ವ್ಯವಸ್ಥೆ ಇಲ್ಲದ್ದರಿಂದ ಪರದಾಡಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.