ADVERTISEMENT

ಅಂಬೇಡ್ಕರ್ ಸಮಾನತೆಯ ಚಿಂತನೆ ಸಾರ್ವಕಾಲಿಕ

ಮಹಾಮಾನವತಾವಾದಿಯ ಜನ್ಮದಿನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬಿ.ಬಿ ಕಾವೇರಿ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2018, 6:24 IST
Last Updated 15 ಏಪ್ರಿಲ್ 2018, 6:24 IST
ಚಾಮರಾಜನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಶನಿವಾರ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಉದ್ಘಾಟಿಸಿದರು
ಚಾಮರಾಜನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಶನಿವಾರ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಉದ್ಘಾಟಿಸಿದರು   

ಚಾಮರಾಜನಗರ: ‘ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ, ಆದರ್ಶ, ಚಿಂತನೆ ಹಾಗೂ ಸಿದ್ಧಾಂತಗಳು ಸಾರ್ವಕಾಲಿಕವಾಗಿವೆ’ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಹೇಳಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೇ ಜನ್ಮ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರದ್ದು ಪ್ರಬುದ್ಧ ವ್ಯಕ್ತಿತ್ವ. ತಳ ಸಮುದಾಯಗಳ ಹಾಗೂ ದಮನಿತರ ಸ್ಫೂರ್ತಿಯ ಸೆಲೆಯಾಗಿದ್ದ ಅಂಬೇಡ್ಕರ್ ಅವರು ಅಸ್ಪೃಶ್ಯತೆ ನಿವಾರಣೆಗಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟರು. ಸ್ವಾತಂತ್ರ್ಯ ಹೋರಾಟಕ್ಕೂ ಸಹ ಸಕಾರಾತ್ಮಕ ಸಂದೇಶ ನೀಡಿದ್ದ ಅಂಬೇಡ್ಕರ್ ಅವರ ಚಿಂತನೆಗಳು ಇಂದಿಗೂ ಸಾರ್ವಕಾಲಿಕ ಮೌಲ್ಯ ಪಡೆದಿವೆ ಎಂದರು.

ADVERTISEMENT

ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ತಾತ್ವಿಕ ವಿಚಾರಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಅಂಬೇಡ್ಕರ್ ಅವರು ಭಾರತೀಯ ಸಮಾಜವನ್ನು ಸಮಾನತೆಯ ತತ್ವದಲ್ಲಿ ಕಟ್ಟಲು ಪಣತೊಟ್ಟಿದ್ದರು. ಇದನ್ನು ವಿಶ್ವದ ಅನೇಕ ಉನ್ನತ ವಿದ್ಯಾಸಂಸ್ಥೆಗಳು ಗುರುತಿಸಿ ಇಂದಿಗೂ ಗೌರವಿಸುತ್ತಿವೆ. ಅಂಬೇಡ್ಕರ್‌ ಅವರ ಜೀವನ, ಹೋರಾಟ, ಚಿಂತನೆ ಹಾಗೂ ಸಿದ್ಧಾಂತಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮೈಸೂರು ಮಹಾರಾಜ ಕಾಲೇಜಿನ ಅರ್ಥಶಾಸ್ತ್ರ ಹಾಗೂ ಸಹಕಾರ ವಿಭಾಗದ ಸಹ ಪ್ರಾಧ್ಯಾಪಕ ಡಾ.ವಿ.ಷಣ್ಮುಗಂ ಮಾತನಾಡಿ, ಅಂಬೇಡ್ಕರ್ ಅವರು ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳನ್ನು ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಹಾಗೂ ಭ್ರಾತೃತ್ವ ತತ್ವಗಳ ಆಧಾರದಲ್ಲಿ ಮರು ಸಂಘಟಿಸಬೇಕು ಎಂದರು.

ದೇಶದಲ್ಲಿ ಶೇ 50ರಷ್ಟಿದ್ದ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದವರು ದೌರ್ಜನ್ಯ, ಶೋಷಣೆಗೊಳಗಗಿದ್ದರು. ಈ ಎಲ್ಲರೂ ಸೇರಿದಂತೆ ಎಲ್ಲ ಸಮುದಾಯಗಳು ಮುಖ್ಯವಾಹಿನಿಗೆ ಬಂದರೆ ಮಾತ್ರ ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಾಧ್ಯ ಎಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು. ದೇಶದ ಅಭಿವೃದ್ಧಿಗಾಗಿ ಕೃಷಿ, ಕೈಗಾರಿಕೆ, ಜಲನೀತಿ ಹಾಗೂ ಜನಸಂಖ್ಯಾ ನೀತಿಯನ್ನು ಪ್ರತಿಪಾದಿಸಿದ್ದರು. ವಿವಿಧೋದ್ಧೇಶ ನೀರಾವರಿ ಯೋಜನೆ, ಜಲವಿದ್ಯುತ್ ಯೋಜನೆಗಳಿಗೂ ಅಂಬೇಡ್ಕರ್ ಅವರು ಅಡಿಗಲ್ಲು ಹಾಕಿದ್ದರು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಹರೀಶ್‍ಕುಮಾರ್ ಮಾತನಾಡಿ, ಅಂಬೇಡ್ಕರ್ ಅವರು ವಿಶ್ವ ಕಂಡ ಶ್ರೇಷ್ಠ ಜ್ಞಾನಿಯಾಗಿದ್ದಾರೆ. ಅಂಬೇಡ್ಕರ್ ಅವರ ವಿಚಾರಧಾರೆ, ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುನಿರಾಜಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸತೀಶ್ ಹಾಜರಿದ್ದರು.

ಹರದನಹಳ್ಳಿ ನಟರಾಜ್ ಹಾಗೂ ಲತಾಪುಟ್ಟಸ್ವಾಮಿ ಅವರಿಂದ ನಾಡಗೀತೆ, ಹನೂರು ಮೊರಾರ್ಜಿ ದೇಸಾಯಿ ವಸತಿ ಶಾಲಾ ಮಕ್ಕಳಿಂದ ಬುದ್ಧ ಗೀತೆ ಹಾಗೂ ರಂಗಜಂಗಮ ಕಲಾತಂಡದ ರಾಮಸಮುದ್ರ ಮಹೇಶ್ ಅವರಿಂದ ಅಂಬೇಡ್ಕರ್ ಜಾಗೃತಿ ಗೀತೆಗಳು ಕಾರ್ಯಕ್ರಮದ ಆರಂಭದಲ್ಲಿ ಗಮನ ಸೆಳೆದವು.

ಸಮಾರಂಭಕ್ಕೂ ಮುನ್ನ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಅಂಬೇಡ್ಕರ್ ಅವರ ಪ್ರತಿಮೆಗೆ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ಪುಷ್ಪನಮನ ಸಲ್ಲಿಸಿದರು.

**

ಅಂಬೇಡ್ಕರ್‌ ಅವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿರದೆ ದೇಶದ ಎಲ್ಲ ಸಮುದಾಯಗಳ ಅಭಿವೃದ್ಧಿಗಾಗಿ ಶ್ರೇಷ್ಠ ಸಂವಿಧಾನ ರಚಿಸಿಕೊಟ್ಟರು. ಅವರು ಎಲ್ಲರಿಗೂ ಸ್ಫೂರ್ತಿದಾಯಕವಾಗಿದ್ದರೆ‌ – ಬಿ.ಬಿ.ಕಾವೇರಿ, ಜಿಲ್ಲಾಧಿಕಾರಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.