ADVERTISEMENT

ಆರೂವರೆ ದಶಕದಲ್ಲಿ ದಾಖಲೆ ಮತದಾನ

ಕೆ.ಎಚ್.ಓಬಳೇಶ್
Published 11 ಏಪ್ರಿಲ್ 2017, 9:45 IST
Last Updated 11 ಏಪ್ರಿಲ್ 2017, 9:45 IST

ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಆರೂವರೆ ದಶಕದ ಅವಧಿಯಲ್ಲಿಯೇ ದಾಖಲೆ ಪ್ರಮಾಣದ ಮತದಾನವಾಗಿದೆ.
ಉಪ ಚುನಾವಣೆಯಲ್ಲಿ 250 ಮತಗಟ್ಟೆ ತೆರೆಯಲಾಗಿತ್ತು. ಒಟ್ಟು ಶೇ 87.10ರಷ್ಟು ಮತದಾನವಾಗಿದೆ. 14 ಚುನಾವಣೆ ಕಂಡಿರುವ ಈ ಕ್ಷೇತ್ರದಲ್ಲಿ ಇಷ್ಟು ಪ್ರಮಾಣದ ಮತದಾನ ನಡೆದಿರಲಿಲ್ಲ. ಮತದಾನ ಪ್ರಮಾಣ ಹೆಚ್ಚಳವಾಗಿರುವ ಪರಿಣಾಮ ಹಳ್ಳಿಗಳಲ್ಲಿ ಯಾರೊ ಗೆಲ್ಲುತ್ತಾರೆಂಬ ಚರ್ಚೆಯೂ ಜೋರಾಗಿದೆ. ಈ ಮತದಾನವು ಯಾವ ಪಕ್ಷಕ್ಕೆ ಲಾಭ ತಂದುಕೊಡಲಿದೆ ಎಂಬ ರಾಜಕೀಯ ಲೆಕ್ಕಾಚಾರವೂ ಶುರುವಾಗಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ಗೆಲುವಿಗಾಗಿ ಜಿದ್ದಾಜಿದ್ದಿಗೆ ಬಿದ್ದಿ ದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ 20 ಸಚಿವರು, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರು, ಸಂಸದರು, ಶಾಸಕರು ಕ್ಷೇತ್ರದಲ್ಲಿ ಪ್ರಚಾರಕೈಗೊಂಡಿದ್ದರು.

ಬಿಜೆಪಿ ಕೂಡ ಪ್ರಚಾರದಲ್ಲಿ ಹಿಂದೆ ಬಿದ್ದಿರಲಿಲ್ಲ. ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್‌ಕುಮಾರ್‌, ಡಿ.ವಿ.ಸದಾನಂದಗೌಡ, ಮುಖಂಡರಾದ ಅರವಿಂದ ಲಿಂಬಾವಳಿ, ರವಿಕುಮಾರ್‌, ಸಿ.ಟಿ. ರವಿ, ತೇಜಸ್ವಿನಿಗೌಡ ಸೇರಿದಂತೆ ಸ್ಥಳೀಯ ಮುಖಂಡರು ಪ್ರಚಾರಕ್ಕೆ ರಂಗು ನೀಡಿದ್ದರು.

ADVERTISEMENT

ಬಿಜೆಪಿಯಿಂದ ಚಿತ್ರನಟ ಶ್ರೀನಗರ ಕಿಟ್ಟಿ, ನಟಿಯರಾದ ತಾರಾ ಅನುರಾಧಾ, ಶ್ರುತಿ, ಮಾಳವಿಕಾ ಅವರು ಕ್ಷೇತ್ರದ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ತಾರಾ ಪ್ರಚಾರಕ್ಕೆ ಮುನ್ನುಡಿ ಬರೆದಿದ್ದರು. ಮತಗಟ್ಟೆಗೆ ತೆರಳಿ ಸಂವಿಧಾನದತ್ತವಾಗಿ ನೀಡಿರುವ ಹಕ್ಕು ಚಲಾಯಿಸಬೇಕೆಂದು ಕರೆ ನೀಡಿದ್ದರು.

ಪ್ರತಿಯೊಂದು ಮತವೂ ಅಮೂಲ್ಯವಾದುದು. 2004ರ ವಿಧಾನಸಭಾ ಚುನಾವಣೆಯಲ್ಲಿ ಎ.ಆರ್‌. ಕೃಷ್ಣಮೂರ್ತಿ ಅವರು ಸಂತೇಮರಹಳ್ಳಿ ಕ್ಷೇತ್ರದಿಂದ ಒಂದು ಮತದ ಅಂತರದಿಂದ ಸೋಲು ಅನುಭವಿಸಿದ್ದ ನಿದರ್ಶನವಿದೆ. ಹಾಗಾಗಿ, ಪ್ರತಿಯೊಬ್ಬ ಕಾರ್ಯಕರ್ತರು ಮತ ಚಲಾಯಿಸಬೇಕು. ಅಕ್ಕಪಕ್ಕದ ಕುಟುಂಬದ ಸದಸ್ಯರ ಬಳಿಗೆ ತೆರಳಿ ಮತದಾನದ ಮಹತ್ವ ಕುರಿತು ಅರಿವು ಮೂಡಿಸುವಂತೆ ಪ್ರಚಾರ ಸಭೆಗಳಲ್ಲಿ ಸಲಹೆ ನೀಡಿದ್ದರು.

ರಾಜಕೀಯ ಪಕ್ಷದ ವರಿಷ್ಠರ ತಂತ್ರಗಾರಿಕೆಯ ಫಲವಾಗಿ ಮತದಾರರು ಮತಗಟ್ಟೆಗೆ ಬಂದು ದಾಖಲೆ ಬರೆದಿದ್ದಾರೆ. ಜತೆಗೆ, ಮತದಾರರ ಉತ್ಸಾಹಕ್ಕೆ ರಾಜಕೀಯ ಪಕ್ಷದ ಮುಖಂಡರು ಬೆರಗಾಗಿದ್ದಾರೆ. 2013ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇ 85.25ರಷ್ಟು ಮತದಾನವಾಗಿತ್ತು.

ಇದು ಇಲ್ಲಿಯವರೆಗಿನ ದಾಖಲೆಯಾಗಿತ್ತು. 1952ರ ಮೊದಲ ಚುನಾವಣೆಯಲ್ಲಿ ಗುಂಡ್ಲುಪೇಟೆ ದ್ವಿಸದಸ್ಯ ಕ್ಷೇತ್ರ ವಾಗಿತ್ತು. ಈ ಚುನಾವಣೆಯಲ್ಲಿ ಶೇ 50.47ರಷ್ಟು ಮತದಾನ ವಾಗಿತ್ತು. ಇದು ಕ್ಷೇತ್ರದಲ್ಲಿ ಇಲ್ಲಿಯ ವರೆಗೆ ಆಗಿರುವ ಅತಿ ಕಡಿಮೆ ಮತದಾನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.