ADVERTISEMENT

ಆಲಸ್ಯ ಬಿಟ್ಟು ಕೆಲಸ ಮಾಡಿ

ಬರ: ಸಮರ್ಪಕ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 10:16 IST
Last Updated 16 ಫೆಬ್ರುವರಿ 2017, 10:16 IST
ಕೊಳ್ಳೇಗಾಲ:  ‘ಬರ ನಿರ್ವಹಣೆಯಲ್ಲಿ ಮೈಗಳ್ಳತನ ತೋರುವ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಬಿ.ರಾಮು ಎಚ್ಚರಿಕೆ ನೀಡಿದರು.
 
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಹನೂರು ಶಾಸಕ ಆರ್‌.ನರೇಂದ್ರ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ಬರ ನಿರ್ವಹಣೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
 
ಮುಂದಿನ ದಿನಗಳಲ್ಲಿ ಬರದ ಭೀಕರತೆ ಹೆಚ್ಚಾಗುವ ಸಾಧ್ಯತೆ ಇದೆ. ಜನತೆ ವಿನಾಕಾರಣ ನೀರು ಪೋಲು ಮಾಡುವುದನ್ನು ಸಹಿಸಲಾಗುವುದಿಲ್ಲ. ರೈಸಿಂಗ್‌್ ಮೈನ್‌ನಿಂದ ನೀರು ಸಂಪರ್ಕ ಪಡೆದಿರುವವರ ವಿರುದ್ಧ ಗ್ರಾ.ಪಂ ಪಿಡಿಒಗಳು ಕ್ರಮಕ್ಕೆ ಮುಂದಾಗಬೇಕು, ನೀರಿನ ಸಮರ್ಪಕ ಪೂರೈಕೆ ಬಗ್ಗೆ ಸರಿಯಾಗಿ ಕಾರ್ಯನಿರ್ವಹಿಸದ ವಾಟರ್‌ಮೆನ್‌ಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. 4 ತಿಂಗಳ ಕಾಲ ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ಅಗ್ನಿಪರೀಕ್ಷೆಯ ಕಾಲವಾಗಿದೆ. ಈ ಪರೀಕ್ಷೆಯನ್ನು ಎದುರಿಸಲು ಸಿದ್ಧರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಬೇಕು ಎಂದು ಸೂಚಿಸಿದರು.
 
ಗೋಶಾಲೆ ಇಲ್ಲ:  ಜಿಲ್ಲೆಯಲ್ಲಿ ಗೋಶಾಲೆಯನ್ನು ಯಾವುದೇ ಕಾರಣಕ್ಕೂ ತೆರೆಯುವ ಪ್ರಶ್ನೆಯೇ ಇಲ್ಲ. ಗೋವುಗಳಿಗೆ ಅಗತ್ಯ ಮೇವು ದೊರಕಿಸಲು ಸಕಲ ಸಿದ್ಧತೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
 
ಶಾಸಕ ಆರ್‌. ನರೇಂದ್ರ ಎಲ್ಲಾ ಗ್ರಾಮ ಪಂಚಾಯಿತಿ ನೀರಿನ ಸಮಸ್ಯೆ ಮತ್ತು ಮೇವಿನ ಸಮಸ್ಯೆಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ ಪ್ರತಿ ಹೋಬಳಿಯಲ್ಲೂ ಗೋಶಾಲೆ ತೆರಯುವ ಉದ್ದೇಶ ಇತ್ತು. ಆದರೆ ಇದು ಕಷ್ಟವಾದ ಹಿನ್ನೆಲೆಯಲ್ಲಿ ಹೋಬಳಿ ಕೇಂದ್ರಗಳಲ್ಲಿ      ₹ 2 ದರದಲ್ಲಿ 1 ಕೆ.ಜಿ. ಮೇವು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
 
ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಪಂಚಾಯಿತಿ ಸಿಬ್ಬಂದಿ ನಿರ್ಲಕ್ಷ್ಯ ವಹಿಸದೆ ಸಮಸ್ಯೆಗೆ ಸ್ಪಂದಿಸಬೇಕು. ತೀರಾ ಸಮಸ್ಯೆ ಎದುರಾದ ಗ್ರಾಮಗಳಲ್ಲಿ ಕಡ್ಡಾಯವಾಗಿ ಟ್ಯಾಂಕರ್‌ ಮೂಲಕ ನೀರು ದೊರಕಿಸಲು ಕ್ರಮವಹಿಸಬೇಕು ಎಂದು ಸೂಚಿಸಿದರು.
 
ಗ್ರಾ.ಪಂ. ವತಿಯಿಂದ ‘ಸೆಸ್ಕ್‌’ಗೆ ಪಾವತಿಸಬೇಕಾದ ವಿದ್ಯುತ್‌ ಬಾಕಿಯನ್ನು 3ದಿನಗಳ ಒಳಗೆ ಪಾವತಿಸುವಂತೆ ತಾಕೀತು ಮಾಡಿದ ಶಾಸಕರು ಮತ್ತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಲಿದ್ದು ಅಧಿಕಾರಿಗಳು ಮತ್ತು ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
 
ಜಿಲ್ಲಾ ಪಂಚಾಯಿತಿ ಸದಸ್ಯ ನಾಗರಾಜು(ಕಮಲ್‌) ಕೆಲವು ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ದೂರಿದರು.
ಸತ್ತೇಗಾಲ ಜಿ.ಪಂ. ಸದಸ್ಯರಾದ ಜಯಂತಿ ಮಾತನಾಡಿ ಮರಳಿನ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದರು.
 
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಸವರಾಜು, ಜಿ.ಪಂ. ಸದಸ್ಯರಾದ ಶಿವಮ್ಮ ಕೃಷ್ಣ, ಡಿ. ಲೇಖಾ,ಎಂ. ಮರುಗದಮಣಿ, ಮಂಜುಳಾ, ತಾ.ಪಂ. ಅಧ್ಯಕ್ಷ ರಾಜು, ಕಾರ್ಯನಿರ್ವಾಹಕ ಅಧಿಕಾರಿ ಡಾ.ದರ್ಶನ್‌ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.