ADVERTISEMENT

ಒಂದೇ ತಾಕಿನಲ್ಲಿ ಐದು ಬೆಳೆ ಬೇಸಾಯ

ಕಾರಾಪುರ ಮಠದ ಸ್ವಾಮೀಜಿಯ ಮಿಶ್ರ ಕೃಷಿ ಪ್ರೀತಿ

​ಪ್ರಜಾವಾಣಿ ವಾರ್ತೆ
Published 15 ಮೇ 2017, 7:43 IST
Last Updated 15 ಮೇ 2017, 7:43 IST
ಯಳಂದೂರು: ಹದಿನಾಲ್ಕು ಎಕರೆಯಲ್ಲಿ ಹರಡಿದ ಭೂಮಿಗೆ ನೀರಿನ ಕೊರತೆ ಕಾಡಿದೆ. ಉಳಿದ ಒಂದು ಕೊಳವೆಬಾವಿಯಲ್ಲಿ  ಇರುವ ನೀರನ್ನು ಆಧರಿಸಿ  ತೆಂಗು, ಬಾಳೆ ಮತ್ತು ತರಕಾರಿ ಬೆಳೆದು ಮೂಲಕ ಫಸಲು ಉಳಿಸಬೇಕು.
 
ಅಲ್ಪಾವಧಿಯಲ್ಲಿ ಬಾಳೆ ಬೆಳೆಯ ನಡುವೆ ತರಕಾರಿ ಬೆಳೆದು ವೆಚ್ಚ ಉಳಿಸುವ ಮೂಲಕ ಸಾವಯವ ಕೃಷಿಗೆ ಕಾರಾಪುರ ಮಠದ ಸ್ವಾಮಿಗಳು ಮಾದರಿಯಾಗಿದ್ದಾರೆ.
 
ಪಟ್ಟಣ ಹೊರವಲಯದ  ಕಾರಾಪುರದಲ್ಲಿ  ನೀರಿನ ಕೊರತೆಯಿಂದಾಗಿ ಅಳಿವಿನಂಚಿನಲ್ಲಿದ್ದ ಕೃಷಿ ಭೂಮಿಯಲ್ಲಿ ಹಸಿರು ಇಣುಕುವಂತೆ ಮಾಡಿದ್ದಾರೆ ಮಠದ ಸ್ವಾಮೀಜಿ.
 
3 ಕೊಳವೆಬಾವಿ ನಿಂತು, ಇದ್ದ ಒಂದೇ ಬಾವಿಯ ಮೇಲೆ ಅವಲಂಬನೆ ಹೆಚ್ಚಾಯಿತು. ಇದನ್ನೆ ನಂಬಿ ಕೃಷಿ ಮಾಡುತ್ತಿದ್ದಾರೆ.  ಬಹುಬೆಳೆ ಪದ್ಧತಿಗೆ ಆದ್ಯತೆ ನೀಡಿ ಯಶಸ್ವಿ  ಕೃಷಿಕರಾಗಿದ್ದಾರೆ.
 
ಮೊದಲು ಸಾಲು ನೀರಿನ ಪದ್ಧತಿ ಅನುಸರಿಸುತ್ತಿದ್ದೆವು. ಇದರಿಂದ ಮಣ್ಣಿನ ಸವಕಳಿ ಕಾಣಿಸುತ್ತಿತ್ತು. ನಿರ್ವಹಣೆಗೂ ವೆಚ್ಚ ಮಾಡಬೇಕಿತ್ತು. ಅಂತರ್ಜಲ ಕುಗ್ಗಿದಾಗ, ಜಮೀನನ್ನು 4 ಭಾಗವಾಗಿ ವಿಂಗಡಿಸಿ, 3 ಎಕರೆಗೆ ಒಂದಾವರ್ತಿ ನೀರು ಜಿನುಗುವಂತೆ ಹನಿ ನೀರಾವರಿ ಪದ್ಧತಿ ಅಳವಡಿಸಿದೆವು.
 
ಈ ಕ್ರಮದಿಂದಾಗಿ ಈಗಾಗಲೇ ದ್ರಾಕ್ಷಿ, ನಿಂಬೆ, ಮೋಸಂಬಿ ಬೆಳೆಗಳು ಉಳಿದವು. ಕಳೆ ನಿರ್ವಹಣೆ ಕಡಿಮೆಯಾಯಿತು ಎನ್ನುತ್ತಾರೆ ತೋಟದ ನಿರ್ವಾಹಕಿ ನಿರಂಜನ ಮಠದ ಮಮತಾ. 
 
ಮಳೆ ನಂಬಿ ಹೆಸರು, ಎಳ್ಳು, ಅಲಸಂದೆ, ತೊಗರಿ, ರಾಗಿ ಹಾಕಿದ್ದೇವೆ. ಪ್ರತಿ ವರ್ಷ ಬೆಳೆ ಪರಿವರ್ತನೆಗೆ ಆದ್ಯತೆ ನೀಡಿದ್ದೇವೆ. ಕೊಟ್ಟಿಗೆ ಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ ಎನ್ನುತ್ತಾರೆ ಇವರು.
 
ವಾರ್ಷಿಕ ಬೆಳೆಯಾಗಿ 2 ಎಕರೆಯಲ್ಲಿ ಬಾಳೆ ಕೃಷಿ ಇದೆ. ಹನಿ ನೀರಾವರಿ ಅಳವಡಿಸಿ 3 ತಿಂಗಳಿಗೆ ಕೈಸೇರುವ ಮಿಡಿಸೌತೆ, ಹಾಗಲಕಾಯಿ, ಟೊಮೆಟೊ, ಹೀರೆ ಬೆಳೆಸಿದ್ದಾರೆ. 
 
‘ಧಾರವಾಡದಿಂದ ಕೆಲ ಕಾಯಿಪಲ್ಯದ ತಳಿ ಬೀಜ ತಂದು ಬಾಳೆ ನಡುವೆ ನಾಟಿ ಮಾಡಿದ್ದೇವೆ. ಬಾಳೆಯನ್ನು 12 ತಿಂಗಳ ತನಕ ಪೋಷಿಸಬೇಕು. ಇದರ ನಡುವೆ ಬೀಟ್‌ರೂಟ್‌ ಮತ್ತು ಟೊಮೆಟೊ ಹಾಕಿದ್ದೇವೆ. ಈಗಾಗಲೇ 3 ತಿಂಗಳು ತುಂಬಿದ್ದು, ಎಲ್ಲವೂ ಕಟಾವಿಗೆ ಬಂದಿವೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
 
‘ಮಿಶ್ರ ಕೃಷಿ 3 ತಿಂಗಳಲ್ಲಿ ₹ 50 ಸಾವಿರ ವರಮಾನ ತಂದುಕೊಟ್ಟಿದೆ. ಇದು ಬಾಳೆ ಫಸಲನ್ನು ಪೋಷಿಸುವ ವಾರ್ಷಿಕ ಖರ್ಚಿಗೆ ಸಾಕಾಗುತ್ತದೆ’ ಎನ್ನುತ್ತಾರೆ  ಬಸವರಾಜ ಸ್ವಾಮಿಗಳು.
 
‘ವಾರದ ಸಂತೆಗೆ ಇಲ್ಲಿಂದಲ್ಲೇ ಸಗಟು ಬೆಲೆಗೆ ಮಾರಾಟವಾಗಲಿದೆ. ಉತ್ತಮ ಇಳುವರಿಯಿಂದ ವೆಚ್ಚವು ಕಡಿಮೆ. ಸುತ್ತಮುತ್ತಲ ಗ್ರಾಮೀಣರು ಉತ್ತಮ ತರಕಾರಿಗಾಗಿ ಇಲ್ಲಿಗೆ ಬಂದು ಕೊಳ್ಳುತ್ತಾರೆ ಎನ್ನುತ್ತಾರೆ’ ಅಂಬಳೆ ನಂಜಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.