ADVERTISEMENT

ಕತ್ತಿಹಬ್ಬ: ಸಂಭ್ರಮದ ಚಂದ್ರಮಂಡಲ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 28 ಜನವರಿ 2015, 11:22 IST
Last Updated 28 ಜನವರಿ 2015, 11:22 IST
ಕೊಳ್ಳೇಗಾಲ ಪಟ್ಟಣದ ಶ್ರೀ ರಾಮಲಿಂಗ ಚೌಡೇಶ್ವರಿ ಅಮ್ಮನವರ ಚಂದ್ರ ಮಂಡಲ ರಥೋತ್ಸವ
ಕೊಳ್ಳೇಗಾಲ ಪಟ್ಟಣದ ಶ್ರೀ ರಾಮಲಿಂಗ ಚೌಡೇಶ್ವರಿ ಅಮ್ಮನವರ ಚಂದ್ರ ಮಂಡಲ ರಥೋತ್ಸವ   

ಕೊಳ್ಳೇಗಾಲ: ‘ಶ್ರೀ ರಾಮಲಿಂಗ ಚೌಡೇಶ್ವರಿ ಅಮ್ಮನವರ ದೊಡ್ಡ ಕತ್ತಿಹಬ್ಬದ 6ನೇ ದಿನವಾದ ಮಂಗಳವಾರ ಸಂಜೆ ಪಟ್ಟಣದಲ್ಲಿ  ಸಿಂಹವಾಹಿನಿಯಾದ ಶ್ರೀ ಚೌಡೇಶ್ವರಿ ದೇವಿಯ ಶಕ್ತಿ ವಿಗ್ರಹಗಳ ಚಂದ್ರಮಂಡಲ ರಥೋತ್ಸವ ರಾಜ ಬೀದಿಗಳಲ್ಲಿ ಅಲಗು ಸೇವೆಯೊಡನೆ ಸಂಭ್ರಮ ಸಡಗರಗಳಿಂದ ನೆರವೇರಿತು.

ಕತ್ತಿಹಬ್ಬದ 6ನೇ ದಿನ ಮಂಗಳವಾರ ಎಂದಿನಂತೆ ಮುಂಜಾನೆ ಕಾವೇರಿ ನದಿಯಿಂದ ಪವಿತ್ರೋದಕವನ್ನು ತರಲಾಯಿತು. ನಂತರ ದೇವಾಲಯದಲ್ಲಿ ಸ್ವಸ್ತಿ ವಾಚನ, ರುದ್ರಾಭಿಷೇಕ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು.

ಸಂಜೆ ಶ್ರೀ ರಾಮಲಿಂಗ ಚೌಡೇಶ್ವರಿ ಅಮ್ಮನವರ ದೇವಾಲಯದ ಮುಂದೆ ನಿರ್ಮಿಸಲಾದ ಪುಷ್ಪ ಹಾಗೂ ವರ್ಣಮಯ ವಿದ್ಯುತ್‌ ದೀಪಾಲಂಕೃತ ಚಂದ್ರ ಮಂಡಲ ರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.

ನಂತರ ಸಿಂಹವಾಹಿನಿಯಾದ ಶ್ರೀ ಚೌಡೇಶ್ವರಿ ದೇವಿಯ ಶಕ್ತಿವಿಗ್ರಹಗಳ ರಥಾರೋಹಣ ನೆರವೇರಿಸಲಾಯಿತು.
ಚಂಡೆಮದ್ದಳೆಯ ಬೋರ್ಗರೆತ, ದೇವಾಂಗ ಭಕ್ತರ ಚೌಡೇಶ್ವರಿ ದಂಡಕಗಳ ಘೋಷಣೆ, ವಿಶೇಷ ವಾದ್ಯಗೋಷ್ಠಿ ಸಮೇತ ಚಂದ್ರಮಂಡಲ ರಥೋತ್ಸವಕ್ಕೆ ಸಕಲ ಬಿರುದಾವಳಿಗಳೊಡನೆ ಕುಲದ ಆಚಾರ್ಯರು ಯಜಮಾನರು, ಆಯಕಟ್ಟಿನವರು ಚಾಲನೆ ನೀಡಿದರು.

ಸಾವಿರಾರು ಭಕ್ತರು ಕೈಗಳಲ್ಲಿ ಖಡ್ಗಗಳನ್ನಿಡಿದು ರಥೋತ್ಸವದ ಮುಂದೆ ಅಲಗು ಸೇವೆಗೆ ದೇವಿಯ ಅಪ್ಪಣೆ ಕೋರುತ್ತಿದ್ದಂತೆಯೇ ‘ಭಲರೇ...’ ಘೋಷಣೆ ಮುಗಿಲು ಮುಟ್ಟಿ ಅಲಗು ಸೇವೆಗೆ ಚಾಲನೆ ದೊರೆಯಿತು.

ಪಟಾಕಿ: ಮೆರವಣಿಗೆಯಲ್ಲಿ ದಾರಿ ಉದ್ದಕ್ಕೂ ನಿರಂತರ ಪಟಾಕಿ ಸಿಡಿತ ಹಾಗೂ ಬಾಣಬಿರಿಸು ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.
ರಾಜಬೀದಿಯ ಇಕ್ಕೆಲಗಳಲ್ಲೂ ಜನರು ಕಿಕ್ಕಿರಿದು ನೆರೆದು ರಥೋತ್ಸವದ ಸಂಭ್ರಮವನ್ನು ಕಣ್ತುಂಬಿಕೊಂಡರು.

ಮಾಜಿ ಸಚಿವ ರಾಮದಾಸ್‌,   ಜಿ.ಎನ್‌. ನಂಜುಂಡಸ್ವಾಮಿ, ಸೇರಿದಂತೆ ಪಾರ ಗಣ್ಯರು ಮಂಗಳವಾರ ಶ್ರೀ ಚೌಡೇಶ್ವರಿ ಅಮ್ಮನವರ ದೇವಾಲಯಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದರು.

ಜ್ಯೋತಿ ಪೂಜೆ:  ಕತ್ತಿಹಬ್ಬದ 7ನೇ ದಿನದ ಅಂಗವಾಗಿ ಜ. 28ರಂದು ಜ್ಯೋತಿ ಪೂಜೆ ನೆರವೇರಲಿದೆ. ಬೆಳಿಗ್ಗೆ 10.30ಕ್ಕೆ ಕುಲಬಾಂಧವರು, ಆಯಕಟ್ಟಿನವರು ಮೇಡಂ ಮಲ್ಲಿಕಾರ್ಜುನಸ್ವಾಮಿ ಮನೆಗೆ ತೆರಳಿ ಜ್ಯೋತಿಗೆ ಬೇಕಾದ ಪರಿಕರಗಳನ್ನು ತರುವರು.

ನಂತರ ಪರಸಂ ಮಹೇಶಸ್ವಾಮಿ ಮನೆಗೆ ತೆರಳಿ ಜ್ಯೋತಿಯನ್ನು ತಂದು ಅಮ್ಮನವರ ಮುಂದೆ ಜ್ಯೋತಿಯನ್ನಿಟ್ಟು ಮಧ್ಯಾಹ್ನ 3.45ಕ್ಕೆ ಅಲಗು ಸೇವೆ ಮಾಡುತ್ತಾ ಮಂಗಳವಾಧ್ಯ ಸಮೇತ ದೇವಾಲಯ ಪ್ರದಕ್ಷಿಣೆ ನಡೆಯಲಿದೆ. ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.

ಕುಲಬಾಂಧವರೆಲ್ಲರೂ ತಮ್ಮ ತಮ್ಮ ಮನೆಯಿಂದ ಜ್ಯೋತಿ ತಂದು ಪೂಜೆ ಮಾಡಿಸಿಕೊಂಡು ಹೋಗುವ ಕಾರ್ಯ ಮುಂದುವರೆಯಲಿದೆ.
ರಾತ್ರಿ ರುದ್ರಾಭಿಷೇಕ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.