ADVERTISEMENT

ಚಿಕ್ಕಜಾತ್ರೆಗೆ ಹರಿದು ಬಂದ ಭಕ್ತ ಸಾಗರ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 6:42 IST
Last Updated 16 ಜನವರಿ 2017, 6:42 IST
ಯಳಂದೂರು ತಾಲ್ಲೂಕಿನ ಚಂಪಕಾರಣ್ಯ ಕ್ಷೇತ್ರ ಬಿಳಿಗಿರಿರಂಗನಬೆಟ್ಟದಲ್ಲಿ ಭಾನುವಾರ ನಡೆದ ಚಿಕ್ಕಜಾತ್ರೆಯಲ್ಲಿ ರಥವನ್ನು ಭಕ್ತರು ಎಳೆದರು
ಯಳಂದೂರು ತಾಲ್ಲೂಕಿನ ಚಂಪಕಾರಣ್ಯ ಕ್ಷೇತ್ರ ಬಿಳಿಗಿರಿರಂಗನಬೆಟ್ಟದಲ್ಲಿ ಭಾನುವಾರ ನಡೆದ ಚಿಕ್ಕಜಾತ್ರೆಯಲ್ಲಿ ರಥವನ್ನು ಭಕ್ತರು ಎಳೆದರು   

ಯಳಂದೂರು: ಭಾನುವಾರ ಮುಂಜಾನೆ ಬಿಳಿಗಿರಿಯ ಶಿಖರಗಳಿಗೆ ನೇಸರನ ಎಳೆ ಬಿಸಿಲು ಸೂಸುವ ಮುನ್ನವೇ ರಂಗನಾಥನಿಗೆ ದೇವಾಲಯದಲ್ಲಿ ದೂಪಾರತಿಗೆ ಸಿದ್ಧತೆ ನಡೆದಿತ್ತು. ಹಳದಿ ಶಲ್ಯ, ಬಿಳಿ ಪಂಚೆ ಧರಿಸಿದ್ದ ದಾಸರು ಶಂಖ, ಜಾಗಟೆ ಮೊಳಗಿಸಿ ನೆನೆಗಟ್ಟಿಸಿದ ಎಳ್ಳು, ಬೆಲ್ಲ, ಅಕ್ಕಿ ಹಿಟ್ಟು ಭಕ್ತಾದಿಗಳ ಬ್ಯಾಟೆಮನೆ ಸೇವೆ ಮಾಡುವ ಮೂಲಕ ರಥದ ಹಾದಿಯಲ್ಲಿ ಭಕ್ತಿ ಮೆರೆದರು.

ರಥೋತ್ಸವಕ್ಕೂ ಮೊದಲು ಚಿಕ್ಕ ತೇರಿಗೆ ಗರುಡಪಕ್ಷಿ ಪ್ರದಕ್ಷಿಣೆ ಹಾಕಿದಾಗ  ಉಘೇ ರಂಗಪ್ಪ.... ಎಂಬ ಉದ್ಘಾರ ಮುಗಿಲು ಮುಟ್ಟಿತ್ತು. ಶಂಖದ ನಿನಾದ ಹೊರಡುತ್ತಿದ್ದಂತೆ ಅಲಂಕೃತ ಚಿಕ್ಕತೇರು ಭಕ್ತಾಧಿಗಳ ನಡುವೆ ಸಾಗಿತು.

ಹೌದು. ಇದು ಭಾನುವಾರ ನಡೆದ ತಾಲ್ಲೂಕಿನ ಪೌರಾಣಿಕ ಹಾಗೂ ಇತಿಹಾಸ ಪ್ರಸಿದ್ಧ ಬಿಳಿಗಿರಿರಂಗನಬೆಟ್ಟದ ಸಂಕ್ರಾಂತಿ ಜಾತ್ರೆಯಲ್ಲಿ ಕಂಡು ಬಂದ ದೃಶ್ಯಗಳು. 
ಮಕರಸಂಕ್ರಾಂತಿ ಮಾರನೇ ದಿನ ಚಿಕ್ಕತೇರು ಎಳೆಯುವುದು ವಾಡಿಕೆ. ಕಬ್ಬು, ಬಾಳೆ, ಕಾಡು ಸೊಪ್ಪು, ಬಣ್ಣದ ಸರಗಳನ್ನಿಟ್ಟು ರಥವನ್ನು ಅಲಂಕರಿಸಿ, ಮಧ್ಯಾಹ್ನ 12.05ಕ್ಕೆ ಉತ್ಸವ ಮೂರ್ತಿಗೆ ಚಂಡುಮಲ್ಲಿಗೆ, ತುಳಸಿ, ಕನಕಾಂಬರ ಹೂಗಳನ್ನಿಟ್ಟು ಹಣ್ಣು–ಕಾಯಿ ಅರ್ಪಿಸಿ ರಥಾರೋಹಣ ಮಾಡಲಾಯಿತು.

ಈ ಸಮಯ ಜನರು ಘೋಷಣೆ ಕೂಗಿದಾಗ ಗರುಡಪಕ್ಷಿ ತೇರಿಗೆ ಪ್ರದಕ್ಷಿಣೆ ಹಾಕಿ ನೆರೆದಿದ್ದ ಭಕ್ತರ ಸಂಭ್ರಮವನ್ನು ಇಮ್ಮಡಿಸಿತು. ರಂಗಪ್ಪನ ದಾಸರು ಶಂಖ, ಜಾಗಟೆಗಳನ್ನು ಎಡಬಿಡದೆ ಬಾರಿಸಿದರು.

ಪರಿಸರದಲ್ಲಿ ಧೂಪದ ಘಮಲು, ಕರ್ಪೂರದ ವಾಸನೆ ಸೇರಿಕೊಂಡು  ಸಾವಿರಾರು ಭಕ್ತರು ರಂಗಸ್ವಾಮಿಯ ತೇರನ್ನು ಎಳೆದು, ಸಂಭ್ರಮವನ್ನು ಕಣ್ತುಂಬಿಕೊಂಡರು. ನಡುವೆ ರಥಕ್ಕೆ ಕೃಷಿಕರು ಹೊಸಭತ್ತ, ಕಾಸು  ಹಣ್ಣು–ದವನ, ಜವನ, ಉತ್ತತ್ತಿ ಎಸೆದು ಹರಕೆ ತೀರಿಸಿದರು. ದೇವಾಲಯ ಪ್ರದಕ್ಷಿಣೆ ಮಾಡಿದ ರಥ 1.05ಕ್ಕೆ  ಸ್ವಸ್ಥಾನ ಸೇರಿತು. ಕೆಲಮಂದಿ ರಂಗಪ್ಪನ ಗುಡಿಯ ಹೊರಗೆ ಇಟ್ಟಿದ್ದ ಪಾದುಕೆ ಶಿರಭಾಗಕ್ಕೆ ಸ್ಪರ್ಶಿಸಿ ಕೊಂಡು ಧನ್ಯತಾಭಾವ ಮೆರೆದರು.

ಹರಿದು ಬಂದ ಭಕ್ತ ಸಾಗರ: ಸಂಕ್ರಮಣದ ಸಮಯ ಜಾತ್ರೆ ಉತ್ಸವ ಗಳು ಹೆಚ್ಚು. ಆದರೂ, ಈ ಬಾರಿ ರಥೋತ್ಸವಕ್ಕೆ ನಿರೀಕ್ಷೆಗಿಂತಲೂ ಅಧಿಕ ಸಂಖ್ಯೆಯಲ್ಲಿ ಭಕ್ತ ಗಣ ಆಗಮಿಸಿತ್ತು. ಯಳಂದೂರು ಪಟ್ಟಣದ ನಾಡ ಮೇಗಲಮ್ಮ ದೇಗುಲದ ಮುಂಭಾಗದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣದ ವ್ಯವಸ್ಥೆ ಮಾಡಲಾಗಿತ್ತು. ಗವಿಬೋರೆ ಬಳಿ ಬಸ್ ರಸ್ತೆಯ ನಡುವೆಯೇ ನಿಂತಿದ್ದರಿಂದ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಪಟ್ಟಣದ ಪಟ್ಟಣದ ಅಂಗಡಿ ಬೀದಿ ಹಾಗೂ ಹಳೇ ಅಂಚೆಕಚೇರಿ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಗರಿಗೆದರಿದ ವ್ಯಾಪಾರ ವಹಿವಾಟು: ತೇರು ಎಳೆದ ನಂತರ ಭಕ್ತ ದಾನಿಗಳು ಅರವಟ್ಟಿಗೆ ಇಟ್ಟು ಕೋಸಂಬರಿ, ಪಾನಕ ಹಂಚಿ ದೇವರ ಕೃಪೆಗೆ ಪಾತ್ರರಾದರು. ಜಾತ್ರೆಯ ನಿಮಿತ್ತ ಮಕ್ಕಳ ಆಟಿಕೆ, ಬೆಂಡು, ಬತ್ತಾಸು ಕಡ್ಲೆಪುರಿ, ಕಾರ, ಸಿಹಿ ತಿನಿಸುಗಳು, ದಿನಬಳಕೆಯ ವಸ್ತುಗಳ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು. ಭಕ್ತರು ಪ್ರಸಾದ ಸ್ವೀಕಾರಕ್ಕೆ ತೆರಳುವ ದೃಶ್ಯ ಸಾಮಾನ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.