ADVERTISEMENT

ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2014, 9:03 IST
Last Updated 23 ಆಗಸ್ಟ್ 2014, 9:03 IST

ಚಾಮರಾಜನಗರ: ಮೊಟ್ಟೆಗೆ ಬೆಚ್ಚನೆ ಕಾವು ಕೊಡುತ್ತಿರುವ ಕೆಮ್ಮಿಸೆ ಪಿಕಳಾರ. ಹಸಿವಿನಿಂದ ಕೆಂಗೆಟ್ಟು ಜಿಂಕೆಯ ಮಾಂಸ ಭಕ್ಷಿಸುತ್ತಿರುವ ಕೆನ್ನಾಯಿಗಳು. ಕಾಡೆಮ್ಮೆಯ ದೃಷ್ಟಿಯುದ್ಧ. ಘರ್ಜಿಸುತ್ತಿರುವ ಚಿರತೆ. ಗುಬ್ಬಚ್ಚಿಗಳ ಮಿಲನ. ಸಂಭಾಷಣೆಯಲ್ಲಿ ತೊಡಗಿರುವ ಆನೆಗಳು. ಕಬಿನಿ ಹಿನ್ನೀರಿನಲ್ಲಿ ಸಾಲುಗಟ್ಟಿ ಸಾಗುತ್ತಿರುವ ಕಾಡಾನೆಗಳು. ಪಕ್ಕದಲ್ಲಿಯೇ ನೀರು ಕುಡಿದು ದಣಿವಾರಿಸಿಕೊಳ್ಳುತ್ತಿರುವ ಚುಕ್ಕಿ ಜಿಂಕೆಗಳು. ಮರಿಗಳಿಗೆ ಆಹಾರ ತಿನಿಸಲು ಕೊಕ್ಕಿನಲ್ಲಿ ಹುಳು ಹಿಡಿದುಕೊಂಡಿರುವ ಮಡಿವಾಳ. ಕ್ಯಾಮೆರಾಕ್ಕೆ ಪೋಸು ಕೊಟ್ಟ ಚುಕ್ಕಿ ರಾಟವಾಳ ಪಕ್ಷಿಯನ್ನು ನೋಡುವುದೇ ಕಣ್ಣಿಗೆ ಆನಂದ.

ಇಂತಹ ಅಪರೂಪದ ದೃಶ್ಯ ನೋಡಲು ಜಿಲ್ಲೆಯ ಜನರು ಬಂಡೀಪುರ ಅಥವಾ ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗಬೇಕಿಲ್ಲ.
ನಗರದ ಪಿಡಬ್ಲ್ಯೂಡಿ ಕಾಲೊನಿಯ ಸ್ವಾಮಿ ಅಭೇದಾನಂದ ಹಾಲ್‌ನಲ್ಲಿ(ಮನೋನಿಧಿ ನರ್ಸಿಂಗ್‌ ಶಾಲೆ ಪಕ್ಕ) ಯುವ ಛಾಯಾಗ್ರಾಹಕರು ಕ್ಲಿಕ್ಕಿಸಿರುವ ಛಾಯಾಚಿತ್ರಗಳ ಪ್ರದರ್ಶನವಾದ ಬಿಂಬ– 2014 ಶುಕ್ರವಾರ ಆರಂಭಗೊಂಡಿದೆ. ಆ. 24ರವರೆಗೆ ಪ್ರದರ್ಶನವಿದೆ. ಛಾಯಾಗ್ರಾಹಕರಾದ ಆರ್‌.ಕೆ. ಮಧು, ಕಿರಣ್‌ ಬೇಗೂರು, ಎನೋಶ್‌ ಒಲಿವೇರಾ, ಹರೀಶ್‌ಕುಮಾರ್‌, ವಿ. ಶ್ರೀನಿವಾಸ, ವಿವೇಕ್‌ ಪ್ರಕಾಶ್‌, ಜನಾರ್ದನ್‌, ಅವಿನಾಶ್‌, ಚಂದನ್‌  ಸಂಗಮೇಶ್‌, ಅನಿಲ್‌ಕುಮಾರ್‌ ಹಾಗೂ ಮಧುಕರ್‌ ಶಾಸ್ತ್ರಿ ಕ್ಲಿಕ್ಕಿಸಿರುವ ಛಾಯಾಚಿತ್ರಗಳು ನೋಡುಗರ ಗಮನ ಸೆಳೆಯುತ್ತಿವೆ.
ಉದ್ಘಾಟನೆ: ‘ಇಂದಿನ ಡಿಜಿಟಲ್‌ ಯುಗದಲ್ಲಿ ಯಾರೂ ಬೇಕಾದರೂ ಫೋಟೊ ತೆಗೆಯುವ ಮಟ್ಟಿಗೆ ಛಾಯಾಗ್ರಹಣ ಸುಲಭವಾಗಿದೆ’ ಎಂದು ಹಿರಿಯ ಛಾಯಾಗ್ರಾಹಕ ಗಣೇಶ್ ದೀಕ್ಷಿತ್ ಹೇಳಿದರು.

ಶಾಂತಲಾ ಕಲಾವಿದರು ಹಮ್ಮಿಕೊಂಡಿರುವ ಯುವ ಛಾಯಾಗ್ರಾಹಕರ ಛಾಯಾಚಿತ್ರಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಿಂದೆ ಛಾಯಾಗ್ರಾಹಣ ಎನ್ನುವುದು ಸಾಧನೆ ಮಾಡಿದವರಿಗೆ ಮಾತ್ರ ದಕ್ಕುತ್ತಿತ್ತು. ಒಂದು ಪಾಸ್‌ಪೋರ್ಟ್ ಫೋಟೊ ಬೇಕಾದರೆ ನಾಲ್ಕು ದಿನ ಕಾಯಬೇಕಾಗುತ್ತಿತ್ತು ಆದರೆ, ಈಗ ಛಾಯಾಗ್ರಹಣದಲ್ಲಿ ಆಗಿರುವ ಆವಿಷ್ಕಾರದಿಂದ ಫೋಟೊ ತೆಗೆದ ಕೇವಲ ಐದು ನಿಮಿಷದೊಳಗೆ ಪಾಸ್‌ಪೋರ್ಟ್ ಫೋಟೊ ಲಭಿಸುತ್ತದೆ ಎಂದರು.

ಡಿಜಿಟಲ್ ಕ್ಯಾಮೆರಾಗಳು ಮಾರುಕಟ್ಟೆ ಪ್ರವೇಶಿಸಿದ ಬಳಿಕ ಛಾಯಾಗ್ರಹಣದಲ್ಲಿ ಸಾಕಷ್ಟು ಉದ್ಯೋಗಾವಕಾಶ ಸೃಷ್ಟಿಯಾಗಿದೆ ಎಂದ ಅವರು, ರಾಜ್ಯ ಸರ್ಕಾರ ಛಾಯಾಗ್ರಾಹಕರ ಅಕಾಡೆಮಿ ಸ್ಥಾಪಿಸಬೇಕು. ಹಳೆಯ ಛಾಯಾಗ್ರಾಹಕರನ್ನು ಗುರುತಿಸಿ ಗೌರವಿಸಬೇಕಿದೆ ಎಂದು ಹೇಳಿದರು.

ಶಾಂತಲಾ ಕಲಾವಿದರ ಬಳಗದ ಅಧ್ಯಕ್ಷ ಎ.ಡಿ. ಸಿಲ್ವ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಗಾಂಧಿವಾದಿ ಸಿ.ಪಿ. ಹುಚ್ಚೇಗೌಡ, ಛಾಯಾಗ್ರಾಹಕ ಆರ್.ಕೆ. ಮಧು, ಹಿರಿಯ ರಂಗಕರ್ಮಿ ಕೆ. ವೆಂಕಟರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.