ADVERTISEMENT

ಟೊಮೆಟೊಗೆ ಬಂಪರ್‌ ಬೆಲೆ

1 ಕೆಜಿಗೆ ₹ 30ರಿಂದ 40 ದರ: ಖರೀದಿಗೆ ನೆರೆಯ ರಾಜ್ಯದ ವ್ಯಾಪಾರಿಗಳ ಲಗ್ಗೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 12:06 IST
Last Updated 15 ಫೆಬ್ರುವರಿ 2017, 12:06 IST
ಚಾಮರಾಜನಗರದಲ್ಲಿ ಮಾರಾಟಕ್ಕೆ ಇಟ್ಟಿರುವ ಟೊಮೆಟೊ
ಚಾಮರಾಜನಗರದಲ್ಲಿ ಮಾರಾಟಕ್ಕೆ ಇಟ್ಟಿರುವ ಟೊಮೆಟೊ   

ಚಾಮರಾಜನಗರ: ಟೊಮೆಟೊಗೆ ಬಂಪರ್‌ ಬೆಲೆ ಬಂದಿದ್ದು, ಜಿಲ್ಲೆಯ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದ್ದರೆ ಗ್ರಾಹಕರು ತತ್ತರಿಸುವಂತಾಗಿದೆ.
ಮಳೆ ಇಲ್ಲದೆ ಬರಗಾಲ ಆವರಿಸಿದೆ. ಇದರ ಪರಿಣಾಮ ರೈತರ ಕೊಳವೆಬಾವಿಗಳಲ್ಲಿ ಅಂತರ್ಜಲ ಪ್ರಮಾಣವೂ ಕಡಿಮೆಯಾಗಿದೆ. ದೊರೆಯುವ ಅಲ್ಪಸ್ವಲ್ಪ ನೀರು ಬಳಸಿಕೊಂಡು ತರಕಾರಿ ಬೆಳೆಯುವುದು ಕಷ್ಟಕರ. ಬಿಸಿಲಿನ ಝಳದ ಪರಿಣಾಮ ಯಾವುದೇ ತರಕಾರಿಯೂ ಸಮೃದ್ಧವಾಗಿ ಬೆಳೆಯುವುದಿಲ್ಲ. ಇಂಥಹ ಸಂಕಷ್ಟದ ನಡುವೆ ಟೊಮೆಟೊ ಬೆಳೆದಿರುವ ರೈತರಿಗೆ ಕೈತುಂಬಾ ಲಾಭ ಸಿಗುತ್ತಿದೆ.

ಈಗ ಮಾರುಕಟ್ಟೆಯಲ್ಲಿ 1 ಕೆಜಿ ಟೊಮೆಟೊಗೆ ₹ 30ರಿಂದ 40 ಧಾರಣೆ ಇದೆ. ಉತ್ಕೃಷ್ಟ ದರ್ಜೆಯ ಟೊಮೆಟೊ ಬೆಲೆಯು 1 ಕೆಜಿಗೆ ₹ 40 ಮುಟ್ಟಿದೆ. ರೈತರ ಜಮೀನಿನಲ್ಲಿ ನೀರಿಲ್ಲದೆ ಟೊಮೆಟೊ ಬೆಳೆದಿರುವುದು ಕಡಿಮೆ. ಇಳುವರಿ ಕೂಡ ಕಡಿಮೆಯಾಗಿದೆ. ಇದರಿಂದ ಮಾರುಕಟ್ಟೆಗೆ ಪೂರೈಕೆಯೂ ಕಡಿಮೆಯಾಗಿದೆ.

ಇನ್ನೊಂದೆಡೆ ತಮಿಳುನಾಡಿನಲ್ಲಿಯೂ ಬೇಸಿಗೆ ವೇಳೆ ಟೊಮೆಟೊ ಇಳುವರಿ ಕಡಿಮೆಯಾಗಿದೆ. ಈರೋಡ್‌, ಕೊಮಮತ್ತೂರು, ಮದುರೈ, ಮೇಟುಪಾಳ್ಯಂಗೆ ಇಲ್ಲಿಂದ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಪೂರೈಕೆಯಾಗುತ್ತಿದೆ.

ನೆರೆಯ ಕೇರಳಕ್ಕೂ ಜಿಲ್ಲೆಯಲ್ಲಿ ಬೆಳೆಯುವ ಟೊಮೆಟೊ ಪೂರೈಕೆಯಾಗುವುದು ಉಂಟು. ಈ ಎರಡು ರಾಜ್ಯದ ವ್ಯಾಪಾರಿಗಳು ನೇರವಾಗಿ ಜಿಲ್ಲೆಗೆ ಭೇಟಿ ನೀಡಿ ರೈತರ ಜಮೀನುಗಳಿಂದಲೇ ಟೊಮೆಟೊ ಖರೀದಿಸಿ ತವರಿಗೆ ಸಾಗಿಸುತ್ತಿದ್ದಾರೆ. ರೈತರಿಂದ 1 ಕೆಜಿಗೆ ₹ 20 ದರದಲ್ಲಿ ಟೊಮೆಟೊ ಖರೀದಿಸುತ್ತಿದ್ದಾರೆ. ಇದರಿಂದ ಸ್ಥಳೀಯ ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಟೊಮೆಟೊ ಪೂರೈಕೆಯಾಗುತ್ತಿಲ್ಲ. ಇದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

200 ಕ್ರೇಟ್‌ ಹೆಚ್ಚು: ಕೊಳವೆಬಾವಿ ಆಶ್ರಿತ ನೀರಾವರಿ ಪ್ರದೇಶದಲ್ಲಿ ಬೆಳೆದಿರುವ ಟೊಮೆಟೊ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಪೂರೈಕೆಯಾಗುತ್ತಿದೆ. ದಿನವೊಂದಕ್ಕೆ 200 ಕ್ರೇಟ್‌ನಷ್ಟು(1 ಕ್ರೇಟ್‌ಗೆ 20 ಕೆಜಿ) ಟೊಮೆಟೊ ಪೂರೈಕೆಯಾಗುವುದೇ ಹೆಚ್ಚು.

ಪೂರೈಕೆಯಾಗುವ ಟೊಮೆಟೊ ಖರೀದಿಗೂ ಪೈಪೋಟಿ ಏರ್ಪಡುತ್ತದೆ. ಉತ್ಕೃಷ್ಟ ದರ್ಜೆಯ ಸರಕನ್ನು ನೆರೆಯ ರಾಜ್ಯದ ವ್ಯಾಪಾರಿಗಳೇ ಖರೀದಿಸುತ್ತಾರೆ. ಹಾಗಾಗಿ, ಸಣ್ಣಗಾತ್ರದ ಟೊಮೆಟೊ ಸ್ಥಳೀಯ ವ್ಯಾಪಾರಿಗಳ ಪಾಲಾಗುತ್ತದೆ. ಇದನ್ನೇ ಗ್ರಾಹಕರು ಖರೀದಿಸಬೇಕು.

ಜಿಲ್ಲೆಯ ಗುಂಡ್ಲುಪೇಟೆ, ಹನೂರು ಭಾಗದಲ್ಲಿ ರೈತರು ಹೆಚ್ಚಾಗಿ ಟೊಮೆಟೊ ಬೆಳೆಯುತ್ತಾರೆ. ಚಾಮರಾಜನಗರ ತಾಲ್ಲೂಕಿನ ಗಡಿಭಾಗದಲ್ಲಿ ಕೊಳವೆಬಾವಿ ಆಶ್ರಿತ ಪ್ರದೇಶದಲ್ಲಿ ರೈತರು ಟೊಮೆಟೊ ಬೆಳೆಯುತ್ತಾರೆ. ಗುಂಡ್ಲುಪೇಟೆ ಭಾಗದಲ್ಲಿ ಬೆಳೆಯುವ ಟೊಮೆಟೊ ಹೆಚ್ಚಾಗಿ ಕೇರಳಕ್ಕೆ ಪೂರೈಕೆಯಾಗುತ್ತದೆ.

‘ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕೇಳಿ ಹೌಹಾರುವಂತಾಗಿದೆ. ಟೊಮೆಟೊ ಇಳುವರಿ ಕಡಿಮೆಯಾಗಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಇದರಿಂದ ಬೆಲೆಗೆ ತತ್ತರಿಸುವಂತಾಗಿದೆ. ಆದರೆ, ಖರೀದಿಸುವುದು ಅನಿವಾರ್ಯ’ ಎನ್ನುತ್ತಾರೆ ಗ್ರಾಹಕ ಶಂಕರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.