ADVERTISEMENT

ತಹಶೀಲ್ದಾರ್‌ಗೆ ₹10,000 ದಂಡ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 8:17 IST
Last Updated 16 ನವೆಂಬರ್ 2017, 8:17 IST

ಕೊಳ್ಳೇಗಾಲ: ಮಾಹಿತಿ ಹಕ್ಕು ಕಾಯ್ದೆಯಡಿ ಕೋರಿದ ಮಾಹಿತಿಯನ್ನು ನೀಡಲು ವಿಫಲರಾದ ತಹಶೀಲ್ದಾರ್ ಕಾಮಾಕ್ಷಮ್ಮ ಅವರಿಗೆ ರಾಜ್ಯ ಮಾಹಿತಿ ಹಕ್ಕು ಆಯೋಗ ₹10,000 ದಂಡ ವಿಧಿಸಿದ್ದು, ಅರ್ಜಿದಾರರಿಗೆ ಮಾಹಿತಿಗಳನ್ನು ನೀಡುವಂತೆ ಆದೇಶಿಸಿದೆ.

ಹಳೇ ಅಣಗಳ್ಳಿ ಗ್ರಾಮದ ಜೆಡಿಎಸ್ ಮುಖಂಡ ಎಂ. ದಶರಥ ಅವರು, ಹೊಸ ಅಣಗಳ್ಳಿ ಗ್ರಾಮಕ್ಕೆ ಸಂಬಂಧಿಸಿದ 158 ನಿವೇಶನ ಹಂಚಿಕೆಯ ಫಲಾನುಭವಿಗಳ ಪಟ್ಟಿಯನ್ನು ನೀಡುವಂತೆ ಆರ್‌ಟಿಐ ಅಡಿ ತಹಶೀಲ್ದಾರ್ ಅವರಿಗೆ ಸೆಪ್ಟೆಂಬರ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಅವರು ಸಮರ್ಪಕ ದಾಖಲೆಗಳನ್ನು ನೀಡದ ಕಾರಣ ಅ. 14 ರಂದು ಆಯೋಗದ ಮೊರೆ ಹೋಗಿದ್ದರು.

ವಿಚಾರಣೆ ವೇಳೆ ತಹಶೀಲ್ದಾರ್ ಪರ ಹಾಜರಾಗಿದ್ದ ಪ್ರತಿನಿಧಿ, 158 ಹಕ್ಕುಪತ್ರಗಳ ಮಾಹಿತಿ ಪೈಕಿ ಲಭ್ಯವಿರುವ 84 ಹಕ್ಕುಪತ್ರಗಳ ವಿವರ ನೀಡಿರುವುದಾಗಿ ತಿಳಿಸಿದ್ದರು. ಇದಕ್ಕೆ ಆಕ್ಷೇಪಣೆ ಸಲ್ಲಿಸಿದ್ದ ಅರ್ಜಿದಾರರು ಕಡತ ಪರಿಶೀಲನೆಗೆ ಅವಕಾಶ ನೀಡಬೇಕೆಂದು ಕೋರಿದ್ದರು.

ADVERTISEMENT

ವಿಚಾರಣೆ ನಡೆಸಿದ ಆಯೋಗ, ಅರ್ಜಿದಾರರನ್ನು ಕಚೇರಿಗೆ ಕರೆಸಿ ಕಡತ ಪರಿಶೀಲನೆಗೆ ಅವಕಾಶ ಮಾಡಿಕೊಡಬೇಕು. ಅವರು ಗುರುತಿಸಿದ ಮಾಹಿತಿಯನ್ನು ಒದಗಿಸಿ ವರದಿ ಸಲ್ಲಿಸಬೇಕು ಎಂದು ತಹಶೀಲ್ದಾರ್ ಕಾಮಾಕ್ಷಮ್ಮ ಅವರಿಗೆ ನಿರ್ದೇಶಿಸಿದೆ.

ದಂಡವನ್ನು ಒಂದೇ ಕಂತಿನಲ್ಲಿ ಇಲ್ಲವೇ 2 ತಿಂಗಳ ಸಂಬಳದಲ್ಲಿ ತಲಾ ₹5,000 ಕಡಿತಗೊಳಿಸಿ ಸರ್ಕಾರಕ್ಕೆ ಪಾತಿಸುವಂತೆ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.