ADVERTISEMENT

ತುರ್ತು ಪರಿಸ್ಥಿತಿ ದಿನ ಸ್ಮರಣೆ

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 28 ಜೂನ್ 2016, 10:57 IST
Last Updated 28 ಜೂನ್ 2016, 10:57 IST

ಚಾಮರಾಜನಗರ: ‘ಪ್ರಧಾನಿ ಪಟ್ಟ ಉಳಿಸಿಕೊಳ್ಳಲು ಇಂದಿರಾಗಾಂಧಿ ಕೋರ್ಟ್‌ ಆದೇಶ ಉಲ್ಲಂಘಿಸಿ ತುರ್ತು ಪರಿಸ್ಥಿತಿ ಜಾರಿಗೊಳಿಸುವ ಮೂಲಕ ದೇಶವನ್ನು ಕತ್ತಲೆಗೆ ದೂಡಿದ್ದರು. ಯಾರಿಗೂ ಆ ಕರಾಳ ದಿನವನ್ನು ಮರೆಯಲು ಸಾಧ್ಯವಿಲ್ಲ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ತುರ್ತು ಪರಿಸ್ಥಿತಿ ದಿನ ಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 1971ರಲ್ಲಿ ನಡೆದ ಚುನಾವಣೆಯಲ್ಲಿ ಇಂದಿರಾಗಾಂಧಿ ಭ್ರಷ್ಟಾಚಾರದ ಮೂಲಕ ಗೆಲುವು ಸಾಧಿಸಿ ಪ್ರಧಾನಿ ಯಾಗಿದ್ದಾರೆ ಎಂದು ರಾಜನಾರಾಯಣ್ ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು.

ನ್ಯಾಯಾಲಯ  ಪ್ರಕರಣದ ವಿಚಾರಣೆ ನಡೆಸಿತು. 1975ರ ಜೂನ್‌ 13ರಂದು ಪ್ರಧಾನಿ ಹುದ್ದೆ ತ್ಯಜಿಸುವಂತೆ ಮಹತ್ವದ ತೀರ್ಪು ನೀಡಿತ್ತು. ಆದರೆ, ತೀರ್ಪಿನಿಂದ ತಪ್ಪಿಸಿ ಕೊಳ್ಳಲು ಕಾನೂನು ಸಲಹೆಗಾರರಿಂದ ಸಲಹೆ ಪಡೆದ ಇಂದಿರಾಗಾಂಧಿ ಸಚಿವ ಸಂಪುಟದ ಒಪ್ಪಿಗೆ ಪಡೆಯದೆ ಸರ್ವಾಧಿಕಾರಿ ಧೋರಣೆ ತಳೆದಿದ್ದರು. 1975ರ ಜೂನ್ 25ರ ಮಧ್ಯರಾತ್ರಿ ತುರ್ತುಪರಿಸ್ಥಿತಿ ಘೋಷಣೆ ಮಾಡಿದರು ಎಂದರು.

ರಾಜಕೀಯ ಮುಖಂಡರು, ಸಂಘ ಪರಿವಾರದ ಎಲ್ಲ ಸಂಘಟನೆ ರದ್ದುಪಡಿಸಿದ್ದರು. ಸರ್ಕಾರದ ವಿರುದ್ಧ  ಮಾತನಾಡಿದವರಿಗೆ ಜೈಲು ಶಿಕ್ಷೆ ಕಾದಿತ್ತು. ಇಂದಿರಾಗಾಂಧಿ ಅವರ ವರ್ತನೆಯಿಂದ ಇದೇ ದೇಶವೇ ತಲ್ಲಣಗೊಂಡಿತ್ತು ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನೂರೊಂದುಶೆಟ್ಟಿ, ತಾ.ಪಂ. ಸದಸ್ಯರಾದ ಮಹದೇವಸ್ವಾಮಿ, ಮಹದೇವಯ್ಯ, ಸುಧಾ ಮಲ್ಲಣ್ಣ, ದಯಾನಿಧಿ, ಮುಖಂಡರಾದ ಆರ್. ಮಹದೇವ್, ಅಮಚವಾಡಿ ಚಂದ್ರಶೇಖರ್, ಜಿ. ನಾಗಶ್ರೀ, ಹೊಸೂರು ಸುಂದ್ರಪ್ಪ, ಚಾ.ಸಿ. ಗೋವಿಂದರಾಜು, ಶಿವಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.