ADVERTISEMENT

ದೇಸಿ ಕಲೆ ಉಳಿವಿಗೆ ಶ್ರಮಿಸಲು ಸಲಹೆ

‘ಬೆಪ್ಪುತಕ್ಕಡಿ ಬೋಳೆಶಂಕರ’ ನಾಟಕ ನಿರ್ದೇಶನ, ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 10:14 IST
Last Updated 10 ಜನವರಿ 2017, 10:14 IST
ಚಾಮರಾಜನಗರ: ‘ದೇಶೀಯ ಕಲೆ, ಸಂಸ್ಕೃತಿ ಉಳಿಸಿ ಬೆಳೆಸಲು ಎಲ್ಲರೂ ಶ್ರಮಿಸಬೇಕು’ ಎಂದು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕಿ ಡಿ. ನಾಗವೇಣಿ ಹೇಳಿದರು.
 
ನಗರದ ಕನ್ನಡ ಸಾಹಿತ್ಯ ಪರಿಷತ್‌ನ ಸಂಸ ಸಭಾಂಗಣದಲ್ಲಿ ಇತ್ತೀಚೆಗೆ ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗ ಜಂಗಮ ಸಂಸ್ಥೆಯಿಂದ ನಡೆದ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರ ‘ಬೆಪ್ಪುತಕ್ಕಡಿ ಬೋಳೆಶಂಕರ’ ನಾಟಕ ನಿರ್ದೇಶನ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
 
ಚಂದ್ರಶೇಖರ ಕಂಬಾರ ರಚಿಸಿರುವ ‘ಬೆಪ್ಪುತಕ್ಕಡಿ ಬೋಳೆಶಂಕರ’ ನಾಟಕ ವನ್ನು ರಂಗಜಂಗಮ ಸಂಸ್ಥೆಯ ಕಲಾವಿದರು ಪ್ರದರ್ಶಿಸಲಿದ್ದಾರೆ. ಪ್ರಥಮ ಪಿಯುಸಿ ಪಠ್ಯದಲ್ಲಿ ಈ ನಾಟಕ ಅಳವಡಿಸಲಾಗಿದೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಪ್ರದರ್ಶಿಸಲಾಗುತ್ತಿದೆ ಎಂದು ತಿಳಿಸಿದರು.
 
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿಭಾವಂತ ಕಲಾವಿದರು ಇದ್ದಾರೆ. ಅವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.
 
ಜಿಲ್ಲೆಯು ಡಾ.ರಾಜ್‌ಕುಮಾರ್ ಸೇರಿ ದಂತೆ ಹಲವು ಕಲಾವಿದರನ್ನು ರಂಗ ಭೂಮಿಗೆ ಕೊಡುಗೆಯಾಗಿ ನೀಡಿದೆ. ಮಂಟೇಸ್ವಾಮಿ, ಮಲೆಮಹದೇಶ್ವರ ಸ್ವಾಮಿಯ ಪುಣ್ಯಕ್ಷೇತ್ರವಾಗಿದೆ ಎಂದು ತಿಳಿಸಿದರು.
 
ರೋಟರಿ ಮಾಜಿ ಅಧ್ಯಕ್ಷ ಕಮಲ್‌ ರಾಜ್ ಮಾತನಾಡಿ, ನಾಟಕ ಕಲಿಯಲು ವಿದ್ಯಾರ್ಥಿಗಳು ಉತ್ಸಾಹ ತೋರಬೇಕು. ರಂಗಭೂಮಿ ಹಾಗೂ ಜನಪದ ಕ್ಷೇತ್ರ ದಲ್ಲಿ ಸಾಧನೆ ಮಾಡಲು ಮುಂದಾಗ ಬೇಕು ಎಂದು ಸಲಹೆ ನೀಡಿದರು.
 
ರಂಗಜಂಗಮ ಸಂಸ್ಥೆ ಅಧ್ಯಕ್ಷ ರಾಮಸಮುದ್ರ ಮಹೇಶ್ ಮಾತನಾಡಿ, ಜಿಲ್ಲೆಯಲ್ಲಿ ಮೊದಲ ಬಾರಿಗೆ ಕರ್ನಾಟಕ ನಾಟಕ ಅಕಾಡೆಮಿಯು ನಾಟಕ ನಿರ್ದೇ ಶನ ಮಾಡಲು ಅವಕಾಶ ಕಲ್ಪಿಸಿದೆ. ನಾಟಕವನ್ನು ಸಂಸ್ಥೆಯ ಕಲಾವಿದರಿಂದ ಉತ್ತಮವಾಗಿ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.
 
ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೊರವರ ಕುಣಿತದ ಕಲಾವಿದ ನಿಂಗಶೆಟ್ಟಿ, ಕಲಾವಿದರಾದ ಮಂಜು, ಬಸವರಾಜು, ಭಾಗ್ಯಲಕ್ಷ್ಮಿ ಹಾಜರಿದ್ದರು.
 
**
ಜಿಲ್ಲೆಯಲ್ಲಿ ಎಲ್ಲ ಜನಪದ ಪ್ರಕಾರದ ಕಲಾವಿದರು ಇದ್ದಾರೆ. ಅವರಿಗೆ ಇಲಾಖೆಯಿಂದ ಪ್ರೋತ್ಸಾಹ ನೀಡಲಾಗುವುದು, ಕಲಾವಿದರು ದೇಸಿ ಕಲೆ ಉಳಿಸಲು ಶ್ರಮಿಸಬೇಕು
-ಡಿ.ನಾಗವೇಣಿ,
ಪ್ರಭಾರ ಸಹಾಯಕ ನಿರ್ದೇಶಕಿ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.