ADVERTISEMENT

ಪಂಕ್ತಿಸೇವೆ; ಜಾಗೃತಿ ಪಾದಯಾತ್ರೆಗೆ ಚಾಲನೆ

ಜನಜಾಗೃತಿ ಹೋರಾಟ ಸಮಿತಿ; ಸಂಸದ ಆರ್‌.ಧ್ರುವನಾರಾಯಣ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2017, 9:53 IST
Last Updated 3 ಜನವರಿ 2017, 9:53 IST

ಕೊಳ್ಳೇಗಾಲ:  ತಾಲ್ಲೂಕಿನ ಚಿಕ್ಕಲ್ಲೂರಿಗ್ರಾಮದಲ್ಲಿ ಜ.12ರಿಂದ ನಡೆಯುವ ಜಾತ್ರೆಯಲ್ಲಿ ಪಂಕ್ತಿಸೇವೆಗೆ ಅವಕಾಶ ಕೋರಿ ಜಿಲ್ಲಾಡಳಿತದ ಗಮನ ಸೆಳೆಯಲು ಸೋಮವಾರ ಪಂಕ್ತಿಸೇವೆ ಜನಜಾಗೃತಿ ಪಾದಯಾತ್ರೆ ಆರಂಭವಾಯಿತು.

ಜನಜಾಗೃತಿ ಹೋರಾಟ ಸಮಿತಿ ಏರ್ಪಡಿಸಿರುವ ಪಂಕ್ತಿಸೇವೆ ಜನಜಾಗೃತಿ ಪಾದಯಾತ್ರೆಗೆ ಸಂಸದ ಆರ್‌.ಧ್ರುವನಾರಾಯಣ ಚಿಕ್ಕಲ್ಲೂರು ಸಿದ್ದಪ್ಪಾಜಿ ದೇವಾಲಯದ ಮುಂದೆ ಕರ್ಪೂರ ಹಚ್ಚಿ ಧೂಪ ಹಾಕುವ ಮೂಲಕ ಚಾಲನೆ ನೀಡಿದರು.

ಈ ಭಾಗದ ಮಹತ್ವದ ಚಿಕ್ಕಲ್ಲೂರು ಜಾತ್ರೆಯಲ್ಲಿ ಪಾಲಿಸುತ್ತಿದ್ದ ಪಂಕ್ತಿಸೇವೆಗೆ ಈಗ ಅವಕಾಶ ನಿರಾಕರಿಸಲಾಗಿದೆ.  ಪಂಕ್ತಿಸೇವೆ ಉಳಿಸಿ ಕೊಳ್ಳಲು ಪಾದಯಾತ್ರೆ ಮಹತ್ವದ್ದಾಗಿದೆ ಎಂದರು.

ಪಂಕ್ತಿಸೇವೆ ವಂಚನೆ ನೀಲಗಾರ ಪರಂಪರೆಯನ್ನು ಪಾಲಿಸುತ್ತಿರುವ ಭಕ್ತರು ತಮ್ಮ ಹಕ್ಕಿನಿಂದ ವಂಚಿತರಾಗುವಂತಾಗಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಮರುಪರಿಶೀಲನೆ ಅರ್ಜಿಸಲ್ಲಿಸುವ ಮೂಲಕ ಮೂಲಹಕ್ಕು ಹೊಂದುವ ಪ್ರಾಮಾಣಿಕ ಪ್ರಯತ್ನಕ್ಕ ತಮ್ಮ ಬೆಂಬಲ ನೀಡುವುದಾಗಿ ಅವರು ತಿಳಿಸಿದರು.

ಪ್ರೊ.ಗೋವಿಂದಯ್ಯ ಅವರು, ಚಿಕ್ಕಲ್ಲೂರಿಗೆ ಭಕ್ತರು ತರುವ ಜಾಗಟೆ, ಬೆತ್ತ ಸಮಾನತೆ, ಏಕತೆ ಪ್ರತಿನಿಧಿಸುವ ಆಯುಧಗಳು.  ಈ ಪರಂಪರೆಗೆ ತೊಂದರೆ ಎದುರಾಗುತ್ತಿದ್ದು ಇದರ ನಿವಾರಣೆಗೆ ಜಾಥಾ ನಡೆಸಲಾಗುತ್ತಿದೆ ಎಂದರು.

ಚಿಕ್ಕಲ್ಲೂರು ಜಾತ್ರೆ ಪರಂಪರೆಯ ಪ್ರತಿಬಿಂಬ. 4ನೇ ದಿನ ನಡೆಯುವ ಪಂಕ್ತಿಸೇವೆ ಪರಂಪರೆಯ ಕಳಸ. ಇದೊಂದು ಜಾತ್ಯತೀತ ಕಲ್ಪನೆಯ ಜಾತ್ರೆ.  ಈ ಬಗ್ಗೆ ಜಿಲ್ಲಾಡಳಿತದ ಕಣ್ಣು ತೆರೆಸುವುದು ಅಗತ್ಯವಾಗಿದೆ ಎಂದರು.

ಶಾಸಕ ಆರ್‌.ನರೇಂದ್ರ, ಸಹಪಂಕ್ತಿಭೋಜನಕ್ಕೆ ಧಕ್ಕೆ ಆಗಿರುವುದು ದುರ್ದೈವ. ತಮ್ಮ ಹಿತಸಾಧನೆಗೆ ಮುಂದಾದ ಪಟ್ಟಬದ್ರ ಹಿತಾಸಕ್ತಿಗೆ ತಿರುಗೇಟು ನೀಡಲು ಜಾಗೃತಿ ಪಾದಯಾತ್ರೆಗೆ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು. ಹೋರಾಟ ಸಮಿತಿ ಅಧ್ಯಕ್ಷ ಾದ ಎನ್‌. ಮಹೇಶ್‌, ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.

ಪಾದಯಾತ್ರೆಯ ಮಾರ್ಗದಲ್ಲಿ ಗ್ರಾಮಸ್ಥರು ರಸ್ತೆ ಸ್ವಚ್ಚಗೊಳಿಸಿ ತಮ್ಮ ಗ್ರಾಮಗಳ ಕಂಡಾಯ, ನೀಲಗಾರರಿಗೆ ಬೆಂಬಲಿಸಿದರು. ಮುಖಂಡ ಡಾ. ದತ್ತೇಶ್‌ಕುಮಾರ್‌, ಸಾಹಿತಿಗಳಾದ ಮುಳ್ಳೂರು ಶಿವಮಲ್ಲು, ಶಂಕನಪುರ ಮಹದೇವ, ಜಿ.ಪಂ ಸದಸ್ಯರಾದ ಶಿವಮ್ಮ, ಲೇಖಾ ರವೀಂದ್ರ, ಮಾಜಿ ಸದಸ್ಯರಾದ ಎಸ್‌. ಶಿವಕುಮಾರ್‌, ಕೊಪ್ಪಾಳಿ ಮಹದೇವನಾಯಕ, ದೇವರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜು, ಮಹಮದ್‌ ಮತೀನ್‌, ತೋಟೇಶ್‌, ಶಾಂತರಾಜು, ಅಕ್ಮಲ್‌ಪಾಷ, ಸೋಮಣ್ಣ ಉಪ್ಪಾರ್‌, ಜಗದೀಶ್‌, ರಾಜೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.