ADVERTISEMENT

ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2017, 6:51 IST
Last Updated 20 ಡಿಸೆಂಬರ್ 2017, 6:51 IST

ಚಾಮರಾಜನಗರ: ನಗರದ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಮಂಗಳವಾರ ಆರಂಭವಾದ ಮೂರು ದಿನಗಳ ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟಕ್ಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್‌ಲಾಲ್‌ ಮೀನಾ ಚಾಲನೆ ನೀಡಿದರು. ಪಾರಿವಾಳ ಮತ್ತು ಬಣ್ಣದ ಬಲೂನುಗಳನ್ನು ಹಾರಿಬಿಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಅವರು, ಶಾಟ್‌ಪಟ್‌ ಎಸೆದು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ವಿಜಯ್‌ಲಾಲ್ ಮೀನಾ, ದೈಹಿಕ ಸದೃಢತೆಗೆ ಮನಸ್ಸು ಮತ್ತು ದೇಹದ ಆರೋಗ್ಯದ ಸಮತೋಲನ ಬಹುಮುಖ್ಯ. ಕರ್ತವ್ಯದಲ್ಲಿ ನಿಮಗೆ ನೀಡಲಾಗುವ ಗುರಿಯನ್ನು ತಲುಪಬೇಕಾದರೆ ಅದನ್ನು ಪೂರ್ಣಗೊಳಿಸುವ ಸಾಮರ್ಥ್ಯ ಇರಬೇಕು. ಇಂತಹ ಚಟುವಟಿಕೆಗಳು ನಿಮ್ಮ ಗುರಿಯನ್ನು ಮುಟ್ಟುವಲ್ಲಿ ನೀವು ಎಷ್ಟು ಸಮರ್ಥರಾಗಿದ್ದೀರಿ ಎಂಬುದನ್ನು ಪ್ರತಿಬಿಂಬಿಸುತ್ತವೆ ಎಂದರು.

ದೈಹಿಕ ಮತ್ತು ಮಾನಸಿಕ ಒತ್ತಡಗಳನ್ನು ಮೀರಲು ಕ್ರೀಡಾಚಟುವಟಿಕೆಗಳು ಅಗತ್ಯ. ಸ್ಪರ್ಧೆಯಲ್ಲಿ ಗೆಲ್ಲುವ ಛಲದ ಜತೆಗೆ ಕ್ರೀಡಾಮನೋಭಾವದಿಂದ ಆಡುವುದು ಆರೋಗ್ಯ ವೃದ್ಧಿಗೆ ಸಹಕಾರಿ ಎಂದು ಹೇಳಿದರು.

ADVERTISEMENT

ಜಿಲ್ಲಾಧಿಕಾರಿ ಬಿ. ರಾಮು ಮಾತನಾಡಿ, ಗಡಿಭಾಗದಲ್ಲಿ ಹೊರದೇಶದ ಶತ್ರುಗಳಿಂದ ನಮ್ಮನ್ನು ರಕ್ಷಿಸಲು ಸೇನೆ ಇದೆ. ಆದರೆ, ಅದರಿಂದ ನಾವು ಸುರಕ್ಷಿತರು ಎಂದು ಭಾವಿಸಿದರೆ ತಪ್ಪು. ದೇಶದೊಳಗೂ ಸಮಾಜಕ್ಕೆ ಶತ್ರುಗಳಿರುತ್ತಾರೆ. ಆಂತರಿಕವಾಗಿ ತೊಂದರೆಯುಂಟಾದರೆ ಅಸುರಕ್ಷಿತ ವಾತಾವರಣದಲ್ಲಿ ನಾಗರಿಕರಿಗೆ ದೇಶದ ಕುರಿತು ಜಿಗುಪ್ಸೆ ಬರಬಹುದು. ಅಂತಹ ಪರಿಸ್ಥಿತಿ ನಿರ್ಮಾಣವಾಗದಂತೆ ತಡೆಯಲು ನಮ್ಮಲ್ಲಿ ಪೊಲೀಸ್‌ ವ್ಯವಸ್ಥೆ ಇದೆ ಎಂದು ಹೇಳಿದರು.

ನಾಗರಿಕರು ನಿಶ್ಚಿಂತೆಯಿಂದ ಪೂರ್ಣ ಸ್ವಾತಂತ್ರ್ಯ ಅನುಭವಿಸಲು ಪೊಲೀಸ್‌ ಇಲಾಖೆ ಬೇಕು. ಪೊಲೀಸರು ನಮ್ಮ ನಡುವೆ, ನಮ್ಮಂತೆಯೇ ಹುಟ್ಟಿ ಬೆಳೆದವರು. ಅವರಿಗೆ ನಮ್ಮ ರಕ್ಷಣೆಯ ಜವಾಬ್ದಾರಿ ವಹಿಸಲಾಗಿದೆ ಎಂಬುದನ್ನು ಜನರು ಅರಿತುಕೊಳ್ಳಬೇಕು ಎಂದರು.

ಪೊಲೀಸ್‌ ವ್ಯವಸ್ಥೆಯೊಳಗೆ ಬರುವ ವ್ಯಕ್ತಿ ತನ್ನ ವೈಯಕ್ತಿಕ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾನೆ. ತಮ್ಮನ್ನು ಅವಲಂಬಿಸಿರುವ ಸಮಾಜವನ್ನು ನಿಸ್ವಾರ್ಥ ಮನೋಭಾವದಿಂದ ರಕ್ಷಿಸುವ ಕರ್ತವ್ಯದಲ್ಲಿ ತೊಡಗುತ್ತಾನೆ. ಅಂತಹ ವ್ಯಕ್ತಿಗಳಿಗೆ ಜೀವನ ಆರೋಗ್ಯ ಅತಿಮುಖ್ಯ. ಆ ದೃಷ್ಟಿಯಿಂದ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಪೊಲೀಸರು ವೃತ್ತಿಯಲ್ಲಿ ಇರುವವರೆಗೂ ಸಮಾಜವನ್ನು ಹಾಳುಮಾಡುವ ಕೆಟ್ಟಮನಸ್ಥಿತಿಯ ಅಪರಾಧಿಗಳೊಂದಿಗೇ ಕಾಲ ಕಳೆಯಬೇಕಾಗುತ್ತದೆ. ಅಪರಾಧಿಗಳನ್ನು ಹಿಡಿಯುವ ಪ್ರಯತ್ನದಲ್ಲಿ ಜೀವವನ್ನು ಪಣವಾಗಿಡಬೇಕಾಗುತ್ತದೆ. ಹೀಗಾಗಿ, ಈ ವೃತ್ತಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರುವುದು ಅವಶ್ಯಕ ಎಂದರು. ಬಳಿಕ, ಸ್ಪರ್ಧೆಯಲ್ಲಿ ಭಾಗವಹಿಸಿರುವ ಆರು ತಂಡಗಳ ಕ್ರೀಡಾಪಟುಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್ ಮೀನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‌ ಕುಮಾರ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಗೀತಾ ಪ್ರಸನ್ನ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.