ADVERTISEMENT

ಬಿಸಿಯೂಟ ನೌಕರರ ವೇತನ ಹೆಚ್ಚಳಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 9:31 IST
Last Updated 20 ಮಾರ್ಚ್ 2017, 9:31 IST

ಚಾಮರಾಜನಗರ: ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಬಿಸಿಯೂಟ ನೌಕರರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಶೀಘ್ರವೇ, ನೌಕರರ ವೇತನ ಹೆಚ್ಚಿಸಬೇಕು. ನಿವೃತ್ತಿ ಹೊಂದುವ ನೌಕರರಿಗೆ ನಿವೃತ್ತಿ ವೇತನ ಘೋಷಿಸಬೇಕು ಎಂದು ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಘಟಕ ಒತ್ತಾಯಿಸಿದೆ.

ಅಕ್ಷರ ದಾಸೋಹ ಯೋಜನೆ ಜಾರಿಯಾಗಿ 15 ವರ್ಷ ಕಳೆದಿವೆ. ದೇಶದಲ್ಲಿ ರಾಜ್ಯವು ಯೋಜನೆಯ ಜಾರಿಯಲ್ಲಿ ಮೊದಲ ಸ್ಥಾನದಲ್ಲಿದೆ. ಸರ್ಕಾರಿ ಶಾಲೆಗಳ ಪರೀಕ್ಷೆಯ ಫಲಿತಾಂಶವೂ ಸುಧಾರಣೆಯಾಗಿದೆ. ಈ ಯಶಸ್ಸಿನಲ್ಲಿ ಬಿಸಿಯೂಟ ಪಾಲೂ ಇದೆ ಎಂದು ಸಂಘ ತಿಳಿಸಿದೆ.

ಬಿಸಿಯೂಟ ಯೋಜನೆಯಡಿ ದಿನನಿತ್ಯ 1.19 ಲಕ್ಷ ಮಹಿಳೆಯರು 63 ಲಕ್ಷ ಮಕ್ಕಳಿಗೆ ಅಡುಗೆ ಮಾಡಿ ಬಡಿಸುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 3.30ರವರೆಗೆ ಸ್ವಚ್ಛತಾ ಕೆಲಸ, ಅಡುಗೆ ಮಾಡಿ ಬಡಿಸುವುದು, ನೀರು ತರುವುದು ಸೇರಿದಂತೆ ಶಾಲೆಗಳಲ್ಲಿ ನಡೆಯುವ ಎಲ್ಲ ಸಾರ್ವತ್ರಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಜತೆಗೆ, ಬೇಸಿಗೆ ರಜೆಯಲ್ಲೂ ಅಡುಗೆ ಮಾಡಬೇಕಿದೆ. ಇಂಥಹ ಅಡುಗೆದಾರರನ್ನು ಸರ್ಕಾರ ಸ್ವಲ್ಪವು ಗಮನಹರಿಸದೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ದೂರಿದೆ.

ಪ್ರಸ್ತುತ ಬೆಲೆ ಏರಿಕೆಯಿಂದ ಅಕ್ಷರ ದಾಸೋಹ ಸಿಬ್ಬಂದಿ ಕುಟುಂಬ ನಿರ್ವಹಣೆ ಮಾಡಲಾಗದೆ ನರಳುತ್ತಿದ್ದಾರೆ. ಅವರಿಗೆ ಕೇವಲ ತಿಂಗಳಿಗೆ ₹ 1,900 ರಿಂದ ₹ 2 ಸಾವಿರ ಸಂಭಾವನೆ ಮಾತ್ರ ನೀಡಲಾಗುತ್ತಿದೆ. ಕೂಡಲೇ, ವೇತನ ವೇತನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದೆ.

ಸಮಾನ ಕೆಲಸಕ್ಕೆ- ಸಮಾನ ವೇತನ ನೀಡಬೇಕು ಎಂದು 2016ರಲ್ಲಿ ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ನ್ಯಾಯಾಲಯದ ಆದೇಶದ ಜಾರಿಗೆ ಹಿಂದೇಟು ಹಾಕಿವೆ ಎಂದು ಆರೋಪಿಸಿದೆ.

ಬಜೆಟ್‌ನಲ್ಲಿ 4 ಲಕ್ಷ ಮಕ್ಕಳಿಗೆ ಸಾರವರ್ಧಕ ಅಕ್ಕಿ ನೀಡುವ ನೆಪದಲ್ಲಿ 4 ಜಿಲ್ಲೆಯಲ್ಲಿ ವಿಕೇಂದ್ರಿಕರಣ ವ್ಯವಸ್ಥೆ ಜಾರಿಗೆ ಹೊರಟಿರುವ ಕ್ರಮ ಖಂಡನೀಯ. ಸರ್ಕಾರ ಕೂಡಲೇ ವಿಕೇಂದ್ರಿಕರಣ ಪ್ರಕ್ರಿಯೆ ಕೈಬಿಡಬೇಕು. ಇಲ್ಲವಾದರೆ ರಾಜ್ಯ ವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷೆ ಗೌರಮ್ಮ ಮತ್ತು ಗೌರವಾಧ್ಯಕ್ಷ ಜೆ. ಸುರೇಶ್‌ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.