ADVERTISEMENT

ಮಹದಾಯಿ ಇತ್ಯರ್ಥಕ್ಕೆ ವಾಟಾಳ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2017, 8:43 IST
Last Updated 29 ಡಿಸೆಂಬರ್ 2017, 8:43 IST

ಚಾಮರಾಜನಗರ: ‘ಮಹದಾಯಿ, ಕಳಸಾ ಬಂಡೂರಿ ಹಾಗೂ ಮೇಕೆದಾಟು ಯೋಜನೆಯ ವಿವಾದಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯಸ್ಥಿಕೆಯಲ್ಲಿ ಇತ್ಯರ್ಥ ಪಡಿಸಬೇಕು’ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್ ಆಗ್ರಹಿಸಿದರು. ತಾಲ್ಲೂಕಿನ ಅರಕಲವಾಡಿ ಗ್ರಾಮದಲ್ಲಿ ಬುಧವಾರ ನಡೆದ ಗಡಿನಾಡು ಕನ್ನಡಿಗರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತರ ಕರ್ನಾಟಕದ ರೈತರು ಕುಡಿಯುವ ನೀರಿಗಾಗಿ ಒಂದು ವರ್ಷದಿಂದ ಹೋರಾಟ ಮಾಡುತ್ತಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಹಾಗಾಗಿ, ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳ ಸಭೆ ಕರೆದು ರೈತರ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದರು.

ಮಹದಾಯಿ, ಕಳಸಾ ಬಂಡೂರಿ ಹಾಗೂ ಮೇಕೆದಾಟು ವಿಚಾರವನ್ನು ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ರಾಜಕೀಯವಾಗಿ ಬಳಸಿಕೊಳ್ಳುತ್ತಿವೆ. ಈ ಸಂಬಂಧ ಹೋರಾಟ ನಡೆಸಲು ಜ. 10ರಂದು ಬೃಹತ್‌ ಸಮಾವೇಶ ಏರ್ಪಡಿಸಲಾಗುವುದು ಎಂದರು.

ADVERTISEMENT

ಸಚಿವ ಅನಂತ್‌ಕುಮಾರ್‌ ಹೆಗಡೆ ಅವರು ಸಂವಿಧಾನದ ವಿರುದ್ಧ ಹೇಳಿಕೆ ನೀಡಿರುವುದು ಖಂಡನೀಯ. ಸಂವಿಧಾನಕ್ಕೆ ಪ್ರತಿಯೊಬ್ಬರೂ ಗೌರವ ಕೊಡಬೇಕು. ಗೌರವಯುತ ಸ್ಥಾನದಲ್ಲಿರುವವರು ನಾಲಿಗೆಯನ್ನು ಬಿಗಿ ಹಿಡಿದು ಮಾತನಾಡಬೇಕು. ಈ ರೀತಿಯಾಗಿ ಹೇಳಿಕೆ ನೀಡುವುದು ಸಮಂಜಸವಲ್ಲ. ಕೂಡಲೇ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.

‘ನಾನು ರಾಜ್ಯದಲ್ಲಿ 50 ವರ್ಷದಿಂದ ನಾಡು, ನುಡಿ, ಭಾಷೆ, ಗಡಿನಾಡು, ಹೊರನಾಡು ಬಗ್ಗೆ ನಿರಂತರವಾಗಿ ಚಳವಳಿ ಮಾಡುತ್ತಾ ಬಂದಿದ್ದೇನೆ. ಯಾವುದೇ ಅಧಿಕಾರಕ್ಕೆ ಆಸೆ ಪಟ್ಟವನಲ್ಲ. 10 ವರ್ಷದಿಂದ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಶಾಸನ ಸಭೆಯಲ್ಲಿ ಯಾರೂ ಧ್ವನಿ ಎತ್ತಿಲ್ಲ. ನಾನು ಶಾಸಕನಾಗಿದ್ದಾಗ ಒಂದು ದಿನವೂ ಶಾಸನ ಸಭೆಗೆ ಗೈರು ಹಾಜರಾಗದೆ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುತ್ತಿದ್ದೆ. ಮುಂದಿನ ಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ರಾಜ್ಯ ಬಿಎಸ್‌ಪಿ ಪ್ರಧಾನ ಕಾರ್ಯ ದರ್ಶಿ ಅರಕಲವಾಡಿ ನಾಗೇಂದ್ರ ಮಾತನಾಡಿ, ವಾಟಾಳ್ ನಾಗರಾಜ್ ಅವರು ಯಾವುದೇ ಜಾತಿಗೆ ಸೀಮಿತರಾದ ವ್ಯಕ್ತಿಯಲ್ಲ. ಅವರು ಜಾತ್ಯತೀತ. ಚಾಮರಾಜನಗರವನ್ನು ಜಿಲ್ಲೆಯನ್ನಾಗಿ ಮಾಡಿದರು. ಕಾವೇರಿ ನೀರು ತಂದುಕೊಟ್ಟರು. ಎಲ್ಲ ವರ್ಗಗಳ ಜನರ ಸಮಸ್ಯೆಗೆ ಪಕ್ಷಭೇದ ಮರೆತು ಸ್ಪಂದಿಸಿದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ರವಿಕುಮಾರ್, ದಳಪತಿ ವೀರತಪ್ಪ, ಬಸವರಾಜು, ನಾಗಮಲ್ಲಪ್ಪ, ಗುಂಡೂರಾವ್, ಮಹದೇವಪ್ಪ, ಕರಿನಾಯಕರು, ನಾಗರಾಜಮೂರ್ತಿ, ಶಿವಕುಮಾರ್, ಕೆಂಪಣ್ಣ, ರಾಜಣ್ಣ, ಹುಂಡಿಬಸವಣ್ಣ, ಸುರೇಶ್‌ನಾಗ್, ಚೆನ್ನಮಲ್ಲಪ್ಪ, ನಿಂಗಶೆಟ್ಟಿ, ಕಾರ್‌ನಾಗೇಶ್, ರಾಮಯ್ಯ, ವೀರಭದ್ರಪ್ಪ, ಮಹೇಶ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.