ADVERTISEMENT

ವಂತಿಕೆ, ಹೆಚ್ಚುವರಿ ಶುಲ್ಕ; ನಿರ್ದಾಕ್ಷಿಣ್ಯ ಕ್ರಮ

ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾಧಿಕಾರಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2017, 10:48 IST
Last Updated 28 ಫೆಬ್ರುವರಿ 2017, 10:48 IST

ಚಾಮರಾಜನಗರ: ಜಿಲ್ಲೆಯ ಯಾವುದೇ ಖಾಸಗಿ ಅನುದಾನರಹಿತ, ಅನುದಾನಿತ ಶಾಲೆಗಳು ಸರ್ಕಾರ ನಿಗದಿ ಮಾಡಿದ್ದ ಕ್ಕಿಂತ ಹೆಚ್ಚುವರಿಯಾಗಿ ಪೋಷಕರಿಂದ ಶುಲ್ಕ ಪಡೆದಲ್ಲಿ ಅಂತಹ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸ ಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ರಾಮು ಎಚ್ಚರಿಕೆ ನೀಡಿದರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರದ ಸಭೆಯಲ್ಲಿ ಅವರು ಮಾತನಾಡಿದರು.

ಸೇವಾ ಮನೋಭಾವನೆಯಿಂದ ಶಾಲೆಗಳನ್ನು ತೆರೆಯಲಾಗಿದೆ. ಆ ಉದ್ದೇಶ ಗಮನದಲ್ಲಿಟ್ಟುಕೊಂಡು ಶಾಲೆ ನಡೆಸ ಬೇಕು. ಸರ್ಕಾರ ನಿಗದಿ ಮಾಡಿರುವ ಶುಲ್ಕಕ್ಕಿಂತ ಒಂದು ಪೈಸೆ ಸಹ ಹೆಚ್ಚುವರಿ ಯಾಗಿ ಪಡೆಯುವಂತಿಲ್ಲ. ಹೆಚ್ಚುವರಿ ಶುಲ್ಕ ಪಡೆದಿರುವ ದಾಖಲೆಗಳೊಂದಿಗೆ ದೂರು ಬಂದಲ್ಲಿ ಅಂತಹ ಶಾಲೆಗಳ ವಿರುದ್ಧ ಗಂಭೀರವಾಗಿ ಕ್ರಮ ತೆಗೆದು ಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ADVERTISEMENT

ಶಾಲೆಗಳು ಬೇರೆ ಯಾವುದೇ ಕಾರಣ ಇಟ್ಟುಕೊಂಡು ಪೋಷಕರಿಂದ ಹಣ ವಸೂಲಿ ಮಾಡುವಂತಿಲ್ಲ. ಅಭಿವೃದ್ಧಿ, ಕಟ್ಟಡ ಶುಲ್ಕ ಸೇರಿದಂತೆ ಇತರೆ ಕಾರಣ ಹೇಳಿ ಡೊನೇಶನ್ ಪಡೆಯುವಂತಿಲ್ಲ. ಹೀಗೆ ಮಾಡಿದರೆ ಸರ್ಕಾರದ ಆದೇಶ ಉಲ್ಲಂಘಿಸಿದಂತಾಗುತ್ತದೆ. ಈ ರೀತಿ ಯಾಗಿ ನಿಯಮ ಉಲ್ಲಂಘಿಸಿ ಶುಲ್ಕ ಪಡೆಯುವುದು ಕಂಡುಬಂದರೆ ಆ ಶಾಲೆಯ ಮುಖ್ಯ ಶಿಕ್ಷಕರು, ಶಾಲಾ ಮಂಡಳಿಯ ಮುಖ್ಯಸ್ಥರು ಹೊಣೆಗಾರ ರಾಗುತ್ತಾರೆ. ಇವರ ವಿರುದ್ಧ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ಶಿಸ್ತು ಕ್ರಮ ಜರುಗಿಸಲಿದೆ ಎಂದು ತಿಳಿಸಿದರು.

ಕಳೆದ ಬಾರಿ ನಡೆದ ಸಭೆಯಲ್ಲಿ ಜಿಲ್ಲೆಯ ಕೆಲ ಶಾಲೆಗಳು ಹೆಚ್ಚುವರಿಯಾಗಿ ಶುಲ್ಕ ಪಡೆದಿರುವ ಬಗ್ಗೆ ಮುಖಂಡರು ಪ್ರಸ್ತಾಪ ಮಾಡಿದ್ದರು. ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಶಿಕ್ಷಣ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಹೆಚ್ಚುವರಿ ಶುಲ್ಕ ಪಡೆದಿರುವ ಶಾಲೆಗಳು ಈ ಶೈಕ್ಷಣಿಕ ಸಾಲಿನ ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶುಲ್ಕ ಹಿಂದಿರುಗಿಸಿ ಪ್ರಸಕ್ತ ಸಾಲಿನ ನಿಗದಿತ ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಳ್ಳಲು ಸೂಚಿಸಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‌ಕುಮಾರ್ ಮಾತನಾಡಿ, ಕಾನೂ ನಾತ್ಮಕವಾಗಿ ಪೋಷಕರು, ವಿದ್ಯಾರ್ಥಿ ಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಎಲ್ಲಾ ರೀತಿಯ ಅವಕಾಶಗಳಿವೆ. ಆದರೆ, ನಿಗದಿ ಮಾಡಿದ್ದಕ್ಕಿಂತ ಹೆಚ್ಚುವರಿ ಶುಲ್ಕ ಪಡೆ ಯಲು ಶಿಕ್ಷಣ ಸಂಸ್ಥೆಗಳಿಗೆ ಅವಕಾಶ ವಿಲ್ಲ ಎಂದು ತಿಳಿಸಿದರು.

ಕಳೆದ ಬಾರಿ ಸಭೆಯಲ್ಲಿ ಪ್ರಸ್ತಾಪಿಸಿರು ವಂತೆ ಹೆಚ್ಚುವರಿ ಶುಲ್ಕ ಪಡೆದಿರುವ ಶಾಲೆಗಳ ಲೆಕ್ಕಪತ್ರವನ್ನು ಆಡಿಟ್ ಮಾಡಿಸಲಾಗುತ್ತದೆ. ಪ್ರವೇಶ ಪ್ರಕ್ರಿಯೆ ಯಲ್ಲಿ ವಂತಿಕೆ, ಡೊನೇಶನ್ ಪಡೆಯುವ ಸಂಬಂಧ ದೂರುಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಬಹುದು ಎಂದರು.

ಈ ವೇಳೆ ಮುಖಂಡರಾದ ಅರಕಲ ವಾಡಿ ನಾಗೇಂದ್ರ, ಸಿ.ಎಂ. ಕೃಷ್ಣಮೂರ್ತಿ, ಕೆ.ಎಂ. ನಾಗರಾಜು, ಸಿ.ಕೆ. ಮಂಜು ನಾಥ್ ಸೇರಿದಂತೆ ಇತರರು ಕಳೆದ ಸಲ ನಡೆದ ಸಭೆಯಲ್ಲಿನ ನಡಾವಳಿ ಅನು ಪಾಲನಾ ವರದಿ ಮಂಡನೆಯಾಗಬೇಕು. ಹಿಂದಿನ ಸಭೆಯಲ್ಲಿ ಮುಂದಿಟ್ಟ ಸಮಸ್ಯೆ ಗಳಿಗೆ ಯಾವ ಪರಿಹಾರ ದೊರೆತಿದೇ ಎಂಬುದನ್ನು ನಿರ್ದಿಷ್ಟವಾಗಿ ತಿಳಿಸಬೇಕು ಎಂದು ಒತ್ತಾಯಿಸಿದರು.

ಪೋಷಕರು ಎದುರಿಸುತ್ತಿರುವ ಹಲವು ಸಮಸ್ಯೆ ಮತ್ತು ಶಾಲೆಗಳು ನಿಯಮ ಬಾಹಿರವಾಗಿ ವಸೂಲಿ ಮಾಡು ತ್ತಿರುವ ಶುಲ್ಕ, ಖಾಸಗಿ ಶಾಲೆಗಳಲ್ಲಿ ಶಿಕ್ಷಕರಿಗೆ ನೀಡುತ್ತಿರುವ ಕನಿಷ್ಠ ವೇತನ, ಶಿಕ್ಷಣದ ಗುಣಮಟ್ಟ ಇತರೆ ವಿಷಯವನ್ನು ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಮಂಜುಳಾ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ರಜಿನಾ ಪಿ. ಮೆಲಾಕಿ, ಬ್ಲಾಕ್ ಮಟ್ಟದ ಶಿಕ್ಷಣ ಅಧಿಕಾರಿಗಳು, ಖಾಸಗಿ ಶಾಲೆಗಳ ಪ್ರತಿನಿಧಿಗಳು, ಸಂಘಸಂಸ್ಥೆಗಳ ಮುಖಂಡರು ಸೇರಿದಂತೆ ಇತರರು ಹಾಜರಿದ್ದರು.

* ಶಾಲಾ ಮಂಡಳಿಗಳು ಪ್ರವೇಶ ಸಂಬಂಧ ಅನುಸರಿಸಬೇಕಿರುವ ನಿಯಮ ಮಾರ್ಗಸೂಚಿ ತಿಳಿಸಲಾಗಿದೆ. ಈ ಪ್ರಕಾರವೇ ನಿಯಮಬದ್ಧವಾಗಿ ನಿಗದಿತ ಶುಲ್ಕ ಪಡೆಯಬೇಕು

–ಬಿ.ರಾಮು
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.