ADVERTISEMENT

ಶೀಘ್ರ ಸ್ಮಾ ರ್ಟ್ ಯೋಜನೆ ಜಾರಿ: ಸಿಇಒ

​ಪ್ರಜಾವಾಣಿ ವಾರ್ತೆ
Published 27 ಜೂನ್ 2016, 11:06 IST
Last Updated 27 ಜೂನ್ 2016, 11:06 IST

ಚಾಮರಾಜನಗರ: ‘ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಂಡು ಅದರ ಈಡೇರಿಕೆಗೆ ಪರಿಶ್ರಮಪಡಬೇಕು’ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಕಿವಿಮಾತು ಹೇಳಿದರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಬಹುಜನ ವಿದ್ಯಾರ್ಥಿ ಸಂಘದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನದ ಅಂಗವಾಗಿ ಎಸ್ಎಸ್ಎಲ್‌ಸಿಯಲ್ಲಿ ಶೇ 80 ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ 75ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲೆಯ ಶೈಕ್ಷಣಿಕಮಟ್ಟದ ಸುಧಾರಣೆಗೆ ಒತ್ತು ನೀಡುವ ಮೂಲಕ ಫಲಿತಾಂಶ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ಇದಕ್ಕಾಗಿ ‘ಸ್ಮಾರ್ಟ್’ (SMART– ಸಪೋರ್ಟ್ ಮೆಂಟರಿಂಗ್‌ ಅಂಡ್‌ ರೆಸ್‌ಫಾನ್ಸಿವ್‌ ಟೀಚಿಂಗ್) ಯೋಜನೆ ರೂಪಿಸಲಾಗಿದೆ. ಶಿಕ್ಷಕರನ್ನು ಬಳಸಿ ಕೊಂಡು ಈ ಯೋಜನೆಯ ಯಶಸ್ಸಿಗೆ ಕ್ರಮವಹಿಸಲಾಗುವುದು ಎಂದರು.

ಎಸ್ಎಸ್ಎಲ್‌ಸಿ, ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಹೆಚ್ಚಿಸುವುದೇ ‘ಸ್ಮಾರ್ಟ್’ ಮೂಲ ಗುರಿ. ಈಗಾಗಲೇ ಶಿಕ್ಷಣ ಇಲಾಖೆ ಆಯುಕ್ತರು, ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದ್ದು, ಯೋಜನೆ ಅನುಷ್ಠಾನಕ್ಕೆ ಅನುಮೋದನೆಯೂ ಸಿಕ್ಕಿದೆ ಎಂದರು.

ಬೆಂಗಳೂರು ವಿಕಾಸಸೌಧದ ಗೃಹ ಮತ್ತು ನಗರಾಭಿವೃದ್ಧಿ ವಿಭಾಗದ ಜಂಟಿ ನಿರ್ದೇಶಕ ಚಂದ್ರಶೇಖರಯ್ಯ ಮಾತ ನಾಡಿ, ವಿದ್ಯಾರ್ಥಿಗಳು ಟಿವಿ, ಮೊಬೈಲ್ ಬಳಕೆಯಿಂದ ದೂರವಿರಬೇಕು. ಶ್ರಮ ಪಟ್ಟು ಓದಿದರೆ ಯಶಸ್ಸು ಕಟ್ಟಿಟ್ಟಬುತ್ತಿ ಎಂದರು.

ಶಿಕ್ಷಣ ಖಾಸಗೀಕರಣಗೊಂಡಿದೆ. ಹಾಗಾಗಿ, ವಿದ್ಯಾರ್ಥಿಗಳು ಕನ್ನಡ ಭಾಷೆ ಜತೆಗೆ ಕಡ್ಡಾಯವಾಗಿ ಇಂಗ್ಲಿಷ್, ಕಂಪ್ಯೂಟರ್ ಶಿಕ್ಷಣ ಪಡೆಯಬೇಕು ಎಂದು ಹೇಳಿದರು.ಬೆಂಗಳೂರು ಬಿಬಿಎಂಪಿ ಕಾರ್ಯ ಪಾಲಕ ಎಂಜಿನಿಯರ್‌ ಎಂ.ಲೋಕೇಶ್ ಅಧ್ಯಕ್ಷತೆವಹಿಸಿದ್ದರು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಸ್‌. ಮಮತಾ, ಬೆಂಗಳೂರು ಕೃಷಿ ವಿವಿ ನಿವೃತ್ತಿ ಕೃಷಿ ಎಂಜಿನಿಯರ್ ಕೆ.ಆರ್. ಮಹದೇವಯ್ಯ, ಕೆಆರ್‌ಐಡಿಎಲ್‌ನ ಸಹಾಯಕ ಎಂಜಿನಿಯರ್‌ ಚಿಕ್ಕಲಿಂಗಯ್ಯ, ಪ್ರಗತಿಪರ ರೈತ ನಾಸೀರ್ ಅಹಮ್ಮದ್, ಎಸ್.ಕೃಷ್ಣಮೂರ್ತಿ, ಪಟ್ಟಣ ಪೊಲೀಸ್ ಠಾಣೆ ಸಿಪಿಐ ಶ್ರೀಕಾಂತ್, ಸಂಘದ ಜಿಲ್ಲಾ ಅಧ್ಯಕ್ಷ ನಾರಾಯಣ್ ಉಪ್ಪಾರ್, ಸಂಯೋಜಕ ಪರ್ವತ್‌ ರಾಜ್, ವೆಂಕಟೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.