ADVERTISEMENT

ಸಕ್ಕರೆ ಇಳುವರಿ; ಕಾರ್ಖಾನೆಗಳಿಂದ ಮೋಸ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 6:03 IST
Last Updated 13 ನವೆಂಬರ್ 2017, 6:03 IST

ಚಾಮರಾಜನಗರ: ‘ಸಕ್ಕರೆ ಇಳುವರಿ ಯಲ್ಲಿ ಕಾರ್ಖಾನೆಗಳು ಕಡಿಮೆ ಪ್ರಮಾಣ ದಾಖಲಿಸುವ ಮೂಲಕ ರೈತರಿಗೆ ಮೋಸ ಮಾಡುತ್ತಿವೆ’ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಆರೋಪಿಸಿದರು.

‘ರಾಜ್ಯದಲ್ಲಿ ಎಸ್‌ ಎಪಿ ಕಾಯ್ದೆ ಜಾರಿಗೆ ಬಂದ ನಂತರ ಕಾರ್ಖಾನೆಗಳು ಪ್ರತಿ ಟನ್‌ ಕಬ್ಬಿಗೆ 105 ಕೆ.ಜಿ ಬರುತ್ತಿದ್ದ ಸಕ್ಕರೆ ಇಳುವರಿಯನ್ನು 85 ಕೆ.ಜಿ.ಗೆ ಇಳಿಕೆಯಾಗಿದೆ ಎಂದು ಸರ್ಕಾರಕ್ಕೆ ಸುಳ್ಳು ವರದಿ ನೀಡುತ್ತಿವೆ. ಇದರಿಂದ ರೈತರಿಗೆ ಪ್ರತಿ ಟನ್‌ಗೆ ₹ 400ರಿಂದ 500ರವರೆಗೆ ನಷ್ಟವಾಗುತ್ತಿದೆ’ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

2016ನೇ ಸಾಲಿ ನಲ್ಲಿ ಕಬ್ಬಿನ ಅಂತಿಮ ಕಂತು ಎಸ್‌ಎಪಿ ಕಾಯ್ದೆ ಪ್ರಕಾರ, ಮಹದೇಶ್ವರ ಸಕ್ಕರೆ ಕಾರ್ಖಾನೆಯು ಕಬ್ಬು ಸರಬರಾಜು ಮಾಡಿರುವ ರೈತರಿಗೆ ಟನ್‌ಗೆ ₹ 100 ಹಾಗೂ ಅಳಗಂಚಿಯ ಬಣ್ಣಾರಿ ಸಕ್ಕರೆ ಕಾರ್ಖಾನೆಯು ₹ 90 ಬಾಕಿ ಹಣ ಉಳಿಸಿಕೊಂಡಿದ್ದು, ಜಿಲ್ಲಾಡಳಿತ ಈ ಹಣವನ್ನು ರೈತರಿಗೆ ಕೊಡಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ಪ್ರಸಕ್ತ ಸಾಲಿನ ಕಬ್ಬಿನ ದರವನ್ನು ಇದೇ 15ರೊಳಗೆ ಸಕ್ಕರೆ ಕಾರ್ಖಾನೆಗಳೇ ಎಫ್‌ಆರ್‌ಪಿ ಮೇಲೆ ₹ 200 ಹೆಚ್ಚುವರಿಯಾಗಿ ನೀಡಬೇಕೆಂದು ಸರ್ಕಾರ ಸೂಚಿಸಬೇಕು. ಇಲ್ಲದಿದ್ದರೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಟನ್‌ಗೆ 105 ಕೆ.ಜಿ ಬರುವ ಕಬ್ಬಿಗೆ ಬೆಳಗಾವಿಯಲ್ಲಿ ಕಟಾವು, ಸಾಗಾಣಿಕೆ ವೆಚ್ಚ ಹೊರತುಪಡಿಸಿ ಮೊದಲ ಕಂತಾಗಿ ₹ 3,150 ಪಾವತಿಸುತ್ತಿದ್ದಾರೆ. ಆದರೆ, ಬಣ್ಣಾರಿ ಸಕ್ಕರೆ ಕಾರ್ಖಾನೆಯು ರೈತರಿಗೆ ಮೋಸ ಮಾಡುತ್ತಿದ್ದು, ಈ ಬಗ್ಗೆ ರೈತರು ಜಾಗೃತರಾಗಿ ಹೋರಾಟಕ್ಕೆ ಸಿದ್ಧರಾಗಬೇಕು ಎಂದರು.

ಕೇಂದ್ರ, ರಾಜ್ಯ ಸರ್ಕಾರಗಳು ರೈತರ ಸಾಲಮನ್ನಾ ವಿಚಾರದಲ್ಲಿ ನಾಟಕ ವಾಡುತ್ತಿವೆ. ಸಂಪೂರ್ಣ ಸಾಲಮನ್ನಾ ಮಾಡಲು ಮುಂದಾಗಬೇಕು. 70 ಉದ್ಯಮಿಗಳ ₹ 6 ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವ ಕೇಂದ್ರ ಸರ್ಕಾರ, ರೈತರ ಸಾಲ ಮನ್ನಾ ಮಾಡಲು ಮೀನಮೇಷ ಎಣಿಸುವ ಮೂಲಕ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು. ಕಬ್ಬು ಬೆಳೆಗಾರರ ಸಂಘದ ಕಾರ್ಯ ಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌, ಮುಖಂಡರಾದ ಮಹದೇವಸ್ವಾಮಿ, ಕುಂತೂರು ಪ್ರಭುಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.