ADVERTISEMENT

ರಾಷ್ಟ್ರೀಯ ಹೆದ್ದಾರಿ ತಡೆದು ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 9:51 IST
Last Updated 7 ಫೆಬ್ರುವರಿ 2018, 9:51 IST

ಕೊಳ್ಳೇಗಾಲ: ಗೋಮಾಳ ಭೂಮಿ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿ ತಾಲ್ಲೂಕಿನ ಕುಂತೂರು ಗ್ರಾಮದಲ್ಲಿ ಮಂಗಳವಾರ ರೈತರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಗ್ರಾಮದ ಕುಂತೂರು ವೃತ್ತದ ಮೈಸೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಅರ್ಧಗಂಟೆಗೂ ಹೆಚ್ಚು ಕಾಲ ರಸ್ತೆತಡೆ ನಡೆಸಿ ಘೋಷಣೆ ಕೂಗಿದರು.

ಗ್ರಾಮದ ಸರ್ವೇ ನಂ. 78ರಲ್ಲಿನ 210 ಎಕರೆ ಗೋಮಾಳ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಸಕ್ಕರೆ ಕಾರ್ಖಾನೆ, ಕೆರೆ–ಕಟ್ಟೆ ನಿರ್ಮಾಣ ಮಾಡಲಾಗಿದೆ. ಇದನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ರೈತ ಮುಖಂಡ ನಂಜುಂಡಸ್ವಾಮಿ ಮಾತನಾಡಿ, ಕುಂತೂರು ಗ್ರಾಮದಲ್ಲಿ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

4 ವರ್ಷದಿಂದ ನಡೆಸುತ್ತಿರುವ ಪ್ರತಿಭಟನೆಯನ್ನು ಬಂಡವಾಳಶಾಹಿಗಳು ಮತ್ತು ರಾಜಕಾರಣಿಗಳ ಒತ್ತಡಕ್ಕೆ ಮಣಿದ ಅಧಿಕಾರಿಗಳು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ನೂರಾರು ವರ್ಷಗಳಿಂದ ಗ್ರಾಮದ ಜನರಿಗೆ ಮೀಸಲಿರಿಸಿದ್ದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಗೋಮಾಳ ಜಾಗವನ್ನು ಗ್ರಾಮಸ್ಥರಿಗೆ ತಿಳಿಸದೆ ಕೆಲವು ರಾಜಕಾರಣಿಗಳು ಹಾಗೂ ಅಧಿಕಾರಿಗಳು ಖಾಸಗಿ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಅಕ್ರಮವಾಗಿ ಪರಭಾರೆ ಮಾಡಿದ್ದಾರೆ ಎಂದು ಆರೋಪಿಸಿದರು.

ಆ ಜಾಗದಲ್ಲಿ ದನ, ಕರುಗಳನ್ನು ಮೇಯಿಸಲು ಹೋದ ಗ್ರಾಮಸ್ಥರೊಂದಿಗೆ ಗೂಂಡಾಗಳ ರೀತಿ ವರ್ತಿಸಲಾಗುತ್ತಿದೆ. ರೈತರು ಹಾಗೂ ಗ್ರಾಮಸ್ಥರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಅಕ್ರಮವಾಗಿ ಪರಭಾರೆ ಮಾಡಿರುವ 210 ಎಕರೆ ಜಮೀನಿನ ಖಾತೆಯನ್ನು ರದ್ದುಪಡಿಸಿ ಗ್ರಾಮಸ್ಥರಿಗೆ ಆ ಜಮೀನನ್ನು ವಾಪಸ್ ಕೊಡಿಸಬೇಕು. ಇಲ್ಲವಾದರೆ ಉಗ್ರರೂಪದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಭೇಟಿ ನೀಡಿದ ಉಪವಿಭಾಗ ಡಿವೈಎಸ್‍ಪಿ ಪುಟ್ಟಮಾದಯ್ಯ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಗ್ರಾಮಸ್ಥರ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು. ನಂತರ ಗ್ರಾಮಸ್ಥರು ಪ್ರತಿಭಟನೆಯನ್ನು ಕೈಬಿಟ್ಟರು.

ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ನಾಗರಾಜಪ್ಪ, ಶ್ರೀಕಂಠಸ್ವಾಮಿ, ಬಸವಣ್ಣ, ಮಹದೇವಪ್ಪ, ನಂಜುಂಡಸ್ವಾಮಿ, ನಾಗಪ್ಪ, ಸ್ವಾಮಿ, ರಾಜು, ನಂಜುಂಡ, ಜಯರಾಮು, ನಾಗಮಹದೇವ, ಶಂಭುಲಿಂಗ, ಮಾದೇಶ, ಗ್ರಾಮದ ವಿವಿಧ ಜನಾಂಗದ ಮುಖಂಡರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.