ADVERTISEMENT

ಕಳೆದ ವರ್ಷ ₹ 9 ಕೋಟಿ ತೆರಿಗೆ ಸಂಗ್ರಹ

ಆದಾಯ ತೆರಿಗೆ ಇಲಾಖೆ ವತಿಯಿಂದ ಆದಾಯ ತೆರಿಗೆ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2017, 5:15 IST
Last Updated 25 ಜುಲೈ 2017, 5:15 IST

ಚಿಕ್ಕಬಳ್ಳಾಪುರ: ‘ಜಿಲ್ಲೆಯಲ್ಲಿ ಕಳೆದ ವರ್ಷ ₹ 5.9 ಕೋಟಿ ಆದಾಯ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿತ್ತು. ಆದರೆ ₹ 9 ಕೋಟಿ ಸಂಗ್ರಹವಾಗಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗೆ  ₹ 60 ಲಕ್ಷ ತೆರಿಗೆ ಸಂಗ್ರಹವಾಗಿದೆ’ ಎಂದು ಆದಾಯ ತೆರಿಗೆ ಅಧಿಕಾರಿ (ವಾರ್ಡ್‌–1) ಎನ್‌. ಸಾಯಿಕರ್ನನ್‌ ತಿಳಿಸಿದರು.

ನಗರದಲ್ಲಿ ಸೋಮವಾರ ಆದಾಯ ತೆರಿಗೆ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಆದಾಯ ತೆರಿಗೆ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಆದಾಯ ತೆರಿಗೆಯಿಂದಲೇ ದೇಶದ ಅಭಿವೃದ್ಧಿ ಕಾರ್ಯಗಳು ನಡೆಯುವುದರಿಂದ ಪ್ರತಿಯೊಬ್ಬ ತೆರಿಗೆದಾರರು ಪ್ರಾಮಾಣಿಕವಾಗಿ ತೆರಿಗೆ ಪಾವತಿಸಬೇಕು. ತೆರಿಗೆ ವಂಚನೆ ಮಾಡುವುದು ಅಪರಾಧ. ವಂಚಿಸಿದ್ದು ಸಾಬೀತಾದರೆ ದಂಡ ಮತ್ತು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ’ ಎಂದು ಹೇಳಿದರು.

ADVERTISEMENT

ಆದಾಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ದೀಪಕ್‌ ಮಾತನಾಡಿ, ‘ದೇಶದ ಆರ್ಥಿಕ ವ್ಯವಸ್ಥೆಗೆ ಆದಾಯ ತೆರಿಗೆ ಪ್ರಮುಖ ಸಂಪನ್ಮೂಲ. ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆಯನ್ನು ಶಿಕ್ಷಣ, ಆರೋಗ್ಯ, ವೈಜ್ಞಾನಿಕ ಸಂಶೋಧನೆ, ರಕ್ಷಣೆ, ಮೂಲಸೌಕರ್ಯ ಅಭಿವೃದ್ಧಿ ಸೇರಿದ್ದಂತೆ ವಿವಿಧ ಕ್ಷೇತ್ರಗಳಿಗೆ ಬಳಕೆ ಮಾಡಲಾಗುತ್ತದೆ’ ಎಂದರು.

‘ನೂತನವಾಗಿ ಜಾರಿಗೆ ಬಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಉತ್ತಮ ಯೋಜನೆಯಾಗಿದೆ. ಜಿಎಸ್‌ಟಿಯಿಂದ ಹೆಚ್ಚು ತೆರಿಗೆ ಕಟ್ಟಬೇಕಾಗುತ್ತದೆ ಎಂಬುದು ತಪ್ಪು ಕಲ್ಪನೆ. ಜಿಎಸ್‌ಟಿ ಅಂಕಿಅಂಶಗಳನ್ನು ಗಮನಿಸಿದರೆ ಶೇ 80ರಷ್ಟು ಉತ್ಪನ್ನಗಳ ತೆರಿಗೆ ಕಡಿಮೆಯಾಗಲಿದೆ. ಐಷಾರಾಮಿ ವಸ್ತುಗಳ ಮೇಲೆ ಮಾತ್ರ ಸ್ವಲ್ಪಮಟ್ಟಿಗೆ ತೆರಿಗೆ ಹೆಚ್ಚಲಿದೆ’ ಎಂದರು.

‘ಆದಾಯ ತೆರಿಗೆ ದಿನಾಚರಣೆ’ ನಿಮಿತ್ತ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಇಲಾಖೆ ಅಧಿಕಾರಿಗಳಾದ ಭಾರತಿ, ಪ್ರಸಾದ್‌ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.