ADVERTISEMENT

ಗಾರ್ಮೆಂಟ್ ಸ್ಥಳಾಂತರ; ಕಾರ್ಮಿಕರ ಪ್ರತಿಭಟನೆ

ಸಂಬಳ, ಪಿೆಫ್ ಕುರಿತು ಮಾಹಿತಿ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 7:24 IST
Last Updated 31 ಮಾರ್ಚ್ 2018, 7:24 IST
ಗಾರ್ಮೆಂಟ್ ಬಳಿ ಪ್ರತಿಭಟಿಸುತ್ತಿರುವ ಕಾರ್ಮಿಕರು
ಗಾರ್ಮೆಂಟ್ ಬಳಿ ಪ್ರತಿಭಟಿಸುತ್ತಿರುವ ಕಾರ್ಮಿಕರು   

ಬಾಗೇಪಲ್ಲಿ: ಪಟ್ಟಣದ ಹೊರವಲಯದ ಸ್ಕಾಟ್ಸ್ ಗಾರ್ಮೆಂಟ್ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರವಾಗುತ್ತಿದ್ದು ನೌಕರರ ಸಂಬಳ, ಪಿಎಫ್ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು ಎಂದು ಆಗ್ರಹಿಸಿ ಕಾರ್ಮಿಕರು ಗಾರ್ಮೆಂಟ್ ಮುಂದೆ ಪ್ರತಿಭಟಿಸಿದರು.

ಬಾಗೇಪಲ್ಲಿ, ಹೊಸಹುಡ್ಯ, ನಾರೇಪಲ್ಲಿ, ಆದೇಪಲ್ಲಿ, ಘಂಟಂವಾರಿಪಲ್ಲಿ ಗ್ರಾಮಗಳ 460 ಮಹಿಳೆಯರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಉತ್ಪಾದನೆ ಇಳಿಮುಖವಾದ ಕಾರಣ ಗಾರ್ಮೆಂಟ್ ಸ್ಥಳಾಂತರವಾಗುತ್ತಿದೆ. ಆದರೆ ಇದನ್ನೇ ನಂಬಿದ್ದ ಕಾರ್ಮಿಕರ ಬದುಕು ಬೀದಿ ಪಾಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.ಸಿಐಟಿಯು ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆಂಜನೇಯರೆಡ್ಡಿ, ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ಚನ್ನರಾಯಪ್ಪ ಗಾರ್ಮೆಂಟ್  ಅಧಿಕಾರಿಗಳ ಜತೆ ಚರ್ಚಿಸಿದರು.

ಆಂಜನೇಯರೆಡ್ಡಿ ಮಾತನಾಡಿ,  ಕಾರ್ಮಿಕರ ಸಂಬಳ, ಪಿಎಫ್ ಇತರೆ ಭತ್ಯೆಗಳನ್ನು ನೀಡದೆ ಹೋಗುತ್ತಿದ್ದೀರಿ. ಕಾರ್ಮಿಕರ ಪರಿಸ್ಥಿತಿ ಏನು. 3 ತಿಂಗಳಿಂದ ಕಾರ್ಮಿಕರಿಗೆ ವೇತನ ನೀಡಿಲ್ಲ. 3 ತಿಂಗಳ ಮೊದಲೇ ಸ್ಥಳಾಂತರ ಬಗ್ಗೆ ನೌಕರರಿಗೆ ತಿಳಿಸಬೇಕಿತ್ತು ಎಂದು ಪ್ರಶ್ನಿಸಿದರು. ಸಬ್‌ಇನ್‌ಸ್ಪೆಕ್ಟರ್ ಎಸ್.ಸಂದೀಪ್ ಸಹ ಚರ್ಚಿಸಿದರು.ಗಾರ್ಮೆಂಟ್ ಅಧಿಕಾರಿ ದೀಪಕ್, ಕಂಪನಿ ನಷ್ಟದಲ್ಲಿದೆ. ನಡೆಸಲು ಸಾಧ್ಯ ಇಲ್ಲ. ಇಲ್ಲಿನ ಕಾರ್ಮಿಕರು ದೊಡ್ಡಬಳ್ಳಾಪುರಕ್ಕೆ ಬರಲು ಅನುಕೂಲವಾಗುವಂತೆ ನಿತ್ಯ ಬಸ್ ವ್ಯವಸ್ಥೆ ಮಾಡಲಾಗುವುದು. ಕಾರ್ಮಿಕರು ಅಲ್ಲಿ ಬಂದು ಕೆಲಸ ಮಾಡಬಹುದು ಎಂದು ತಿಳಿಸಿದರು.ಸಂಬಳ, ಪಿಎಫ್ ಭತ್ಯೆ ಕುರಿತು ಮಾಲೀಕರ ಜತೆ ಚರ್ಚಿಸುತ್ತೇನೆ. ಮಾಲೀಕರು ಸೂಕ್ತವಾದ ನಿರ್ಣಯವನ್ನು ಶನಿವಾರ ತಿಳಿಸುವರು ಎಂದರು. ಆಗ ಕಾರ್ಮಿಕರು ಪ್ರತಿಭಟನೆ ಹಿಂಪಡೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.