ADVERTISEMENT

ಗೌರಿ ಹತ್ಯೆ: ಸಂಘಟನೆಗಳ ಪಿತೂರಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 6:56 IST
Last Updated 21 ಸೆಪ್ಟೆಂಬರ್ 2017, 6:56 IST
ಸಮ್ಮೇಳನಕ್ಕೆ ಡಿವೈಎಫ್ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಚಾಲನೆ ನೀಡಿ ಮಾತನಾಡಿದರು
ಸಮ್ಮೇಳನಕ್ಕೆ ಡಿವೈಎಫ್ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಚಾಲನೆ ನೀಡಿ ಮಾತನಾಡಿದರು   

ಬಾಗೇಪಲ್ಲಿ: ‘ಗೌರಿ ಲಂಕೇಶ್ ಅವರನ್ನು ಕೊಲೆ ಮಾಡಲು ಹಂತಕರ ಕೈಗೆ ಬಂದೂಕು ನೀಡಿದ ಸಂಘಟನೆಗಳು ಯಾವುದು ಎಂಬುದು ದೇಶದ ಜನರಿಗೆ ಗೊತ್ತಿದೆ’ ಎಂದು ರಾಜ್ಯ ಡಿವೈಎಫ್ಐ ಅಧ್ಯಕ್ಷ ಮುನೀರ್ ಕಾಟಪಾಳ್ಳಿ ತಿಳಿಸಿದರು. ಪಟ್ಟಣದಲ್ಲಿ ಬುಧವಾರ ನಡೆದ ಡಿವೈಎಫ್ಐ ಜಿಲ್ಲಾ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಲೋಕಸಭೆ ಚುನಾವಣೆ ಸಮಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದಲ್ಲಿ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದರು. ಆದರೆ ಚುನಾವಣೆ ನಂತರ ಈ ಯಾವ ಕೆಲಸಗಳೂ ಆಗಲಿಲ್ಲ. ರಾಜ್ಯದಲ್ಲಿಯೂ 2 ಲಕ್ಷ ಉದ್ಯೋಗಗಳು ಖಾಲಿ ಇವೆ. ಹುದ್ದೆ ಭರ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಹಾಕುತ್ತಿಲ್ಲ ’ ಎಂದು ದೂರಿದರು.

‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಎತ್ತಿನ ಹೊಳೆ ಯೋಜನೆ ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡುತ್ತಿದ್ದಾರೆ. ಈ ಯೋಜನೆ ಅವೈಜ್ಞಾನಿಕವಾಗಿದ್ದು ಜಾರಿಯಾಗುವುದಿಲ್ಲ’ ಎಂದರು. ‘ಕೇಂದ್ರ ಸರ್ಕಾರ ಆರೋಗ್ಯ, ಶಿಕ್ಷಣ ಮತ್ತು ಆಹಾರಗಳ ಮೇಲೆ ನಿರ್ಬಂಧ ಹೇರುತ್ತಿದೆ. ಬಡವರ ಬದುಕು ‌ಕಷ್ಟಕ್ಕೆ ಸಿಲುಕಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯಗಳು ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕದ ಸಂಚಾಲಕ ಎಂ.ಜಿ.ಕಿರಣ್ ಕುಮಾರ್, ‘ಡಿವೈಎಫ್ಐ ಸಂಘಟನೆ ಯುವ ಶಕ್ತಿಯನ್ನು ಜಾಗೃತಗೊಳಿಸುತ್ತಿದೆ. ಯುವ ಶಕ್ತಿ ಮುಂದಿಟ್ಟುಕೊಂಡು ಹೋರಾಟ ಮಾಡಿದರೆ ಸಮಾಜದಲ್ಲಿ ಬದಲಾವಣೆ ಸಾಧ್ಯ’ ಎಂದರು.

ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಜೆಸಿಬಿ ಪಿ.ಮಂಜುನಾಥರೆಡ್ಡಿ, ‘ಗೋದಾಮುಗಳಲ್ಲಿ ಅಕ್ಕಿ, ಗೋಧಿ ದಾಸ್ತಾನು ಇದ್ದರೂ ಅದನ್ನು ಬಡವರಿಗೆ ಹಂಚುತ್ತಿಲ್ಲ. ರೈತರು ಆತ್ಮಹತ್ಯೆಗಳಿಗೆ ಶರಣಾಗುತ್ತಿದ್ದರೂ ಕೇಂದ್ರ ಸರ್ಕಾರ ಕೈ ಕಟ್ಟಿ ಕುಳಿತಿದೆ’ ಎಂದು ದೂರಿದರು.

ಡಿವೈಎಫ್ಐ ಕಾರ್ಯದರ್ಶಿ ವಾಸುದೇವ್, ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಂ.ಹೇಮಚಂದ್ರ, ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಚನ್ನರಾಯಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಎ.ಎನ್.ಶ್ರೀರಾಮಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀರಾಮ ನಾಯ್ಕ್, ಸಿಐಟಿಯು ಅಧ್ಯಕ್ಷ ಬಿ.ಆಂಜನೇಯರೆಡ್ಡಿ, ಪುರಸಭೆ ಸದಸ್ಯರಾದ ಬಿ.ಎಚ್.ಆರೀಫ್, ಮಹಮದ್ ಅಕ್ರಂ, ವಕೀಲ ರವಿ ಹಾಗೂ ಮಂಜೂರ್ ಅಹಮ್ಮದ್, ಜಿ.ಮುಸ್ತಾಫ್, ಫಯಾಜ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.