ADVERTISEMENT

ಗ್ರಾಮ ದತ್ತು ಪಡೆಯಲು ನಿರ್ಧಾರ

ರೆಡ್‌ಕ್ರಾಸ್‌ ಸಂಸ್ಥೆಯ ಜಿಲ್ಲಾ ಶಾಖೆಯ ವಾರ್ಷಿಕ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 9:23 IST
Last Updated 26 ಏಪ್ರಿಲ್ 2018, 9:23 IST

ಚಿಕ್ಕಬಳ್ಳಾಪುರ: ನಗರದಲ್ಲಿ ಬುಧವಾರ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಜಿಲ್ಲಾ ಶಾಖೆಯ 2016–17ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಜಿಲ್ಲೆಯಲ್ಲಿ ಹಳ್ಳಿಯೊಂದನ್ನು ದತ್ತು ಪಡೆದು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು ಎಂಬ ಪ್ರಸ್ತಾವಕ್ಕೆ ಸರ್ವ ಸದಸ್ಯರು ಸಹಮತ ವ್ಯಕ್ತಪಡಿಸಿದರು.

ದತ್ತು ಪಡೆದ ಹಳ್ಳಿಯಲ್ಲಿ ಮಾಸಿಕ ಆರೋಗ್ಯ ಶಿಬಿರಗಳನ್ನು ಆಯೋಜಿಸಿ, ಉಚಿತ ಔಷಧಿ ನೀಡುವುದು. ಮಹಿಳೆಯರಿಗೆ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವುದು ಸೇರಿದಂತೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಲು ಸಭೆಯಲ್ಲಿದ್ದ ಅನೇಕರು ಸಲಹೆ ನೀಡಿದರು. ವಿಧಾನಸಭೆ ಚುನಾವಣೆ ಮುಗಿದ ಬಳಿಕ ಸಮೀಕ್ಷೆ ನಡೆಸಿ ದತ್ತು ಗ್ರಾಮ ಆಯ್ಕೆ ಮಾಡಲು ನಿರ್ಧರಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಉಪಾಧ್ಯಕ್ಷ ಡಾ.ಕೆ.ಪಿ.ಶ್ರೀನಿವಾಸ್‌ ಮೂರ್ತಿ, ‘ಜಿಲ್ಲಾ ಶಾಖೆಯ ಸದಸ್ಯತ್ವ ನೋಂದಣಿಯನ್ನು ಇನ್ನೂ ಹೆಚ್ಚು ಮಾಡಬೇಕಿದೆ. ಸದ್ಯ ಜಿಲ್ಲಾ ಶಾಖೆಯಲ್ಲಿ ರಕ್ತಕ್ಕೆ ಬೇಡಿಕೆ ಜತೆಗೆ ಕೊರತೆ ಹೆಚ್ಚುತ್ತಿದೆ. ಅದನ್ನು ನೀಗಲು ಹೆಚ್ಚೆಚ್ಚು ರಕ್ತದಾನ ಶಿಬಿರ  ಆಯೋಜಿಸುವ ಅಗತ್ಯವಿದೆ’ ಎಂದು ಹೇಳಿದರು.

ADVERTISEMENT

‘ಜಿಲ್ಲಾ ಶಾಖೆಗೆ ಸುಮಾರು 4 ಸಾವಿರ ಸದಸ್ಯರಿದ್ದಾರೆ. ಸರ್ವ ಸದಸ್ಯರಿಗೆ ಸಭೆಗಳ ಮಾಹಿತಿ, ನೋಟಿಸ್, ಆಹ್ವಾನ ಪತ್ರಗಳನ್ನು ಇನ್ನು ಮುಂದೆ ಇ–ಮೇಲ್, ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಕಳುಹಿಸುವ ವ್ಯವಸ್ಥೆ ತರುವ ಮೂಲಕ ಶಾಖೆಯಲ್ಲಿ ಕಾಗದ ರಹಿತ ಆಡಳಿತಕ್ಕೆ ಒತ್ತು ನೀಡಿ ಖರ್ಚು ಕಡಿಮೆ ಮಾಡಬೇಕಿದೆ’ ಎಂದು ತಿಳಿಸಿದರು.

ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರಗಳ ಮಂಡನೆ ಮಾಡಲಾಯಿತು. ಆರ್ಥಿಕ ವರ್ಷದ ಕಾರ್ಯಕ್ರಮಗಳಿಗೆ ಅನುಮೋದನೆ ಪಡೆಯಲಾಯಿತು. ರೆಡ್‌ ಕ್ರಾಸ್ ಜಿಲ್ಲಾ ಕಾರ್ಯದರ್ಶಿ, ಜಿಲ್ಲಾ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದ, ಇತ್ತೀಚೆಗೆ ನಿಧನರಾದ ನಾರಾಯಣಚಾರಿ, ನಾರಾಯಣ್ ಅವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ರೆಡ್‌ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಭದ್ರಾಚಲಂ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರವಿಶಂಕರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯಕುಮಾರ್, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಸುರೇಂದ್ರನಾಥ್, ಡಾ.ಚಂದ್ರಮೋಹನ್ ಬಾಬು, ಜಿಲ್ಲಾ ಶಾಖೆ ಖಜಾಂಚಿ ಜಯರಾಂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.