ADVERTISEMENT

ಚುರುಕುಗೊಂಡ ‘ತಣ್ಣನೆ’ ವ್ಯಾಪಾರ

ನಗರದಲ್ಲಿ ತಲೆ ಎತ್ತಿದ ಕಲ್ಲಂಗಡಿ ಹಣ್ಣು, ಕಬ್ಬಿನ ಹಾಲಿನ ಮಳಿಗೆಗಳು

ಈರಪ್ಪ ಹಳಕಟ್ಟಿ
Published 9 ಜನವರಿ 2017, 10:15 IST
Last Updated 9 ಜನವರಿ 2017, 10:15 IST
ಚಿಕ್ಕಬಳ್ಳಾಪುರ ಎಂ.ಜಿ.ರಸ್ತೆಯಲ್ಲಿ ಆರಂಭಗೊಂಡ ಕಲ್ಲಂಗಡಿ ಹಣ್ಣಿನ ಮಾರಾಟ ಮಳಿಗೆ
ಚಿಕ್ಕಬಳ್ಳಾಪುರ ಎಂ.ಜಿ.ರಸ್ತೆಯಲ್ಲಿ ಆರಂಭಗೊಂಡ ಕಲ್ಲಂಗಡಿ ಹಣ್ಣಿನ ಮಾರಾಟ ಮಳಿಗೆ   

ಚಿಕ್ಕಬಳ್ಳಾಪುರ: ತೀವ್ರ ಬಿಸಿಲು ಕಾಣಿಸಿಕೊಳ್ಳುವ ಮುನ್ನವೇ ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಉದರ ತಂಪಾಗಿಸುವ ಕಲ್ಲಂಗಡಿ, ಕಬ್ಬಿನಹಾಲು, ಎಳೆನೀರು ವ್ಯಾಪಾರ ದಿನೇ ದಿನೇ ಚುರುಕು ಪಡೆಯುತ್ತಿದೆ.

ಈಗಾಗಲೇ ನಗರದ ಆರೇಳು ಕಡೆಗಳಲ್ಲಿ ಕಲ್ಲಂಗಡಿ ಹಣ್ಣು ಮಾರಾಟ ಮಳಿಗೆಗಳು ಮತ್ತು ಏಳೆಂಟು ಸ್ಥಳಗಳಲ್ಲಿ ಕಬ್ಬಿನ ಹಾಲಿನ ಅಂಗಡಿಗಳ ಜತೆಗೆ ಅಲ್ಲಲ್ಲಿ ಎಳೆನೀರು ಮಾರಾಟಗಾರರು ಗೋಚರಿಸುತ್ತಿದ್ದಾರೆ. ನಗರದ ಪ್ರಮುಖ ರಸ್ತೆಗಳಾದ ಬಿ.ಬಿ.ರಸ್ತೆ, ಎಂ.ಜಿ ರಸ್ತೆಗಳಲ್ಲಿ ಅಡಿಗಡಿಗೂ ಈ ಮಳಿಗೆಗಳು ಕಾಣುತ್ತವೆ.

15 ದಿನಗಳಿಂದ ನಗರದಲ್ಲಿ ಕಲ್ಲಂಗಡಿ ಹಣ್ಣು ವ್ಯಾಪಾರ ಆರಂಭಗೊಂಡಿದೆ. ಸದ್ಯ ದಿನಕ್ಕೆ ಒಂದು ಟನ್‌ಗಿಂತಲೂ ಅಧಿಕ ಕಲ್ಲಂಗಡಿ ಹಣ್ಣುಗಳು ಬಿಕರಿಯಾಗುತ್ತಿವೆ. ನಾಲ್ಕು ದಿನಕ್ಕೆ ಒಮ್ಮೆ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಪುಲಿವೆಂದಲದಿಂದ 10 ಟನ್‌ ಕಲ್ಲಂಗಡಿ ಹೊತ್ತು ನಗರಕ್ಕೆ ಲಾರಿ ಬರುತ್ತದೆ. ಈ ಒಂದು ಲಾರಿ ಹಣ್ಣುಗಳನ್ನು ನಾಲ್ಕಾರು ವ್ಯಾಪಾರಿಗಳು ಕೂಡಿ ಖರೀದಿಸಿ ನಗರದ ವಿವಿಧೆಡೆ ಮಾರಾಟ ಮಾಡುವರು. ಎಂ.ಜಿ.ರಸ್ತೆ, ಬಿ.ಬಿ.ರಸ್ತೆಯಲ್ಲಿ ತಲಾ ಮೂರು ಕಡೆಗಳಲ್ಲಿ, ಜಿಲ್ಲಾಡಳಿತ ಭವನ ಸಮೀಪದಲ್ಲಿ ಕಲ್ಲಂಗಡಿ ಹಣ್ಣಿನ ವ್ಯಾಪಾರಿ ಭರಾಟೆಯಿಂದ ನಡೆಯುತ್ತಿದೆ.

‘ಸ್ನೇಹಿತರು ಸೇರಿ ನಾಲ್ಕೈದು ದಿನಕ್ಕೊಂದು ಲಾರಿ ಲೋಡ್ ಕಲ್ಲಂಗಡಿ ಖರೀದಿಸಿ, ಹಂಚಿಕೊಂಡು ಮಾರುತ್ತೇವೆ. ನಮ್ಮ ಬಳಿ 1 ಕೆ.ಜಿ ಯಿಂದ 10 ಕೆ.ಜಿ ತೂಗುವ ಹಣ್ಣುಗಳು ದೊರೆಯುತ್ತವೆ. ಒಂದು ಫೀಸ್‌ ₹10 ಮಾರುತ್ತೇವೆ. ಸಗಟಾಗಿ ಖರೀದಿಸಿದರೆ ಒಂದು ಕೆ.ಜಿಗೆ ₹ 20 ರಂತೆ ಮಾರಾಟ ಮಾಡುತ್ತೇವೆ’ ಎಂದು ಎಂ.ಜಿ.ರಸ್ತೆಯಲ್ಲಿ ಕಲ್ಲಂಗಡಿ ಹಣ್ಣಿನ ಮಳಿಗೆ ತೆರೆದಿರುವ ನಕ್ಕಲಕುಂಟೆ ನಿವಾಸಿ ಅಜ್ಜು ಹೇಳಿದರು.

‘ಕಲ್ಲಂಗಡಿ ಸೀಜನ್‌ ಈಗಷ್ಟೇ ಆರಂಭವಾಗಿದೆ. ಈಗ ಆಸೆಪಟ್ಟು ತಿನ್ನುವವರು ಮಾತ್ರ ಖರೀದಿಸುತ್ತಿದ್ದಾರೆ. ಬಿಸಿಲು ಹೆಚ್ಚಾದರೆ ಗ್ರಾಹಕರೂ ಹೆಚ್ಚುವರು. ಮಾರ್ಚ್‌ ವರೆಗೂ ನಾವು ಇಲ್ಲಿಯೇ ವ್ಯಾಪಾರ ನಡೆಸುತ್ತೇವೆ’ ಎಂದು ಎಂ.ಜಿ.ರಸ್ತೆಯಲ್ಲಿ ಕಲ್ಲಂಗಡಿ ಹಣ್ಣು ಮಾರಾಟ ಮಾಡುವ ಶ್ರೀನಿವಾಸ್ ಮಾಹಿತಿ ನೀಡುವರು.

‘ಕಲ್ಲಂಗಡಿಗಿಂತಲೂ ಕಬ್ಬಿನ ಹಾಲಿನ ವ್ಯಾಪಾರ ಚೆನ್ನಾಗಿದೆ. ನಿತ್ಯ 50 ಕೆ.ಜಿ ಕಲ್ಲಂಗಡಿ ಹಣ್ಣು ಮಾರಾಟ ಮಾಡುತ್ತಿದ್ದೇನೆ’ ಎಂದು ಅಣಕನೂರು ಬಳಿ ಕಲ್ಲಂಗಡಿ ಮತ್ತು ಕಬ್ಬಿನ ಹಾಲು ಮಾರಾಟ ಮಾಡುವ ಜಯರಾಂ ತಿಳಿಸಿದರು.

ನಗರದ ಹಲವು ಕಡೆಗಳಲ್ಲಿ ಕಬ್ಬು ಅರೆಯುವ ಯಂತ್ರಗಳ ಸದ್ದು ದಿನೇ ದಿನೇ ಹೆಚ್ಚುತ್ತಿದೆ. ನಿಂಬೆಹಣ್ಣು, ಐಸ್‌ ಬೆರೆಸಿದ ತಣ್ಣನೆ ಕಬ್ಬಿನ ಹಾಲು ಕುಡಿಯಲು ಜನರು ಕಬ್ಬಿನ ಅಂಗಡಿಗಳ ಮುಂದೆ ಗುಂಪು ಗುಂಪಾಗಿ ನಿಂತಿರುವುದು ಕಾಣುತ್ತಿದೆ. 

ಹಣ್ಣಿನ ಜ್ಯೂಸ್ ಮತ್ತು ಇತರೆ ತಂಪು ಪಾನೀಯಗಳಿಗಿಂತಲೂ ಕಬ್ಬಿನ ಹಾಲು ಕಡಿಮೆ ದರದಲ್ಲಿ ದೊರೆಯುತ್ತದೆ. ಆರೋಗ್ಯ ದೃಷ್ಟಿಯಿಂದಲೂ ಉಪಯುಕ್ತ ಎನ್ನುವ ಅಂಶ ಹಾಲಿನ ಬೇಡಿಕೆ ಹೆಚ್ಚಿಸುತ್ತಿದೆ.

ರಾಸಾಯನಿಕಯುಕ್ತ ಪಾನೀಯಗಳಿಗೆ ಮೊರೆ ಹೋಗುವ ಬದಲು ತಾಜಾ ಕಬ್ಬಿನ ಹಾಲಿನ ಸೇವನೆಗೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ₹10ಕ್ಕೆ ಒಂದು ಗ್ಲಾಸ್‌ ಕಬ್ಬಿನ ಹಾಲು ಮಾರಾಟವಾಗುತ್ತಿದೆ.

ಜನದಟ್ಟಣೆ ಪ್ರದೇಶಗಳಲ್ಲಿ ಕಬ್ಬಿನ ಹಾಲಿನ ವ್ಯಾಪಾರ ಭರಾಟೆಯಲ್ಲಿ ನಡೆಯುತ್ತಿದೆ. ಉಳಿದ ಕಡೆಗಳಲ್ಲಿಯೂ ಲಾಭಕ್ಕೆ ಮೋಸವಿಲ್ಲ ಎನ್ನುವಷ್ಟರ ಮಟ್ಟಿಗೆ ವಹಿವಾಟು ನಡೆಯುತ್ತಿದೆ. ಕೆಲ ಕಬ್ಬಿನ ಹಾಲಿನ ಮಳಿಗೆಯಲ್ಲಿ ಈಗ ನಿತ್ಯ 300ಕ್ಕೂ ಅಧಿಕ ಗ್ಲಾಸ್‌ ಹಾಲು ಮಾರಾಟವಾಗುತ್ತಿದೆ. 

‘ನಾವು ಮಂಡ್ಯ, ಹೊಳೆನರಸಿಪುರ ಕಡೆಯಿಂದ ಕಬ್ಬು ತರಿಸುತ್ತೇವೆ. ನಮ್ಮ ವ್ಯಾಪಾರ ಸದ್ಯ ಅಷ್ಟಕಷ್ಟೇ. ಜನದಟ್ಟಣೆ ಪ್ರದೇಶಗಳಲ್ಲಿ ವ್ಯಾಪಾರ ಜೋರಾಗಿದೆ’ ಎಂದು ಅಂಬೇಡ್ಕರ್‌ ವೃತ್ತದ ಬಳಿ ತಳ್ಳುಗಾಡಿಯಲ್ಲಿ ಕಬ್ಬಿನ ಹಾಲಿನ ವ್ಯಾಪಾರ ನಡೆಸುತ್ತಿರುವ ತಿಮ್ಮಣ್ಣ ಲಾಭ–ನಷ್ಟವನ್ನು ವಿವರಿಸಿದರು.

ಅಂಬೇಡ್ಕರ್‌ ಭವನದ ಎದುರು ಕಬ್ಬಿನ ಹಾಲಿನ ಅಂಗಡಿ ತೆರೆದಿರುವ ಮಂಜುನಾಥ್‌, ‘ನಿತ್ಯ 200 ಗ್ಲಾಸ್‌ ಹಾಲು ಮಾರಾಟ ಮಾಡುವೆ. ವೆಚ್ಚ ಕಳೆದು ಸುಮಾರು ₹1,000 ಲಾಭ ಸಿಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.