ADVERTISEMENT

ದ್ರಾಕ್ಷಿ ಬೆಳೆ ನಷ್ಟ: ಪರಿಹಾರಕ್ಕಾಗಿ ಒತ್ತಾಯ

ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ, ರೈತರಿಂದ ಮಾಹಿತಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 12 ಮೇ 2017, 8:59 IST
Last Updated 12 ಮೇ 2017, 8:59 IST
ಚಿಕ್ಕಬಳ್ಳಾಪುರ:  ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಯಿಂದ ಬೆಳೆ ಹಾನಿಗೊಂಡ ಪ್ರದೇಶಗಳಿಗೆ ಬುಧವಾರ ಜಿಲ್ಲಾಧಿಕಾರಿ ದೀಪ್ತಿ ಕಾನಡೆ, ಶಾಸಕ ಡಾ.ಕೆ.ಸುಧಾಕರ್ ಅವರು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಘು ಅವರೊಂದಿಗೆ ಪ್ರತ್ಯೇಕವಾಗಿ ಭೇಟಿ ನೀಡಿ ಪರಿಶೀಲಿಸಿದರು.
 
ಭಾರಿ ಮಳೆ, ದೊಡ್ಡ ಗಾತ್ರದ ಆಲಿಕಲ್ಲುಗಳಿಂದ ಹೆಚ್ಚಿನ ಪ್ರಮಾಣದ ಬೆಳೆ ಹಾನಿಗೊಂಡಿರುವ ಅಗಲಗುರ್ಕಿ, ಚೀಡಚಿಕ್ಕನಹಳ್ಳಿ, ಚೊಕ್ಕಹಳ್ಳಿಗೆ ಬೆಳಿಗ್ಗೆ ಜಿಲ್ಲಾಧಿಕಾರಿ ಅವರು ಭೇಟಿ ನೀಡಿದ ಜಿಲ್ಲಾಧಿಕಾರಿ ಅವರು ಮಾವು, ದ್ರಾಕ್ಷಿ ತೋಟಗಳ ಜತೆಗೆ ತರಕಾರಿ ಬೆಳೆಗಳನ್ನು ವೀಕ್ಷಿಸಿದರು. 
 
ಅಗಲಗುರ್ಕಿಯಲ್ಲಿ ಮುನಿರಾಜು ಎಂಬುವರಿಗೆ ಸೇರಿದ ದ್ರಾಕ್ಷಿ ತೋಟ, ರೈತ ಚಂದ್ರು ಅವರ ಮೆಣಸಿನಕಾಯಿ ಬೆಳೆ, ಚೀಡಚಿಕ್ಕನಹಳ್ಳಿಯ ವೇಣುಗೋಪಾಲ್‌ ಅವರ ಮಾವಿನ ತೋಟ ಸೇರಿದಂತೆ ವಿವಿಧೆಡೆ ಬೆಳೆ ಹಾನಿ ಪರಿಶೀಲನೆ ಮಾಡಿದರು. 
 
ಶಾಸಕ ಡಾ.ಕೆ.ಸುಧಾಕರ್ ಅವರು ಕೂಡ ಇದೇ ಭಾಗಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸರ್ಕಾರ ಬೆಳೆ ಹಾನಿ ಪರಿಹಾರಕ್ಕೆ ನಿಗದಿ ಮಾಡಿರುವ ಮೊತ್ತ ತುಂಬಾ ಅಲ್ಪ ಪ್ರಮಾಣದಲ್ಲಿದೆ.
 
ದ್ರಾಕ್ಷಿ ಬೆಳೆಯಲು ರೈತರು ಇತರ ಬೆಳೆಗಳಿಗಿಂತ ಹೆಚ್ಚಿನ ಖರ್ಚು ಮಾಡುತ್ತಾರೆ. ಆದ್ದರಿಂದ ದ್ರಾಕ್ಷಿ ಬೆಳೆಗಾರರಿಗೆ ಹೆಚ್ಚಿನ ಪರಿಹಾರ ಸಿಗಬೇಕು. ಈ ಕುರಿತು ಸರ್ಕಾರದ ಮಟ್ಟದಲ್ಲಿ ಮಾತನಾಡುತ್ತೇನೆ’ ಎಂದು ತಿಳಿಸಿದರು. 
 
ಈ ಭೇಟಿ ಕುರಿತಂತೆ ಮಾಹಿತಿ ನೀಡಿದ ರಘು, ‘ಬೆಳೆ ಹಾನಿ ಸಮೀಕ್ಷೆ ಕಾರ್ಯ ಈಗಾಗಲೇ ನಡೆದಿದೆ. ಸುಮಾರು 20 ಎಕರೆ ದ್ರಾಕ್ಷಿ, 25 ಎಕರೆ ಮಾವು ಮತ್ತು 5 ಎಕರೆ ತರಕಾರಿ ನಷ್ಟವಾಗಿದೆ ಎಂದು ಪ್ರಾಥಮಿಕ ಅಂದಾಜಿನಲ್ಲಿ ತಿಳಿದು ಬಂದಿದೆ.
 
ಸಮೀಕ್ಷೆ ಪೂರ್ಣಗೊಂಡ ಬಳಿಕವಷ್ಟೇ ನಮಗೆ ಹಾನಿಯ ನಿಖರ ಮಾಹಿತಿ ದೊರೆಯಲಿದೆ. ಸಮೀಕ್ಷೆಯ ವರದಿಯನ್ನು ಗುರುವಾರ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸುತ್ತೇವೆ’ ಎಂದು ಹೇಳಿದರು. 
 
‘ಸರ್ಕಾರ ಹಣ್ಣಿನ ಬೆಳೆಗಳಿಗೆ ಒಂದು ಹೇಕ್ಟರ್‌ಗೆ ₹18 ಸಾವಿರ, ತರಕಾರಿ ಬೆಳೆಗಳಿಗೆ ಒಂದು ಹೇಕ್ಟರ್‌ಗೆ ₹13 ಸಾವಿರ ಪರಿಹಾರ ನಿಗದಿ ಮಾಡಿದೆ. ಶೇ 33ಕ್ಕಿಂತ ಹೆಚ್ಚು ಹಾನಿಗೊಂಡ ಬೆಳೆಯನ್ನು ಪರಿಹಾರಕ್ಕಾಗಿ ಪರಿಗಣಿಸಲಾಗುತ್ತದೆ’ ಎಂದು ತಿಳಿಸಿದರು. 
 
ರೈತರಿಗೆ ಧನ ಸಹಾಯ: ಕೆ.ವಿ.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನವೀನ್ ಕಿರಣ್ ಅವರು ಬುಧವಾರ ಅಗಲಗುರ್ಕಿ ರೈತರಾದ ಶ್ರೀನಿವಾಸ್ ಮತ್ತು ನಾಗರಾಜ್ ಅವರ ದ್ರಾಕ್ಷಿ ತೋಟಗಳಿಗೆ ಭೇಟಿ ನೀಡಿ, ಬೆಳೆ ಹಾನಿ ವೀಕ್ಷಣೆ ಮಾಡಿದರು. ಇದೇ ಸಂದರ್ಭದಲ್ಲಿ ಅವರು ಇಬ್ಬರು ರೈತರಿಗೆ ತಲಾ ₹ 5 ಸಾವಿರ ಆರ್ಥಿಕ ಸಹಾಯ ನೀಡಿ ಧೈರ್ಯ ತುಂಬಿದರು. 
 
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸರ್ಕಾರ ನಿಗದಿಪಡಿಸಿರುವ ಬೆಳೆ ಹಾನಿ ಪರಿಹಾರ ಮೊತ್ತ ಯಾವುದಕ್ಕೂ ಸಾಕಾಗದು. ಒಂದು ಎಕರೆ ದ್ರಾಕ್ಷಿ ತೋಟಕ್ಕೆ ಕಲ್ಲು ಚಪ್ಪಡಿ ಹಾಕಲು ಕನಿಷ್ಠ ₹1.50 ಲಕ್ಷ ಖರ್ಚಾಗುತ್ತದೆ. ಆದರೆ ಸರ್ಕಾರ ಯಾವ ಮಾನದಂಡ ಆಧರಿಸಿ ಒಂದು ಹೇಕ್ಟರ್‌ಗೆ ₹18 ಸಾವಿರ ಪರಿಹಾರ ನಿಗದಿ ಮಾಡಿದೆ ತಿಳಿಯುತ್ತಿಲ್ಲ. ರೈತರಿಗೆ ಒಂದು ಎಕರೆಗೆ ಕನಿಷ್ಠ ₹30 ಸಾವಿರ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.