ADVERTISEMENT

ನಿರಂತರ ಸಾಹಿತ್ಯ ರಚನೆ ಕನ್ನಡದ ಹೆಗ್ಗಳಿಕೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 10:23 IST
Last Updated 28 ಜುಲೈ 2014, 10:23 IST

ಚಿಂತಾಮಣಿ: ಕನ್ನಡವು ವಿಶ್ವದಲ್ಲಿಯೇ ನಿರಂತರವಾಗಿ ಸಾಹಿತ್ಯ ಸೃಷ್ಟಿಸುವ ಭಾಷೆ­ಯಾಗಿದೆ. ಕನ್ನಡ ಭಾಷೆ ತನ್ನತ­ನದ ಜತೆಗೆ ಇತರೆ ಭಾಷೆಗಳನ್ನು ಸಹ ಅರಗಿಸಿಕೊಂಡಿದೆ ಎಂದು ನಿವೃತ್ತ ಪ್ರಾಧ್ಯಾ­ಪಕ ಡಾ.ಆರ್ವಿಯಸ್ ಸುಂದರಂ ಅಭಿಪ್ರಾಯ ಪಟ್ಟರು.

ನಗರದಲ್ಲಿ ಶನಿವಾರ ಆಯೋಜಿಸಿದ್ದ ಸಾಹಿತ್ಯ ಕೂಟದ ಕಾರ್ಯಕ್ರಮದಲ್ಲಿ ‘ಕನ್ನಡ ಭಾಷಾ ಸಾಹಿತ್ಯದ ಹಿರಿಮೆ’ ಕುರಿತು ಮಾತನಾಡಿ, ಕನ್ನಡ ಸಾಹಿತ್ಯದ ಹಿರಿಮೆಯನ್ನು ಎತ್ತಿಹಿಡಿಯಬೇಕಾದರೆ ನಮ್ಮ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಮೊದಲು ತಿಳಿಯಬೇಕು. ಕನ್ನಡ ಭಾಷೆ ಚೆನ್ನಾಗಿ ಕಲಿತರೆ ಇತರೆ ಯಾವುದೇ ಭಾಷೆಯನ್ನಾದರೂ ಸುಲಭವಾಗಿ ಮಾತನಾಡಬಹುದು ಎಂದರು.

ಕನ್ನಡ ಭಾಷೆಯಲ್ಲಿ ಕವಯತ್ರಿಯರು ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. 12ನೇ ಶತಮಾನದಲ್ಲೇ ಕನ್ನಡದಲ್ಲಿ ಸುಮಾರು 30 ಕವಯತ್ರಿಗಳಿದ್ದರು. ಸಾಹಿತ್ಯದ ದೊಡ್ಡ ವಿಶ್ವ­ಕೋಶವಾದ ಜಾನಪದ ಸಾಹಿತ್ಯದಲ್ಲೂ ಮಹಿಳೆ­ಯರ ಪಾತ್ರವಿರುವುದು ಕನ್ನಡದ ಹಿರಿಮೆ ಎಂದು ತಿಳಿಸಿದರು.

ಸುಮಾರು 250 ಕಲೆಗಳು ನಮ್ಮಲ್ಲಿ ಹೆಸರಿಸಿಕೊಂಡಿವೆ. ಇತರೆ ಯಾವ ದೇಶದಲ್ಲೂ ಇಷ್ಟೊಂದು ಜನಪದ ಕಲೆ ಸಾಹಿತ್ಯವಿಲ್ಲ. ಕನ್ನಡದ ಎಲ್ಲ ಅಂಕಿಗಳು ಸೊನ್ನೆಯಿಂದ ಹುಟ್ಟಿವೆ ಎಂದು ಕವಿ ಕುಮುದೇಂದು ಬಹಳ ಹಿಂದೆಯೇ ತಿಳಿ­ಸಿದ್ದಾರೆ. ಮಲೆ ಮಾದೇಶ್ವರ, ಮಂಟೆ­ಸ್ವಾಮಿ ಮತ್ತಿತರರ ಮಹಾಕಾವ್ಯ­ಗಳು ಆಂಗ್ಲ ಭಾಷೆಗೆ ಅನುವಾದ­ಗೊಂಡಿವೆ ಎಂದರು.

ನಗರದ ಸಾಯಿ ಕಲಾನಿಕೇತನ ತಂಡದಿಂದ ಭರತನಾಟ್ಯ ನಡೆಯಿತು. ಸಾಹಿತ್ಯಕೂಟದ ಅಧ್ಯಕ್ಷ ಬಿ.ಶ್ರೀರಾಮ­ಮೂರ್ತಿ,ಕಾರ್ಯದರ್ಶಿ ಜಿ.ಜಯರಾಂ, ಜಿ.ಎಚ್‌.ವೆಂಕಟೇಶ­ಮೂರ್ತಿ, ಆನಂತಾ­ಚಾರ್‌, ಸಿ.ಬಿ.ಹನುಮಂತಪ್ಪ, ರಘು­ನಾಥ­ರೆಡ್ಡಿ, ಅಶ್ವತ್ಥಮ್ಮ ಮತ್ತಿತ­ರರು ಭಾಗವಹಿಸಿದ್ದರು.
ವೈ.ಜಿ.ನಾರಾಯಣ್‌ ಸ್ವಾಗತಿಸಿದರು. ಕೆ.ಎಸ್‌.ಗಣೇಶ್‌ ವರದಿ ಮಂಡಿಸಿದರು. ಗುರು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.