ADVERTISEMENT

ಮಾವು ಬೆಳೆಯಲು ಮುಂದಾದ ರೈತರು...

​ಪ್ರಜಾವಾಣಿ ವಾರ್ತೆ
Published 27 ಜುಲೈ 2016, 9:15 IST
Last Updated 27 ಜುಲೈ 2016, 9:15 IST
ರೈತರೊಬ್ಬರು ನಾಟಿ ಮಾಡಲು ಶ್ರೀನಿವಾಸಪುರದಿಂದ ಆಟೋದಲ್ಲಿ ಮಾವಿನ ಸಸಿಗಳನ್ನು ಕೊಂಡೊಯ್ಯುತ್ತಿರುವುದು.
ರೈತರೊಬ್ಬರು ನಾಟಿ ಮಾಡಲು ಶ್ರೀನಿವಾಸಪುರದಿಂದ ಆಟೋದಲ್ಲಿ ಮಾವಿನ ಸಸಿಗಳನ್ನು ಕೊಂಡೊಯ್ಯುತ್ತಿರುವುದು.   

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದಾಗಿ ಮಾವಿನ ಮರಗಳು ಒಣಗುತ್ತಿವೆ. ಈಗಾಗಲೆ ನೂರಾರು ಎಕರೆ ಪ್ರದೇಶದಲ್ಲಿ ಒಣಗಿದ ಮರಗಳನ್ನು ಬುಡಸಹಿತ ಕಡಿಯಲಾಗಿದೆ. ಆದರೆ ಹೊಸದಾಗಿ ಮಾವಿನ ಸಸಿ ನೆಡುವ ಕಾರ್ಯ ಮಾತ್ರ ನಿಂತಿಲ್ಲ.

ತಾಲ್ಲೂಕಿನ ಕೃಷಿಕರು ಮಾವಿ ಕೃಷಿಯನ್ನು ಹೆಚ್ಚು ಅವಲಂಬಿಸಿದ್ದಾರೆ. ಮಳೆ ಸುರಿದರೆ ಸಾಕು ಮಾವಿನ ಸಸಿ ನಾಟಿಗೆ ಮುಂದಾಗುತ್ತಿದ್ದಾರೆ.  ಈಗಾ ಗಲೇ   ಬೆಳೆಯಲಾಗಿರುವ ಮಾವಿನ ಬೆಳೆ ಅನಿಶ್ಚಿತ ಪರಿಸ್ಥಿತಿ ಎದುರಿಸುತ್ತಿದೆ. ಮಾವಿನ ಸಸಿ ನಾಟಿ ಮಾಡುವ ಕ್ಷೇತ್ರ ಮಾತ್ರ ವರ್ಷದಿಂದ ವರ್ಷಕ್ಕೆ ಹಿಗ್ಗುತ್ತಲೇ ಇದೆ.

ಕೃಷಿಕರ ಮಾವು ಪ್ರೀತಿಯನ್ನು ಸಸಿ ಮಾರಾಟಗಾರರು ಬಂಡವಾಳ ಮಾಡಿ ಕೊಂಡಿದ್ದಾರೆ. ಮಳೆಗಾಲದಲ್ಲಿ ಮಾವಿನ ಸಸಿ ಮಾರಾಟ ಕೇಂದ್ರಗಳು ನಾಯಿ ಕೊಡೆಗಳಂತೆ ಹುಟ್ಟಿಕೊಳ್ಳುತ್ತವೆ. ಆಂಧ್ರಪ್ರದೇಶ ಹಾಗೂ ತಮಿಳು ನಾಡಿನಿಂದ ಸಸಿ ಖರೀದಿಸಿ ತಂದು ಇಲ್ಲಿ ಮಾರಾಟ ಮಾಡಲಾಗುತ್ತದೆ.

ಒಂದು ಮಾವಿನ ಸಸಿ ಬೆಲೆ ಅದರ ಜಾತಿ ಹಾಗೂ ಬೆಳವಣಿಗೆಗೆ ಅನುಗುಣವಾಗಿ ನಿರ್ಧರ ವಾಗುತ್ತದೆ. ಇಷ್ಟಾದರೂ ಅವು ಪ್ರಮಾಣೀಕರಿಸಿದ ಸಸಿಗಳಲ್ಲ. ಸಸಿ ಖರೀದಿಸಿದ ಬಗ್ಗೆ ಬಿಲ್‌ ನೀಡುವ ಪದ್ಧತಿ ಇಲ್ಲ. ಇದು ಸಸಿ ವ್ಯಾಪಾರಿಗಳು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಉತ್ತಮ ಗುಣಮಟ್ಟದ ಮಾವಿನ ಸಸಿ ಸಿಗುವುದು ಅಪರೂಪ. ಸಸಿ ನಾಟಿ ಮಾಡಿದ ಮೇಲೆ ಸುಮಾರು 3 ವರ್ಷಕ್ಕೆ ಫಸಲಿಗೆ ಬರುತ್ತದೆ. ಆಗ ಅದರ ಗುಣದ ಅರಿವಾಗುತ್ತದೆ. ಕಳಪೆ ಗುಣಮಟ್ಟದ ಸಸಿ ನಾಟಿ ಮಾಡಿದ್ದ ಪಕ್ಷದಲ್ಲಿ ಮತ್ತೆ ಕಷ್ಟ ತಪ್ಪಿದ್ದಲ್ಲ. ಮತ್ತೆ ಹೆಚ್ಚು ಹಣ ಖರ್ಚು ಮಾಡಿ ಗಿಣ್ಣು ಕಸಿ ಮಾಡಿಸಬೇಕಾಗುತ್ತದೆ.

ಫಸಲಿಗಾಗಿ ಇನ್ನಷ್ಟು ವರ್ಷ ಕಾಯಬೇ ಕಾಗುತ್ತದೆ. ಈ ಪರಿಸ್ಥಿತಿಯಿಂದ ತಪ್ಪಿಸಿ ಕೊಳ್ಳಲು ಕೆಲವು ರೈತರು ನಾಟಿ ಮಾವಿನ ಸಸಿಗಳನ್ನು ನಾಟಿ ನಾಡುತ್ತಿದ್ದಾರೆ. ಈ ಸಸಿಯ ಬೆಲೆಯೂ ಕಡಿಮೆ. ಸಸಿ ಬೆಳೆದ ಮೇಲೆ ತಮಗೆ ಇಷ್ಟವಾದ ಜಾತಿ ಮಾವಿನ ಮರದ ಕೊಂಬೆಯಿಂದ ಗಿಣ್ಣು ತೆಗೆದು ಕಸಿ ಮಾಡಲಾಗುತ್ತದೆ. ಇದ ರಿಂದ ಗುಣಮಟ್ಟದ ಫಸಲು ಸಿಗುತ್ತದೆ.

ನಾಳಿನ ಬಗ್ಗೆ ಯೋಚಿಸದೆ ಮಾವಿನ ಸಸಿ ನಾಟಿ ಮಾಡಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ಮಾವಿನ ತೋಟ ಗಳನ್ನು ಹೊರತುಪಡಿಸಿ ಉಳಿದ ಜಮೀನಲ್ಲಿ ಕೊಳವೆ ಬಾವಿ ಆಶ್ರಯದಲ್ಲಿ  ತರಕಾರಿ ಬೆಳೆ ಬೆಳೆಯುತ್ತಿದ್ದರು. ಈಗ ಬಹುತೇಕ ಕೊಳವೆ ಬಾವಿಗಳು ಬತ್ತಿಹೋಗಿವೆ.

1800 ಅಡಿ ಕೊಳವೆ ಬಾವಿ ತೋಡಿದರೂ ನೀರು ಸಿಗುತ್ತಿಲ್ಲ. ನೀರು ಸಿಕ್ಕಿದ್ದರೂ ಹೆಚ್ಚು ಕಾಲ ಉಳಿ ಯುತ್ತಿಲ್ಲ. ಇದು ರೈತರ ಹತಾಶೆಗೆ ಕಾರಣ ವಾಗಿದೆ. ಆದರೂ ಮಾವಿನ ಬೆಳೆ ಕೈ ಹಿಡಿಯುತ್ತದೆ ಎನ್ನುವ ಆಶಾವಾದಲ್ಲಿ ಸಸಿ ನಾಟಿ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.