ADVERTISEMENT

ಮೆಕ್ಕೆಜೋಳ ಬೆಲೆ ಕುಸಿತ: ರೈತರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2017, 6:48 IST
Last Updated 27 ನವೆಂಬರ್ 2017, 6:48 IST
ಬಾಗೇಪಲ್ಲಿ ಕಸಬಾ ಹೋಬಳಿಯ ದೇವರಗುಡಿಪಲ್ಲಿ (ಗಡಿದಂ) ಹೊಲವೊಂದರಲ್ಲಿ ಕಟಾವಿಗೆ ಬಂದಿರುವ ಗೋವಿನ ಜೋಳ
ಬಾಗೇಪಲ್ಲಿ ಕಸಬಾ ಹೋಬಳಿಯ ದೇವರಗುಡಿಪಲ್ಲಿ (ಗಡಿದಂ) ಹೊಲವೊಂದರಲ್ಲಿ ಕಟಾವಿಗೆ ಬಂದಿರುವ ಗೋವಿನ ಜೋಳ   

ಬಾಗೇಪಲ್ಲಿ: ಸತತ ಬರಗಾಲದಿಂದ ಬೇಸತ್ತ ರೈತರು ಈ ಬಾರಿ ಸಾಂಪ್ರದಾಯಿಕ ಬೆಳೆ ಬಿಟ್ಟು ಮೆಕ್ಕೆ ಜೋಳಕ್ಕೆ ಮೊರೆ ಹೋದರು. ನಿರೀಕ್ಷೆಯಂತೆ ಇಳುವರಿ ಬಂದರೂ ಬೆಲೆ ಸಿಗದೆ ರೈತರು ಮತ್ತೊಮ್ಮೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಲ್ಲೂಕಿನಲ್ಲಿ ಕಳೆದ ವರ್ಷ 13 ಸಾವಿರ ಹೆಕ್ಟೇರ್‌ನಲ್ಲಿ ಗೋವಿನ ಜೋಳ ಬಿತ್ತನೆ ಮಾಡಲಾಗಿತ್ತು. ಆದರೆ ಸಕಾಲಕ್ಕೆ ಮಳೆಯಾಗದೆ ಇಳುವರಿ ಕಡಿಮೆಯಾಗಿತ್ತು. ಈ ವರ್ಷ ಮಳೆ ಕೊರತೆಯಾಗಬಹುದು ಎಂಬ ಕಾರಣಕ್ಕಾಗಿ ಮೆಕ್ಕೆಜೋಳಕ್ಕೆ ರೈತರೂ ಒಲವು ತೋರಿದರು. ಶೇಂಗಾ ಬಿತ್ತನೆ ಮಾಡದೆ ಮೆಕ್ಕೆಜೋಳದ ಬಿತ್ತಿದರು. 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಉತ್ತಮ ಫಸಲು ಬಂದಿದೆ. ಅದಕ್ಕೆ ತಕ್ಕಂತೆ ಬೆಲೆ ಸಿಕ್ಕರೆ ಸಾಲದ ಹೊರೆ ಕಡಿಮೆ ಮಾಡಿಕೊಳ್ಳಬಹುದು ಎಂಬ ರೈತರ ನಿರೀಕ್ಷೆ ಈಗ ಹುಸಿಯಾಗುತ್ತಿದೆ.

ಈ ಭಾಗದ ಪ್ರಮುಖ ಬೆಳೆಯಾಗಿರುವ ಮೆಕ್ಕೆ ಜೋಳದ ಬೆಲೆ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಇವುಗಳ ನಡುವೆ ಕಟಾವಿಗೆ ಬಂದ ಜೋಳದ ಫಸಲನ್ನು ರಾಶಿ ಮಾಡಲು ಕಾರ್ಮಿಕರು ಸಿಗುತ್ತಿಲ್ಲ. ಕಳೆದ ವರ್ಷ ಪ್ರತಿ ಕ್ವಿಂಟಾಲ್‌ಗೆ ₹1600ರಿಂದ 1800ರವರೆಗೆ ಇತ್ತು. ಈಗ ₹ 900ಕ್ಕೆ ಮಾರಾಟವಾಗುತ್ತಿದೆ ಎನ್ನುತ್ತಾರೆ ರೈತ ಮಂಡ್ಯಂಪಲ್ಲಿ ಮಂಜುನಾಥ.

ADVERTISEMENT

‘ಒಂದೆಡೆ ಬೆಲೆ ಕುಸಿತ, ಇನ್ನೊಂದೆಡೆ ದುಬಾರಿ ಕೂಲಿ ಕೊಟ್ಟು ಇಳುವರಿ ಕಾಪಾಡಿಕೊಳ್ಳುವುದು ಕಷ್ಟವಾಗಿದೆ. ಈಗಿನ ಲೆಕ್ಕಾಚಾರದ ಪ್ರಕಾರ ಕ್ವಿಂಟಲ್‌ಗೆ ಕನಿಷ್ಠ ₹ 1900 ಕೊಟ್ಟರೆ ಅನುಕೂಲವಾಗುತ್ತದೆ. ಇದರಿಂದ ನಷ್ಟದ ಹೊರೆ ತಪ್ಪಲಿದೆ. ಸರ್ಕಾರವೂ ಸಹ ಬೆಂಬಲ ಬೆಲೆಯಲ್ಲಿ ಮೆಕ್ಕೆ ಜೋಳ ಖರೀದಿಸಿದರೆ ರೈತರ ಸಂಕಷ್ಟ ನಿವಾರಣೆ ಆಗಲಿದೆ ಎಂದು ಚಾಕವೇಲ್‌ನ ರೈತ ಶ್ರೀನಿವಾಸರೆಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.