ADVERTISEMENT

ಯುವಜನರಿಂದ ದೇಶ ಸೇವೆ ಹೆಚ್ಚಲಿ

ವಿವೇಕಾನಂದರ ಜನ್ಮದಿನಾಚರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 4:58 IST
Last Updated 19 ಜನವರಿ 2017, 4:58 IST
ಯುವಜನರಿಂದ ದೇಶ ಸೇವೆ ಹೆಚ್ಚಲಿ
ಯುವಜನರಿಂದ ದೇಶ ಸೇವೆ ಹೆಚ್ಚಲಿ   

ಚಿಕ್ಕಬಳ್ಳಾಪುರ: ‘ತಮ್ಮಲ್ಲಿರುವ ಶಕ್ತಿ ಬಳಸಿಕೊಂಡು ಪ್ರಯತ್ನಶೀಲರಾಗುವ ವಿದ್ಯಾರ್ಥಿಗಳ ಸಂಖ್ಯೆ ಇತ್ತೀಚೆಗೆ ಕಡಿಮೆಯಾಗುತ್ತಿದೆ. ದೇಶದಲ್ಲಿನ ಯುವಜನರ ಸಂಖ್ಯೆಗೆ ಹೋಲಿಸಿದರೆ ಅವರಿಂದ ದೇಶಕ್ಕಾಗುತ್ತಿರುವ ಸೇವೆ ಬಹಳ ಅಲ್ಪ’ ಎಂದು ರಾಮಕೃಷ್ಣ ಆಶ್ರಮದ ಪೂರ್ಣಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಜಚನಿ ಪದವಿ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ವಿವೇಕಾನಂದರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನನ್ನ ಭಾರತ ಮುಂದೊಂದು ದಿನ ವಿಶ್ವಗುರು ಆಗುತ್ತದೆ ಎಂದು ವಿವೇಕಾನಂದರು ಪ್ರತಿಪಾದಿಸುತ್ತಿದ್ದರು. ನನ್ನ ಭರವಸೆ ಭಾರತದ ಯುವಜನತೆ ಮೇಲಿದೆ. ಅವರಿಂದ ಸಿಂಹಸದೃಶ್ಯರು, ಪ್ರಾಮಾಣಿಕರು, ಪವಿತ್ರ ಚಾರಿತ್ರ್ಯವುಳ್ಳ ಬಂದು ಭಾರತ ಮಾತೆಯನ್ನು ಉನ್ನತ ಸ್ಥಾನದಲ್ಲಿ ಕೂಡಿಸುತ್ತಾರೆ ಎಂದು ಹೇಳುತ್ತಿದ್ದರು. ಆದರೆ, ಅದಕ್ಕೆ ಇವತ್ತು ಶ್ರಮಪಡುವವರು ಯಾರು’ ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು.

‘ನಮ್ಮ ಯುವಜನರ ಶಕ್ತಿ ಅನಾವಶ್ಯಕ ವಿಚಾರಗಳಲ್ಲಿ ಹರಿದು ಹಂಚಿಹೋಗುತ್ತಿದೆ ಎಂದು ಬಹು ಹಿಂದೆಯೇ ವಿವೇಕಾನಂದರು ಹೇಳಿದ್ದರು. ಆ ಸ್ಥಿತಿ ಇಂದಿಗೂ ಹಾಗೇ ಇದೆ. ಉನ್ನತ ಮಟ್ಟದ ಗುರಿ ಇಟ್ಟುಕೊಂಡು ಅದರ ಸಾಧನೆಗಾಗಿ ನಮ್ಮ ಶಕ್ತಿ ವಿನಿಯೋಗಿಸಿದಾಗ ನಾವು ಶ್ರೇಷ್ಠ ಕೆಲಸ ಮಾಡಲು ಸಾಧ್ಯವಾಗುತ್ತದೆ. ಶ್ರೇಷ್ಠ ಚಿಂತನೆಗಳನ್ನು ನಾವು ಅರ್ಥೈಸಿಕೊಳ್ಳಬೇಕಾದರೆ ಓದುವುದು, ಏಕಾಗ್ರತೆಯಿಂದ ಕೇಳಿಸಿಕೊಳ್ಳುವುದು ಕಲಿಯಬೇಕು’ ಎಂದು ಹೇಳಿದರು.

‘ಓದುವುದು, ಅನುಭವಿಗಳ ಮಾತುಗಳನ್ನು ಆಲಿಸುವುದರಿಂದ ವಿವೇಕಾನಂದರ ಮಾತುಗಳು ನಮ್ಮ ಹೃದಯ ಪ್ರವೇಶ ಮಾಡುತ್ತವೆ. ಏಕಾಗ್ರತೆ ಮನುಷ್ಯನನ್ನು ಶ್ರೇಷ್ಠ ವ್ಯಕ್ತಿಯನ್ನಾಗಿ ಮಾಡುತ್ತದೆ. ಪ್ರತಿಯೊಬ್ಬರಿಗೂ ಏಕಾಗ್ರತೆ ಅಗತ್ಯವಿದೆ. ನಿಮ್ಮ ನಡವಳಿಕೆಗಳಲ್ಲಿ ಏಕಾಗ್ರತೆ ಪಡೆದುಕೊಳ್ಳಲು ಬೇಕಾದ ಲಕ್ಷಣಗಳಿವೆಯಾ’ ಎಂದು ಕೇಳಿದರು.

‘ಕಾಲೇಜಿಗೆ ಬಂದು ಹೋದವರನ್ನೆಲ್ಲ ವಿದ್ಯಾರ್ಥಿಗಳೆಂದು ಕರೆಯಲು ಆಗದು. ವಿದ್ಯಾರ್ಥಿ ಎಂದರೆ ವಿದ್ಯೆ ಪಡೆಯುವ ಹಂಬಲವುಳ್ಳವನು ಎಂದರ್ಥ. ಶಿಕ್ಷಣ ಸಂಸ್ಥೆಗೆ ಬಂದ ಮಾತ್ರಕ್ಕೆ ವಿದ್ಯಾವಂತರಾಗುವುದಿಲ್ಲ. ವಿವೇಕಾನಂದರ ಜಯಂತಿ ಆಚರಿಸಿದ ಮಾತ್ರಕ್ಕೆ ಅವರ ಬಗ್ಗೆ ತಿಳಿದುಕೊಂಡಿದ್ದಾರೆ ಅಂತಲ್ಲಾ.

ನಮ್ಮ ದೇಶದಲ್ಲಿ ಹುಟ್ಟಿ, ಇಡೀ ಜಗತ್ತಿನಾದ್ಯಂತ ಜ್ಞಾನ ಪ್ರಸರಣೆ ಮಾಡಿದ ವಿವೇಕಾನಂದರ ವಿಚಾರಗಳು ನಮ್ಮ ದೇಶದವರಿಗೇ ಸರಿಯಾಗಿ ಗೊತ್ತಿಲ್ಲ. ಹೀಗಾಗಿ ಯುವ ಜನತೆಗೆ ವಿವೇಕಾನಂದರನ್ನು ಪರಿಚಯಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಅವರ ಜನ್ಮದಿನವನ್ನು ‘ರಾಷ್ಟ್ರೀಯ ಯುವ ದಿನಾಚರಣೆ’ಯನ್ನಾಗಿ ಆಚರಿಸುತ್ತಿದೆ’ ಎಂದು ತಿಳಿಸಿದರು.

‘ಉತ್ತಮ ಬದುಕಿಗಾಗಿ ಪುಸ್ತಕ ಓದಿ ತಿಳಿದುಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇಷ್ಟು ದೊಡ್ಡ ದೇಶದಲ್ಲಿ ಸ್ವಲ್ಪ ಜನ ಮಾತ್ರ ಒಳ್ಳೆಯ ವಿಚಾರ ತಿಳಿದುಕೊಂಡರೆ ಸಾಲದು’ಎಂದರು.

‘ಹೆಚ್ಚು ಜನರಿಂದ ಮಾತ್ರ ದೇಶದ ಅಭ್ಯುದಯ ಸಾಧ್ಯ. ನಾಲ್ಕು ಜನರು ಸೇರಿ ನಾವು ದೇಶ ಉದ್ದಾರ ಮಾಡುತ್ತೇವೆ ಎನ್ನುವುದು ಕಷ್ಟಸಾಧ್ಯ. ಅದಕ್ಕಾಗಿ ಶ್ರಮವಹಿಸುವ ಪ್ರಾಮಾಣಿಕ ವ್ಯಕ್ತಿಗಳು ಬೇಕು’ ಎಂದು ಪ್ರತಿಪಾದಿಸಿದರು.

ಕಾಲೇಜಿನ ಆಡಳಿತಾಧಿಕಾರಿ ಶಿವಜ್ಯೋತಿ, ಪ್ರಾಂಶುಪಾಲ ವೆಂಕಟರಮಣಪ್ಪ, ಉಪನ್ಯಾಸಕರಾದ ನಾಗೇಶ್, ಗಂಗರೇಕಾಲುವೆ ಭೈರಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

*
ಉತ್ತಮ ಆಲೋಚನೆಗಳು, ಶಕ್ತಿಯುತ ನುಡಿಗಳು ನಮ್ಮ ಹೃದಯ ಪ್ರವೇಶಿಸಿದಾಗ ನಾವು ಒಳ್ಳೆಯ ಚಿಂತನೆಗಳಿಂದ ಶ್ರೇಷ್ಠ ಕಾರ್ಯ ಮಾಡಲು ಪ್ರಯತ್ನ ಮಾಡುತ್ತೇವೆ.
-ಪೂರ್ಣಾನಂದ ಸ್ವಾಮೀಜಿ,
ರಾಮಕೃಷ್ಣ ಆಶ್ರಮ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.