ADVERTISEMENT

ರಾಗಿ ಬೆಳೆಗೆ ಬೆಂಕಿರೋಗ: ಆತಂಕ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2017, 8:33 IST
Last Updated 24 ಸೆಪ್ಟೆಂಬರ್ 2017, 8:33 IST
ರಾಗಿ ಬೆಳೆಗೆ ಬೆಂಕಿರೋಗ: ಆತಂಕ
ರಾಗಿ ಬೆಳೆಗೆ ಬೆಂಕಿರೋಗ: ಆತಂಕ   

ಚಿಕ್ಕಬಳ್ಳಾಪುರ: ತಾಲ್ಲೂಕಿನ ಅನೇಕ ಹಳ್ಳಿಗಳಲ್ಲಿ ರಾಗಿ ಬೆಳೆಗೆ ಬೆಂಕಿ ರೋಗ ಕಾಣಿಸಿಕೊಂಡಿದ್ದು, ರೈತರಲ್ಲಿ ಆತಂಕ ಮೂಡಿಸಿದೆ. ಕೃಷಿ ಇಲಾಖೆಯಿಂದ ವಿತರಿಸಿದ ಬೀಜದ ಬೆಳೆಯಲ್ಲಿ ಮಾತ್ರ ಈ ರೋಗ ಕಾಣಿಸಿಕೊಂಡಿದೆ ಎಂದು ರೈತರು ಆರೋಪಿಸುತ್ತಿದ್ದಾರೆ. ಈ ಆರೋಪವನ್ನು ಅಲ್ಲಗಳೆಯುವ ಕೃಷಿ ಇಲಾಖೆ ಅಧಿಕಾರಿಗಳು ವಾತಾವರಣ ಬದಲಾವಣೆಯಿಂದಾಗಿ ರೋಗ ಕಾಣಿಸಿಕೊಂಡಿದೆ ಎಂದು ಹೇಳುತ್ತಿದ್ದಾರೆ.

ಸದ್ಯ ನಂದಿ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಂಕಿ ರೋಗ ಕಾಣಿಸಿಕೊಂಡಿದೆ. ಹೊಸೂರು, ದೊಡ್ಡಮರಳಿ, ಬಿಡಗಾನಹಳ್ಳಿ, ನಂದಿ, ದೇವಶೆಟ್ಟಹಳ್ಳಿ, ಯಲುವಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ರಾಗಿ ಬೆಳೆದ ರೈತರ ಮೊಗದಲ್ಲಿ ಸಂತಸದ ನಗೆ ಮಾಸಿದೆ. ಕಾಂಡ ಕೊರೆಯುವ ಹುಳದ ಕಾಟದಿಂದ ಕಳಾಹೀನವಾಗುತ್ತಿರುವ ರಾಗಿ ಬೆಳೆಯನ್ನು ಉಳಿಸಿಕೊಳ್ಳಲು ರೈತರು ಔಷಧಿ ಸಿಂಪಡನೆಗೆ ಮುಂದಾಗುತ್ತಿದ್ದಾರೆ.

‘ನಾವು ಮೊದಲು ಮನೆ ರಾಗಿ ಬಿತ್ತನೆ ಮಾಡಿದ್ದೆವು. ಅದು ಮೊಳಕೆ ಬರದ ಕಾರಣಕ್ಕೆ ನಂದಿಯಲ್ಲಿರುವ ಕೃಷಿ ಕೇಂದ್ರದಿಂದ ಬೀಜ ತಂದು ಪುನಃ ಒಂದು ಎಕರೆಗೆ ಬಿತ್ತನೆ ಮಾಡಿದೆವು. ಇದೀಗ ಬೆಳೆಗೆ ಸಂಪೂರ್ಣವಾಗಿ ಬೆಂಕಿ ರೋಗ ಆವರಿಸಿಕೊಂಡಿದೆ. ಎಲ್ಲಿ ವಿಚಾರಿಸಿದರೂ ಮನೆ ಬೀಜದ ಬೆಳೆಗೆ ರೋಗವಿಲ್ಲ ಎನ್ನುತ್ತಿದ್ದಾರೆ. ಕೃಷಿ ಇಲಾಖೆಯಿಂದ ಪೂರೈಸಿದ ಬೀಜ ಕಳಪೆಯಾಗಿದ್ದು, ಅದರಿಂದ ರೋಗ ಕಾಣಿಸಿಕೊಂಡಿದೆ ಎಂದು ಜನರು ಹೇಳುತ್ತಿದ್ದಾರೆ’ ಎಂದು ಬಿಡಗಾನಹಳ್ಳಿ ರೈತ ಮನೋಹರ್ ತಿಳಿಸಿದರು.

ADVERTISEMENT

‘ನಾವು ಈವರೆಗೆ ರಾಗಿಗೆ ಔಷಧಿ ಸಿಂಪಡಿಸಿದವರನ್ನೇ ಕಂಡಿರಲಿಲ್ಲ. ಇದೀಗ ಅಲ್ಲೊಬ್ಬರು, ಇಲ್ಲೊಬ್ಬರು ಔಷಧಿ ಹೊಡೆಯುತ್ತಿದ್ದಾರೆ. ಹೀಗಾಗಿ ನಾವು ಕೂಡ ರಾಗಿಗೆ ಔಷಧಿ ಸಿಂಪಡಿಸಿದ್ದೇವೆ. ಆದರೂ ತೆನೆ ಬರುವುದು ಸಂದೇಹವಿದೆ. ಬರಗಾಲದ ನಡುವೆ ಊಟಕ್ಕಾದರೂ ರಾಗಿ ಸಿಗುತ್ತದೆ ಎಂದು ಆಸೆ ಇಟ್ಟುಕೊಂಡವರಿಗೆ ತುಂಬಾ ಬೇಸರವಾಗಿದೆ’ ಎಂದು ಹೇಳಿದರು.

‘ರಾಗಿ ಬೆಳೆ ಬಾಡಿದಂತಾಗಿ ಬುಡದಲ್ಲಿ ಹುಳು ಬಿದ್ದಿದೆ. ಇದೇ ಮೊದಲ ಬಾರಿ ರಾಗಿಗೆ ಈ ರೀತಿ ರೋಗ ಕಾಣಿಸಿಕೊಂಡಿದೆ. ಕೃಷಿ ಇಲಾಖೆ ಅಧಿಕಾರಿಗಳನ್ನು ಕರೆಯಿಸಿ ಬೆಳೆ ತೋರಿಸಿದ್ದೇವೆ. ಅವರು ಬರೆದುಕೊಟ್ಟ ಔಷಧಿ ತಂದು ಸಿಂಪರಣೆ ಮಾಡಿದ್ದೇವೆ. ಬೆಳೆ ಚೇತರಿಸಿಕೊಳ್ಳುತ್ತದೆಯೇ ಇಲ್ಲವೋ ಎನ್ನುವ ಭಯ ಆವರಿಸಿಕೊಂಡಿದೆ’ ಎಂದು ಜಾತವಾರದ ರೈತ ಮುನಿರಾಜು ತಿಳಿಸಿದರು.

‘ಈ ಭಾಗದಲ್ಲಿ ರಾಗಿಯೇ ಜೀವನಾಡಿ ಬೆಳೆಯಾಗಿರುವ ಕಾರಣ ರಾಗಿಗೆ ರೋಗ ಅಂಟಿದ್ದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಗಿಗೆ ರೋಗ ಬೀಳುತ್ತದೆ ಎನ್ನುವುದೇ ಆಶ್ಚರ್ಯದ ವಿಚಾರ. ಕೃಷಿ ಇಲಾಖೆ ವತಿಯಿಂದ ಕೊಟ್ಟ ಬೀಜವನ್ನು ಸರಿಯಾದ ರೀತಿಯಲ್ಲಿ ಪರೀಕ್ಷಿಸಿ ಕೊಟ್ಟಿಲ್ಲ. ರಿಯಾಯಿತಿ ದರದಲ್ಲಿ ನೀಡುತ್ತಿದ್ದೇವೆ ಎಂದು ಕಳಪೆ ಬೀಜ ನೀಡಿ ರೈತರಿಗೆ ವಂಚಿಸಲಾಗಿದೆ. ಇವತ್ತು ಕೃಷಿ ಇಲಾಖೆ ಅಧಿಕಾರಿಗಳು ರೈತರ ಹೆಸರಿನಲ್ಲಿ ಲೂಟಿ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಇದು ನೋವಿನ ವಿಚಾರ’ ಎಂದು ರೈತ ಮುಖಂಡ ಯಲುವಹಳ್ಳಿ ಸೊಣ್ಣೇಗೌಡ ಹೇಳಿದರು.

‘ಕೃಷಿ ಇಲಾಖೆ ಪೂರೈಸಿದ ರಾಗಿ ಬೀಜ ಕಳಪೆಯಾಗಿದ್ದು, ಅದರಿಂದಲೇ ಬೆಂಕಿ ರೋಗ ಬಂದಿದೆ ಎನ್ನುವುದು ಸುಳ್ಳು. ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ನಿರಂತರವಾಗಿ ಮಳೆ, ಬಿಸಿಲು ಕಾಣಿಸಿಕೊಂಡ ಪರಿಣಾಮ ಬೆಂಕಿರೋಗ ಕಾಣಿಸಿಕೊಂಡಿದೆ. ಒಂದು ಮಳೆ ಸುರಿದರೆ ಸಾಕು ಈ ರೋಗ ಹೋಗುತ್ತದೆ. ಜಿಲ್ಲೆಯಲ್ಲಿ ಬೇರೆ ಯಾವ ತಾಲ್ಲೂಕಿನಲ್ಲಿ ಸಹ ಈ ರೋಗ ಕಾಣಿಸಿಕೊಂಡಿಲ್ಲ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ತಿಳಿಸಿದರು.

‘ಈ ತಾಲ್ಲೂಕಿನಲ್ಲಿ ನಂದಿ ಹೋಬಳಿಯಲ್ಲಿ ಮಾತ್ರ ಇದು ಕಾಣಿಸಿಕೊಂಡಿದೆ. ಇದಕ್ಕೆ ಕಾರಣ ಆ ಭಾಗದಲ್ಲಿ ತಂಪು ವಾತಾವರಣ ಜಾಸ್ತಿ ಇದೆ. ತಂಪು ಇರುವೆಡೆ ರೋಗಾಣುಗಳು ಜಾಸ್ತಿ ಇರುತ್ತದೆ. ಇದಕ್ಕೆ ರೈತರು ಆತಂಕ ಪಡುವ ಅಗತ್ಯವಿಲ್ಲ. ಮಂಗಳವಾರ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಿಂದ ವಿಜ್ಞಾನಿಗಳನ್ನು ಕರೆಯಿಸಿ ಪರೀಕ್ಷೆ ಮಾಡಿಸುತ್ತೇವೆ. ಮುಂಜಾಗ್ರತೆಯಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ನೀಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.