ADVERTISEMENT

ಲಂಚ ಪಡೆಯುವುದು, ನೀಡುವುದು ಎರಡೂ ಅಪರಾಧ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2017, 6:23 IST
Last Updated 5 ನವೆಂಬರ್ 2017, 6:23 IST

ಚಿಂತಾಮಣಿ: 'ಲಂಚವನ್ನು ನೀಡುವುದು ಹಾಗೂ ಪಡೆಯುವುದು ಎರಡು ಅಪರಾಧ' ಎಂದು ಸ್ಥಳೀಯ ಜೆ.ಎಂ.ಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್‌ ನ್ಯಾಯಾಧೀಶ ರಾಜೇಂದ್ರಕುಮಾರ್‌ ತಿಳಿಸಿದರು. ತಾಲ್ಲೂಕು ಕಾನೂನು ಸೇವಾ ಸಮಿತಿಯು, ಸರ್ಕಾರಿ ಬಾಲಕರ ಕಾಲೇಜಿನ ರೆಡ್‌ಕ್ರಾಸ್‌ ಘಟಕದ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಭ್ರಷ್ಟಾಚಾರದ ವಿರುದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದು ದೇಶದಲ್ಲಿ ಭ್ರಷ್ಟಾಚಾರ ತಾಂಡವಾಳುತ್ತಿದೆ. ದೇಶದ ಪ್ರತಿಯೊಬ್ಬ ಪ್ರಜೆಯು ಭ್ರಷ್ಟಾಚಾರ ನಿರ್ಮೂಲನೆಗಾಗಿ ಕೈಜೋಡಿಸಬೇಕು. ಲಂಚ ಕೊಡುವುದು ಇಲ್ಲ, ಪಡೆಯುವುದು ಇಲ್ಲ ಎಂದು ಪ್ರತಿಜ್ಞೆ ಮಾಡಬೇಕು ಎಂದರು.

ಸರ್ಕಾರದ ಎಲ್ಲ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ಸಾಮಾನ್ಯವಾದರೆ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ ಎಂದು ನ್ಯಾಯಾಧೀಶರೊಬ್ಬರು ಹೇಳಿದ್ದ ಮಾತನ್ನು ಉಲ್ಲೇಖಿಸಿದ ಅವರು, ಇಂದಿನ ಸಮಾಜದಲ್ಲಿ ಅದು ನಿಜವಾಗಿದೆ ಎಂದು ವಿಷಾಧಿಸಿದರು.

ADVERTISEMENT

ಯುವರೆಡ್‌ಕ್ರಾಸ್‌ ಘಟಕದ ಕಾರ್ಯಕ್ರಮಾಧಿಕಾರಿ ಪಿ.ಆರ್‌.ನರಸಪ್ಪ,ಭ್ರಷ್ಟಾಚಾರವನ್ನು ತೊಲಗಿಸುವ ಹಾಗೂ ಪ್ರಾಮಾಣಿಕತೆಯನ್ನು ಮೆರೆಯುವ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ದೇಶದ ಪ್ರತಿಯೊಬ್ಬ ಪ್ರಜೆಯೂ ಭ್ರಷ್ಟಾಚಾರ ಮುಕ್ತ ಹಾಗೂ ಸದೃಢ ಭಾರತದ ನಿರ್ಮಾಣಕ್ಕೆ ಕೈಜೋಡಿಸುವಂತೆ ಮನವಿ ಮಾಡಿದರು.

ದೇಶದಲ್ಲಿ ಭ್ರಷ್ಟಾಚಾರ ತಾಂಡವಾಳಲು ಪ್ರತಿಯೊಬ್ಬ ನಾಗರಿಕನು ಕಾರಣನಾಗಿದ್ದಾನೆ. ತಮ್ಮ ತಮ್ಮ ಕೆಲಸಗಳನ್ನು ವಾಮಮಾರ್ಗದಿಂದ ಮಾಡಿಸಿಕೊಳ್ಳಲು ಲಂಚ ನೀಡಲು ಮುಂದಾಗಿ ಇಡೀ ವ್ಯವಸ್ಥೆಯನ್ನು ನಾಶ ಮಾಡುತ್ತಿದ್ದಾರೆ. ದೇಶದ ಬೆಳವಣಿಗೆ ಮತ್ತು ಗೌರವಗಳನ್ನು ಮರೆತು ತಮ್ಮ ಸ್ವಂತ ಬೆಳವಣಿಗೆಗಾಗಿ ಬದುಕು ಸಾಗಿಸುತ್ತಿದ್ದಾರೆ ಎಂದರು.

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಮಂಜುನಾಥರೆಡ್ಡಿ ಮಾತನಾಡಿ ಹಿಂದಿನ ಕಾಲದಿಂದಲೂ ಭ್ರಷ್ಟಾಚಾರವಿದ್ದರೂ ಇತ್ತೀಚಿನ ವರ್ಷಗಳಲ್ಲಿ ಮಿತಿಮೀರಿದೆ. ಹಣಗಳಿಕೆಯ ವ್ಯಾಮೋಹದಿಂದ ಪ್ರಾಮಾಣಿಕರನ್ನೂ ಭ್ರಷ್ಟರನ್ನಾಗಿ ಮಾಡುತ್ತಿದ್ದಾರೆ.ವರ್ಷದಿಂದ ವರ್ಷಕ್ಕೆ ಭ್ರಷ್ಟಾಚಾರ ಅಧಿಕವಾಗುತ್ತಿರುವುದು ನಾವೆಲ್ಲ ತಲೆತಗ್ಗಿಸಬೇಕಾಗಿದೆ ಎಂದು
ತಿಳಿಸಿದರು.

ನಗರಸಭೆಯ ಅಧ್ಯಕ್ಷೆ ಸುಜಾತಶಿವಣ್ಣ, ಉಪಾಧ್ಯಕ್ಷೆ ಸುಜಾತಶಿವಪ್ಪ, ವಕೀಲ ಎ.ಎನ್‌.ವೇಣುಕುಮಾರ್‌, ವಕೀಲರ ಸಂಘದ ಕಾರ್ಯದರ್ಶಿ ಆರ್‌.ವೆಂಕಟರಮಣಾರೆಡ್ಡಿ, ಟಿ.ಕೆ.ಶ್ರೀಧರ್‌, ಹಿರಿಯ ವಕೀಲ ಆರ್‌.ಮುನಿರೆಡ್ಡಿ, ವಕೀಲರಾದ ಆರ್‌.ಮುನಿಕೃಷ್ಣಪ್ಪ, ವಿ.ರಮೇಶ್‌, ಅಶ್ವತ್ಥಪ್ಪ, ರಾಜೇಶ್‌, ವೈ.ಕೆ ರಮೇಶಬಾಬು, ಎನ್‌.ಶ್ರೀನಿವಾಸಪ್ಪ, ಶೋಭಾ, ಶ್ರೀವಿದ್ಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.