ADVERTISEMENT

ಶೀಘ್ರದಲ್ಲಿ ನಂದಿ ಬೆಟ್ಟದ ಅಭಿವೃದ್ಧಿಗೆ ನೀಲ ನಕ್ಷೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2017, 10:26 IST
Last Updated 11 ಏಪ್ರಿಲ್ 2017, 10:26 IST

ಚಿಕ್ಕಬಳ್ಳಾಪುರ: ‘ನಂದಿ ಬೆಟ್ಟವನ್ನು ಸಮಗ್ರವಾಗಿ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲು ಸಿದ್ಧಪಡಿಸುತ್ತಿರುವ ನೀಲ ನಕ್ಷೆ ಕೆಲವೇ ದಿನಗಳಲ್ಲಿ ಅಂತಿಮಗೊಳ್ಳಲಿದೆ. ಬಳಿಕ ಹಂತ ಹಂತವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ನಂದಿ ಬೆಟ್ಟದಲ್ಲಿ ಗಾಂಧಿ ನಿಲಯದ ಬಳಿ ₹ 1.92 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಹೋಟೆಲ್ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.‘ಇತ್ತೀಚೆಗಷ್ಟೇ ಬೆಟ್ಟದ ತಪ್ಪಲಿನ ರಸ್ತೆಯನ್ನು ₹ 4.80 ಕೋಟಿ ವೆಚ್ಚದಲ್ಲಿ ಹೊಸದಾಗಿ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಬೆಟ್ಟದ ಮೇಲಿನ ರಸ್ತೆ ಸಂಪೂರ್ಣ ಹಾಳಾಗಿತ್ತು. ಅದನ್ನು ತೋಟಗಾರಿಕೆ ಇಲಾಖೆಯ ವತಿಯಿಂದ ₹ 1.60 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಯಿತು’ ಎಂದರು.

‘ಬೆಂಗಳೂರಿಗೆ ಬೆಟ್ಟ ಸಮೀಪದಲ್ಲಿಯೇ ಇರುವ ಕಾರಣಕ್ಕೆ ವಾರಾಂತ್ಯದ ರಜೆಗಾಗಿ ಸಾವಿರಾರು ಜನರು ಬೆಟ್ಟಕ್ಕೆ ಬರುತ್ತಿದ್ದಾರೆ. ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ತಂಗಲು ಸ್ಥಳದ ಕೊರತೆ ಇತ್ತು. ಅದಕ್ಕಾಗಿ ₹ 1.92 ಕೋಟಿ ವೆಚ್ಚದಲ್ಲಿ 11 ಕೊಠಡಿಗಳಿರುವ ಈ ಹೋಟೆಲ್ ನಿರ್ಮಿಸಲಾಗಿದೆ. ಇದನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ (ಕೆಎಸ್‌ಟಿಡಿಸಿ) ವಹಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಈ ಹೋಟೆಲ್‌ನಲ್ಲಿ ಒಂದು ಕೊಠಡಿಗೆ ದಿನಕ್ಕೆ ₹ 2,000 ಬಾಡಿಗೆ ನಿಗದಿಪಡಿಸಲಾಗಿದೆ. ಫೈನ್‌ಟಾಫ್ ಹೋಟೆಲ್ ನವೀಕರಿಸಲಾಗುತ್ತಿದೆ. ದೋಸಾ ಕೌಂಟರ್ ಪುನರಾರಂಭ ಮಾಡಲಾಗುತ್ತಿದೆ. ಬೆಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತಿದ್ದೆವೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ದೀಪ್ತಿ ಕಾನಡೆ, ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಕುಮಾರ್‌ ಪುಷ್ಕರ್‌, ನಿರ್ದೇಶಕರಾದ ಎಡ್ವಿನ್, ವಿಜಯ್, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್, ಹಾಪ್‌ಕಾಮ್ಸ್‌ ಅಧ್ಯಕ್ಷ ಜಿ.ಆರ್.ಶ್ರೀನಿವಾಸ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಎಂ.ಮುನಿಯಪ್ಪ, ತಾ.ಪಂ. ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ನಾಗೇಶ್, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.