ADVERTISEMENT

ಸಂಪನ್ನಗೊಂಡ ಹೂವಿನ ಕರಗ ಶಕ್ತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 29 ಮೇ 2017, 6:30 IST
Last Updated 29 ಮೇ 2017, 6:30 IST

ಚಿಕ್ಕಬಳ್ಳಾಪುರ: ಶನಿವಾರ ರಾತ್ರಿ ಆರಂಭಗೊಂಡ ಬಾಪೂಜಿ ನಗರದ ಮಹೇಶ್ವರಿ ದೇವಾಲಯದ 56ನೇ ವರ್ಷದ ದ್ರೌಪತಮ್ಮನವರ ಹೂವಿನ ಕರಗ ಶಕ್ತ್ಯುತ್ಸವ ಭಾನುವಾರ ಬೆಳಿಗ್ಗೆ 11ರವರೆಗೆ ನಗರದಾದ್ಯಂತ ವೈಭವಪೂರ್ಣವಾಗಿ ನಡೆಯಿತು. ನೆರೆಹೊರೆಯ ಗ್ರಾಮಸ್ಥರ ಜತೆಗೆ ಸ್ಥಳೀಯ ಸಾವಿರಾರು ಭಕ್ತರು ಉತ್ಸವಕ್ಕೆ ಸಾಕ್ಷಿಯಾದರು.

ಮಹಿಳೆಯೊಬ್ಬರು ಕರಗದ ಪೂಜಾರಿಯಾಗುವುದು ವೈಶಿಷ್ಟ್ಯ. ಕರಗದ ಪ್ರಯುಕ್ತ ನಗರದ ಪ್ರಮುಖ ರಸ್ತೆಗಳಿಗೆ ದೀಪಾಲಂಕಾರ ಮಾಡಲಾಗಿತ್ತು. ದೇವಸ್ಥಾನದಲ್ಲಿ ಶನಿವಾರ ರಾತ್ರಿ ದ್ರೌಪದಮ್ಮನವರ ಕಲ್ಯಾಣೋತ್ಸವ ಹಾಗೂ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು.

ಅರಿಶಿನ ಬಣ್ಣದ ಸೀರೆ ಉಟ್ಟು, ಬಳೆ ತೊಟ್ಟು, ದ್ರೌಪದಿಯಂತೆ ಸರ್ವಾಲಂಕಾರ ಭೂಷಿತರಾಗಿದ್ದ ಕರಗದ ಪೂಜಾರಿ ತಮಿಳುನಾಡಿನ  ಪುಟ್ಟಮ್ಮ ಅವರು ಹೂವಿನ ಕರಗ ಹೊತ್ತು ರಾತ್ರಿ 10.30ರ ಸುಮಾರಿಗೆ ಒಂದು ಕೈಯಲ್ಲಿ ಕತ್ತಿ ಮತ್ತೊಂದು ಕೈಯಲ್ಲಿ ಮಂತ್ರದಂಡ ಹಿಡಿದು ಧರ್ಮರಾಯಸ್ವಾಮಿ ದೇವಾಲಯದ ಗರ್ಭಗುಡಿಯಿಂದ ಹೊರ ಬರುತ್ತಿದ್ದಂತೆ ತಮಟೆ ವಾದನ, ಮಂಗಳ ವಾದ್ಯಗಳು ಮೊಳಗಿದವು. ಖಡ್ಗ ಹಿಡಿದಿದ್ದ ವೀರಕುಮಾರರು ‘ಗೋವಿಂದಾ. ಗೋವಿಂದಾ..’ ಎಂದು ನಾಮಸ್ಮರಣೆ ಮಾಡುತ್ತ ಅವರ ಹಿಂದೆ ಹೆಜ್ಜೆ ಹಾಕಿದರು.

ADVERTISEMENT

ಮಲ್ಲಿಗೆ, ಕನಕಾಂಬರ ಹೂವುಗಳಿಂದ ಆಕರ್ಷಕವಾಗಿ ಕಂಗೊಳಿಸುತ್ತಿದ್ದ ‘ಕರಗ’ ಸೂಸುತ್ತಿದ್ದ ಮಲ್ಲಿಗೆಯ ಪರಿಮಳ ಕರಗದ ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಮನೆ ಮಾಡಿತ್ತು. ನಗರದ ವಿವಿಧೆಡೆ ಕರಗಧಾರಿಗಳ ಸ್ವಾಗತಕ್ಕೆ ಮನೆಗಳ ಮುಂದೆ ರಂಗೋಲಿ ಬಿಡಿಸಿ, ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಗಲ್ಲಿ ಗಲ್ಲಿಗಳಲ್ಲಿ ಜನ ರಾತ್ರಿ ಇಡೀ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕರಗದ ದರ್ಶನ ಪಡೆದರು.

ಭುನವೇಶ್ವರಿ ವೃತ್ತ, ಮರುಳ ಸಿದ್ದೇಶ್ವರ ವೃತ್ತದಲ್ಲಿ ನಿರ್ಮಿಸಿದ್ದ ವೇದಿಕೆ ಮೇಲೆ ಕರಗಧಾರಿ ಪುಟ್ಟಮ್ಮ ಅವರು ತಮಟೆ ವಾದನಕ್ಕೆ ಹೆಜ್ಜೆ ಹಾಕುವುದನ್ನು ಅಪಾರ ಪ್ರಮಾಣದ ಭಕ್ತಸಮೂಹ ನೋಡಿ ಪರವಶ ಗೊಂಡಿತು. ಬಜಾರ್ ರಸ್ತೆ ಸೇರಿದಂತೆ ವಿವಿಧೆಡೆ ರಸಮಂಜರಿ ಕಾರ್ಯಕ್ರಮ ಗಳನ್ನು ಆಯೋಜಿಸ ಲಾಗಿತ್ತು. ವಿವಿಧ ಜಿಲ್ಲೆಗಳು ಮತ್ತು ಹೊರ ರಾಜ್ಯಗಳಿಂದ ಬಂದಿದ್ದ 15ಕ್ಕೂ ಹೆಚ್ಚು ಕಲಾ ತಂಡಗಳು ಮೆರವಣಿಗೆಗೆ ಅದ್ಧೂರಿತನ ತಂದಿದ್ದವು.

ಆಂಧ್ರಪದೇಶದ ಕಲಾತಂಡಗಳು ಪ್ರದರ್ಶಿಸಿದ ನವದುರ್ಗೆ, ಅಷ್ಟಲಕ್ಷ್ಮಿ ಮತ್ತು ಅಘೋರಿ ನೃತ್ಯಗಳು ವಿಶೇಷ ಆಕರ್ಷಣೆಯಾಗಿದ್ದವು. ನಗರದಾದ್ಯಂತ ಸಂಚರಿಸಿದ ಕರಗದ ಮೆರವಣಿಗೆಗೆ ಕೀಲುಕುದುರೆ, ಡೊಳ್ಳು ಕುಣಿತ, ಪೂಜಾ ಕುಣಿತ, ತಮಟೆ ವಾದನ ಸೇರಿದಂತೆ ವಿವಿಧ ಜನಪದ ಕಲಾತಂಡಗಳು ಕಳೆ ತುಂಬಿದವು. ಬಹುತೇಕ ವಾರ್ಡ್‌ಗಳ ಮುಖ್ಯರಸ್ತೆ ಮತ್ತು ಅಡ್ಡರಸ್ತೆಗಳಲ್ಲಿ ಕರಗ ಸಾಗಿ ಬಂದಾಗ ಸ್ಥಳೀಯರು ಪೂಜೆ ಸಲ್ಲಿ­ಸಿ ಭಕ್ತಿ ಸಮರ್ಪಿಸಿದರು.

ಸಂಸದ ಕೆ.ಎಚ್.ಮುನಿಯಪ್ಪ ಅವರು ರಾತ್ರಿ 9.30ರ ಸುಮಾರಿಗೆ ಮಹೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ, ದರ್ಶನ ಪಡೆದರು. ಶಾಸಕ ಡಾ.ಕೆ. ಸುಧಾಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎನ್.ಅನುರಾಧಾ, ಮಾಜಿ ಶಾಸಕ ರಾದ ಎಸ್‌.ಎಂ.ಮುನಿಯಪ್ಪ,ಅನಸೂಯಮ್ಮ, ಅರುಂಧತಿ ಹರಿಜನ ಅಭಿವೃದ್ಧಿ ಸಂಘ ಸಂಚಾಲಕ ಎಂ.ಎಸ್. ಸಂದೀಪ್, ಕಾರ್ಯದರ್ಶಿ ಸಿ.ಎನ್. ಮುರುಳಿ ಮೋಹನ್, ಜಂಟಿ ಕಾರ್ಯದರ್ಶಿ ಬಿ.ವಿ.ವೆಂಕಟೇಶ್ ಕರಗ ಮಹೋತ್ಸವದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.