ADVERTISEMENT

ಸಮಾಜಕ್ಕೆ ನಿಮ್ಮ ಬುದ್ಧಿ, ಜ್ಞಾನ ಸಮರ್ಪಿತವಾಗಲಿ

ಇಸ್ರೋ ಜಿಯೋ ಸ್ಯಾಟ್‌ ವಿಭಾಗದ ಮುಖ್ಯಸ್ಥ ಹಿರಿಯಣ್ಣ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 6:21 IST
Last Updated 17 ಜುಲೈ 2017, 6:21 IST

ಶಿಡ್ಲಘಟ್ಟ: ‘ಇಂದಿನ ಓದುಗ ಮುಂದಿನ ನಾಯಕ’ ಎಂಬ ಮಾತು ವಿದ್ಯಾರ್ಥಿಗಳನ್ನು ಪ್ರೇರೇಪಿಸುವಂತಾಗಲಿ. ಹೊಸತನವಾಗಿ ಯೋಚಿಸಿ, ಹೊಸತನ್ನು ಕಂಡು ಹಿಡಿಯುವ ಬಗ್ಗೆ ನಿಮ್ಮ ಆಲೋಚನೆಗಳು ಸಾಗಲಿ, ಸಮಾಜಕ್ಕೆ ನಿಮ್ಮ ಬುದ್ಧಿ, ಜ್ಞಾನ ಸಮರ್ಪಿತವಾಗಲಿ’ ಎಂದು ಇಸ್ರೋ ಹಿರಿಯ ವಿಜ್ಞಾನಿ ಹಾಗೂ ಜಿಯೋ ಸ್ಯಾಟ್‌ ವಿಭಾಗದ ಮುಖ್ಯಸ್ಥ ಹಿರಿಯಣ್ಣ ತಿಳಿಸಿದರು.

ನಗರದ ದಿ ಕ್ರೆಸೆಂಟ್‌ ಶಾಲೆಯಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ ಹಾಗೂ ದಿ ಕ್ರೆಸೆಂಟ್‌ ಶಾಲೆಯ ಸಹಯೋಗದಲ್ಲಿ ನಡೆದ ‘ಸಾಧಕರ ಸಾಧನೆ, ವಿದ್ಯಾರ್ಥಿಗಳಿಗೆ ಪ್ರೇರಣೆ’ ಎಂಬ ಕಾರ್ಯಕ್ರಮದಡಿಯಲ್ಲಿ ಏರ್ಪಡಿಸಿದ್ದ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಅವಲೋಕನ ಎಂಬ ವಿಜ್ಞಾನ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಯೂ ಪಠ್ಯದೊಂದಿಗೆ ತಿಂಗಳಿಗೊಂದು ಹೊಸ ಪುಸ್ತಕ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಪ್ರತಿದಿನ ಒಂದು ಗಂಟೆ ತಡವಾಗಿ ಮಲಗಿ. ಆ ಸಮಯವನ್ನು ಓದಿಗೆ ಮೀಸಲಿಡಿ. ಬುದ್ಧಿವಂತರಲ್ಲಿ ಬುದ್ಧಿವಂತರನ್ನು ಹುಡುಕಬೇಕಾದ ಕಾಲವಿದು. ಜ್ಞಾನಾರ್ಜನೆ ಮಾಡುತ್ತಾ ಸಾಗಿದಂತೆ ಸ್ವತಂತ್ರ ಆಲೋಚನೆಗಳು ಹುಟ್ಟುತ್ತವೆ. ಸೋಂಬೇರಿ ಎಂಬ ಶಬ್ದ ನಿಘಂಟಿಗೆ ಸೀಮಿತವಾಗಿರಲಿ, ಹತ್ತಿರಕ್ಕೆ ಬಿಟ್ಟುಕೊಳ್ಳದಿರಿ ಎಂದು ಹೇಳಿದರು.

ADVERTISEMENT

ಭಾರತೀಯ ಬಾಹ್ಯಾಹಾಶ ವಿಜ್ಞಾನ ನಡೆದು ಬಂದ ದಾರಿ, ಉಪಗ್ರಹ ಉಡ್ಡಯನ ಕಾರ್ಯದ ಬಗ್ಗೆ, ಇಸ್ರೋ ಸಂಸ್ಥೆ ಹಾಗೂ ಅದರ ಕಚೇರಿಗಳ ಕಾರ್ಯಗಳ ಕುರಿತು ಸ್ಲೈಡ್‌ ಷೋ ಮೂಲಕ ಚಿತ್ರಗಳನ್ನು ತೋರಿಸುತ್ತಾ ವಿವರಿಸಿದರು. ಪಿಯುಸಿ ವಿದ್ಯಾರ್ಥಿಗಳು ಇಸ್ರೋ ಸಂಸ್ಥೆ ಸೇರಲು ಪ್ರೇರೇಪಿಸಿ ಅವರು, ತೆಗೆದುಕೊಳ್ಳಬೇಕಾದ ಪರೀಕ್ಷೆಗಳ ಬಗ್ಗೆ ತಿಳಿಸಿದರು. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೇಸ್‌ ಸೈನ್ಸ್‌ ಸೇರಲು ಈಗಿನಿಂದಲೇ ವಿಜ್ಞಾನವನ್ನು ಅರ್ಥ ಮಾಡಿಕೊಂಡು ಓದಿ ಎಂದು ಸಲಹೆ ನೀಡಿದರು.

ಬೀ ಬ್ರೈನಿ ಎಜುಕೇಷನಲ್‌ ಫೌಂಡೇಷನ್‌ ಸಂಸ್ಥೆಯ ಮೇಖಲಾ ಹಿರಿಯಣ್ಣ ಗಣಿತ ಮತ್ತು ವಿಜ್ಞಾನದ ಆಕರ್ಷಕ ಸಂಗತಿಗಳು ಹಾಗೂ ವಿಜ್ಞಾನ ಮತ್ತು ಗಣಿತವನ್ನು ಇಷ್ಟಪಟ್ಟು ಓದುವ ಬಗ್ಗೆ ಅವರು ವೀಡಿಯೋ ತೋರಿಸಿವ ಮೂಲಕ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಹಾದಿಯ ಪರಿಚಯ ಮಾಡಿಕೊಟ್ಟರು.

ದಿ ಕ್ರೆಸೆಂಟ್‌ ಶಾಲೆಯಲ್ಲಿ ವಿಜ್ಞಾನ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ಒಂಭತ್ತನೇ ತರಗತಿಯ ಎಸ್‌.ಕೆ.ಅನನ್ಯ, ಎ.ನಿಮ್ರ ತರನಮ್‌, ರಜಾ ಅಲಿ, ಬಿ.ಆರ್‌.ಯಶ್ವಂತ್‌, ಹತ್ತನೇ ತರಗತಿಯ ಸಿ.ಆರ್‌.ಸುಮಾ, ಓಂ ದೇಶಮುದ್ರೆ, ತೂಬಾ ನುದ್ರತ್‌, ಡಿ.ವರುಣ್‌ ಸಿಂಗ್‌ ಅವರಿಗೆ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಪ್ರಮಾಣಪತ್ರ, ಪಾರಿತೋಷಕ ಮತ್ತು ವಿಕ್ರಂ ಸಾರಾಬಾಯ್‌, ಅಬ್ದುಲ್‌ ಕಲಾಂ ಅವರ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ವಿಜ್ಞಾನಿ ಹಿರಿಯಣ್ಣ, ‘ರಾಕೆಟ್‌ ಇಂಧನ, ಅನ್ಯಗ್ರಹ ಜೀವಿಗಳು, ಭೂಮಿಯ ಸೃಷ್ಟಿ, ನಕ್ಷತ್ರಗಳು, ಉಪಗ್ರಹ ವಾಹನ ಮೊದಲಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಪ್ರಶ್ನೆಗಳನ್ನು ಕೇಳಿದ ವಿದ್ಯಾರ್ಥಿಗಳಿಗೆ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಪುಸ್ತಕವನ್ನು ನೀಡಲಾಯಿತು.

ದಿ ಕ್ರೆಸೆಂಟ್‌ ವಿದ್ಯಾಸಂಸ್ಥೆಯ ಕಾರ್ಯದರ್ಶಿ ತಮೀಮ್‌ ಅನ್ಸಾರಿ, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ, ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌, ಎಸ್‌.ಸತೀಶ್‌, ಅಜಿತ್‌ ಕೌಂಡಿನ್ಯ, ಭಾರತಿ ಹಿಯಣ್ಣ, ಆಪ್ಟಿಮಾ ಡೆವಲಪರ್ಸ್‌ ರವಿಕುಮಾರ್‌, ವಿ.ಕೃಷ್ಣ ಕಾರ್ಯಕ್ರಮದಲ್ಲಿ ಹಾಜರಿದ್ದರು.

**

ಇಸ್ರೋ ಭರವಸೆ

ಶಿಡ್ಲಘಟ್ಟದ ದಿ ಕ್ರೆಸೆಂಟ್‌ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳನ್ನು ಬೆಂಗಳೂರಿನ ಇಸ್ರೋ ಸಂಸ್ಥೆಗೆ ಕರೆದೊಯ್ಯಲು ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಇಸ್ರೋ ಹಿರಿಯ ವಿಜ್ಞಾನಿ ಹಾಗೂ ಜಿಯೋ ಸ್ಯಾಟ್‌ ವಿಭಾಗದ ಮುಖ್ಯಸ್ಥ ಹಿರಿಯಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು. ವಿದ್ಯಾರ್ಥಿಗಳಿಗೆ ಇಸ್ರೋ ಸಂಸ್ಥೆಯನ್ನು ತೋರಿಸಿ ಪರಿಚಯಿಸುವುದಾಗಿ ವಿಜ್ಞಾನಿ ಹಿರಿಯಣ್ಣ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.