ADVERTISEMENT

ಸರ್ಕಾರದ ಮುಂದೆ ಸಮಾನ ಶಿಕ್ಷಣದ ಚಿಂತನೆ

ಮಸೀದಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 7:05 IST
Last Updated 17 ಮಾರ್ಚ್ 2018, 7:05 IST
ಸಾರ್ವಜನಿಕರ ಅಹವಾಲು ಆಲಿಸಿದ ಶಿಕ್ಷಣ ಸಚಿವ ತನ್ವೀರ್ ಸೇಠ್
ಸಾರ್ವಜನಿಕರ ಅಹವಾಲು ಆಲಿಸಿದ ಶಿಕ್ಷಣ ಸಚಿವ ತನ್ವೀರ್ ಸೇಠ್   

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಏಕರೂಪ ಹಾಗೂ ಸಮಾನ ಶಿಕ್ಷಣ ನೀತಿ ಜಾರಿಗೊಳಿಸಲು, ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಪಠ್ಯಕ್ರಮ ಪರಿಷ್ಕರಿಸುವ ವಿಚಾರದಲ್ಲಿ ಸರ್ಕಾರ ಚಿಂತನೆ ನಡೆಸಿದೆ ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದರು.

ನಗರದ ಹುಸೇನಿಯಾ ಮಸೀದಿಯಲ್ಲಿ ಶುಕ್ರವಾರ ಮಸೀದಿಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಇವತ್ತು ಶಿಕ್ಷಣ ನಮ್ಮ ಮುಂದೆ ಅನೇಕ ಸವಾಲು ಒಡ್ಡುತ್ತಿದೆ. ಉದ್ಯೋಗ ನೀಡುವಂತಹ ಕೌಶಲವುಳ್ಳ ಮತ್ತು ಸಂಸ್ಕಾರಕ್ಕೆ ಅಗತ್ಯವಾದ ಮೌಲ್ಯಗಳುಳ್ಳ ಶಿಕ್ಷಣ ಇಂದಿನ ಅಗತ್ಯವಾಗಿದೆ. ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್‌ (ಎನ್‌ಸಿಇಆರ್‌ಟಿ), ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಸಿ) ಮತ್ತು ಐಸಿಎಸ್‌ಸಿ ಪಠ್ಯಕ್ರಮಕ್ಕೆ ಹೋಲಿಸಿದರೆ ನಮ್ಮ ಪಠ್ಯಕ್ರಮದಲ್ಲಿ ವಿಷಯ ವಸ್ತು ಕಡಿಮೆ ಇದೆ. ಹೀಗಾಗಿ ಅದನ್ನು ಮತ್ತೊಮ್ಮ ಗುಣಮಟ್ಟಗೊಳಿಸುವ ಚಿಂತನೆ ನಡೆಯುತ್ತಿದೆ ಎಂದು ಹೇಳಿದರು.

ADVERTISEMENT

ಶ್ರೀಮಂತರು ಖಾಸಗಿ ಶಾಲೆಗಳಿಗೆ ಹೋಗುವುದು, ಬಡವರ ಮಕ್ಕಳು ಸರ್ಕಾರಿ ಶಾಲೆಗೆ ಹೋಗಬೇಕಾದ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಸಮಾನ ಶಿಕ್ಷಣದ ಚಿಂತನೆ ನಡೆದಿದೆ. ಜತೆಗೆ ಮುಂದಿನ ಸಾಲಿನಿಂದ ಒಂದನೇ ತರಗತಿಯಿಂದಲೇ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಸಿ) ಮತ್ತು ಐಸಿಎಸ್‌ಸಿಯಲ್ಲಿ ಕನ್ನಡ ಕಡ್ಡಾಯ ಮಾಡುತ್ತಿದ್ದೇವೆ ಎಂದರು.

ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಶಿಕ್ಷಕರಿಗೆ ತರಬೇತಿ ನೀಡಿದ್ದೇವೆ. ಮಕ್ಕಳಲ್ಲಿ ಶೈಕ್ಷಣಿಕ ಜವಾಬ್ದಾರಿ ಹಾಗೂ ಸುಧಾರಣೆ ತರುವ ನಿಟ್ಟಿನಲ್ಲಿ 4ನೇ ತರಗತಿಯಿಂದ 9ನೇ ತರಗತಿಯ 36 ಲಕ್ಷ ಮಕ್ಕಳಿಗೆ ಒಎಂಆರ್ ಶೀಟ್‌ನಲ್ಲಿ ಪರೀಕ್ಷೆ ನಡೆಸಿದ್ದು ವಿಶ್ವ ದಾಖಲೆಯಾಗಿದೆ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸರ್ಕಾರಿ ಶಾಲೆಗಳನ್ನು ಸಬಲೀಕರಣ ಮಾಡಲು ವರದಿ ನೀಡಲಾಗಿದೆ. ಆ ವರದಿಯ ಶಿಫಾರಸುಗಳನ್ನು ಕರ್ನಾಟಕದಲ್ಲಿ ಶಿಕ್ಷಣ ನೀತಿ ಅಳವಡಿಸಲು ಉದ್ದೇಶಿಸಲಾಗಿದೆ. ವರದಿಯನ್ನು ಸಚಿವ ಸಂಪುಟದ ಒಪ್ಪಿಗೆಗೆ ಕಳುಹಿಸಲಾಗಿದೆ. ಅದರಲ್ಲಿ ಕೆಲವು ಮಾರ್ಪಾಟು ಮಾಡಿಕೊಳ್ಳಲು ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.