ADVERTISEMENT

ಹಬ್ಬದಂತೆ ಆಚರಿಸಲು ಸುತ್ತೋಲೆ

​ಪ್ರಜಾವಾಣಿ ವಾರ್ತೆ
Published 29 ಮೇ 2017, 6:32 IST
Last Updated 29 ಮೇ 2017, 6:32 IST

ಚಿಂತಾಮಣಿ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಕ್ಕೆ  ಕ್ಷಣಗಣನೆ ಆರಂಭವಾಗಿದೆ. ಸೋಮವಾರ (ಮೇ 29) ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಪ್ರಾರಂಭವಾಗುತ್ತವೆ.ಎರಡು ತಿಂಗಳ ಬೇಸಿಗೆ ರಜೆಯಲ್ಲಿ ಶಿಬಿರಗಳು, ಪ್ರವಾಸ, ಆಟ, ಮೋಜಿನಲ್ಲಿ ಕಳೆದಿದ್ದ ಮಕ್ಕಳು ಶಾಲೆಗಳಿಗೆ ತೆರಳಲು ತಯಾರಿ ನಡೆಸುತ್ತಿದ್ದಾರೆ. ಪೋಷಕರು ಅಗತ್ಯ ಸಿದ್ಧತೆ ಮಾಡಿ ಕೊಳ್ಳುತ್ತಿದ್ದಾರೆ.

‘1 ರಿಂದ 9 ನೇ ತರಗತಿ ಹಾಗೂ 10 ನೇ ತರಗತಿಯ ಭಾಷಾ ವಿಷಯಗಳ ಪಠ್ಯಪುಸ್ತಕಗಳು ಪರಿಷ್ಕೃತಗೊಂಡಿವೆ. ಖಾಸಗಿ ಶಾಲೆಗಳಿಗೆ  ಮಾರಾಟ ಮಾಡುವ ಪಠ್ಯ ಪುಸ್ತಕಗಳಲ್ಲಿ ಶೇ 48ರಷ್ಟು, ಉಚಿತವಾಗಿ ವಿತರಿಸುವ ಪಠ್ಯಪುಸ್ತಕಗಳಲ್ಲಿ ಶೇ 43 ರಷ್ಟು ಮಾತ್ರ ತಾಲ್ಲೂಕಿಗೆ ಪೂರೈಕೆಯಾಗಿವೆ. ಮೇ 29 ರಿಂದಲೇ ವಿತರಿಸಲಾಗುವುದು’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರಿ ಶಾಲೆಗಳ ದಾಖಲಾತಿ ಉತ್ತಮಪಡಿಸಲು ಈಗಾಗಲೇ ವಿಶೇಷ ದಾಖಲಾತಿ ಆಂದೋಲನಾ ನಡೆಯುತ್ತಿದೆ. ಶಾಲೆಗಳ ಪ್ರಾರಂಭೋತ್ಸವವನ್ನು ಹಬ್ಬದ ರೀತಿ ಹಾಗೂ ಮಕ್ಕಳಿಗೆ ಅಹ್ಲಾದ ವಾತಾವರಣದಲ್ಲಿ ನಡೆಸಬೇಕು. ಶಾಲೆಯ ಒಳಾಂಗಣ  ಹಾಗೂ ಹೊರಾಂಗಣ ಸ್ವಚ್ಛಗೊಳಿಸಿ.

ADVERTISEMENT

ತಳಿರು ತೋರಣಗಳಿಂದ ಅಲಂಕರಿಸ ಬೇಕು. ಎಸ್‌ಡಿ ಎಂಸಿ ಹಾಗೂ ಶಾಲಾ ವ್ಯಾಪ್ತಿಯ ಜನಪ್ರತಿನಿಧಿಗಳನ್ನು  ಆಹ್ವಾನಿಸ ಬೇಕು. ಅಕ್ಷರ ದಾಸೋಹದ ಜತೆಗೆ ಸಿಹಿ ಹಂಚಿ, ಸಂಭ್ರಮದ ವಾತಾವರಣ ಉಂಟುಮಾಡಬೇಕು ಎಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಮಕ್ಕಳಿಗೆ ಉಚಿತವಾಗಿ ಪೂರೈಸುವ ಪಠ್ಯಪುಸ್ತಕ, ಸಮವಸ್ತ್ರಗಳನ್ನು ಸಾಂಕೇತಿಕವಾಗಿ ಜೂನ್‌ 2 ರಂದು ಕೈವಾರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಸಕ ಎಂ.ಕೃಷ್ಣಾರೆಡ್ಡಿ ಅವರಿಂದ ವಿತರಿಸಲಾಗುವುದು. ಜೂನ್‌ ಮೊದಲ ವಾರದಲ್ಲಿ ಎಲ್ಲ ಸೌಲಭ್ಯಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮಿಂಚಿನ ಸಂಚಾರ
ಎಲ್ಲ ಶಾಲೆಗಳು ತೆರೆದಿವೆಯೇ, ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗಿದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳುವ ಸಲುವಾಗಿ ಜೂನ್‌ 5 ರಿಂದ 30 ರವರೆಗೆ ಅಧಿಕಾರಿಗಳ ‘ಮಿಂಚಿನ ಸಂಚಾರ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ತಾಲ್ಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಈ ಕಾರ್ಯಕ್ರಮಕ್ಕೆ ಮೇಲ್ವಿಚಾರಕರನ್ನು ನಿಯೋಜಿಸುತ್ತಾರೆ.

ನಿಯೋಜಿತ ಅಧಿಕಾರಿಗಳು ಸಂಬಂಧಿಸಿದ ಶಾಲೆಗಳಿಗೆ ತೆರಳಿ ಅಲ್ಲಿನ ಪರಿಸ್ಥಿತಿ ಅವಲೋಕಿಸುವರು. ಭೇಟಿ ಸಮಯದಲ್ಲಿ ಶಾಲಾ ಕೊಠಡಿಗಳು, ಆವರಣದ ಸ್ವಚ್ಛತೆ, ಶೌಚಾಲಯ ಮತ್ತು ಕುಡಿಯುವ ನೀರು, ಬಿಸಿಯೂಟ ವ್ಯವಸ್ಥೆ ಪರಿಶೀಲಿಸುವರು. ಪಠ್ಯಪುಸ್ತಕ, ಸಮವಸ್ತ್ರ, ನೋಟ್‌ ಪುಸ್ತಕಗಳ ವಿತರಣೆ, ವಿದ್ಯಾರ್ಥಿಗಳ ದಾಖಲಾತಿ ಹಾಗೂ ಹಾಜರಾತಿಯ ಸಮರ್ಪಕವಾಗಿದೆಯೇ, ಸೇತುಬಂಧ ಕಾರ್ಯಕ್ರಮ ನಡೆಯುತ್ತಿದೆಯೇ, ಎಂಬ ಮಾಹಿತಿಯನ್ನು ಸಂಗ್ರಹಿಸಿ  ವರದಿಯನ್ನು ಉಪನಿರ್ದೇಶಕರಿಗೆ ಸಲ್ಲಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.