ADVERTISEMENT

25ರಂದು ಸರ್ವೋದಯ ಕರ್ನಾಟಕ ಪಕ್ಷ ವಿಲೀನ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 4:52 IST
Last Updated 24 ಮಾರ್ಚ್ 2017, 4:52 IST

ಚಿಕ್ಕಬಳ್ಳಾಪುರ:  ‘ಸರ್ವೋದಯ ಕರ್ನಾಟಕ ಪಕ್ಷವು ಮಾರ್ಚ್‌ 25ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸ್ವರಾಜ್ ಇಂಡಿಯಾ ಪಕ್ಷ ಪಕ್ಷದೊಂದಿಗೆ ವಿಲೀನವಾಗಲಿದೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಿನಾರಾಯಣ ರೆಡ್ಡಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಹಿತಿ ದೇವನೂರು ಮಹಾದೇವ ಅಧ್ಯಕ್ಷರಾಗಿರುವ ಮತ್ತು ಶಾಸಕ ಕೆ.ಎಸ್.ಪುಟ್ಟಣಯ್ಯ ಅವರು ಕಾರ್ಯಾಧ್ಯಕ್ಷರಾಗಿರುವ ಸರ್ವೋದಯ ಕರ್ನಾಟಕ ಪಕ್ಷವು ಕಳೆದ ಒಂದು ದಶಕದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಕಾತರಿಸಿತ್ತು. ಅದಕ್ಕೆ ಇದೀಗ ಕಾಲ ಕೂಡಿಬಂದಿದೆ’ ಎಂದು ತಿಳಿಸಿದರು.

‘ಇವತ್ತು ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ದಲಿತ, ಅಲ್ಪಸಂಖ್ಯಾತ, ರೈತ, ಮಹಿಳೆಯರ ವಿರೋಧಿ ಧೋರಣೆಯಿಂದ ಕೂಡಿದ್ದು, ದೇಶ ವಿಧ್ವಂಸಕ ರಾಜಕಾರಣದಿಂದ ಕೂಡಿದೆ. ಇದಕ್ಕೆ ಪರ್ಯಾಯವಾಗಿ ಹೊಸದೊಂದು ಪಕ್ಷವನ್ನು ರಾಜ್ಯದಲ್ಲಿ ವಿಸ್ತರಿಸುವ ನಿಟ್ಟಿನಲ್ಲಿ ಇಂತಹದೊಂದು ನಿರ್ಧಾರಕ್ಕೆ ಬರಲಾಗಿದೆ. ಅನೇಕ ಸಂಘಟನೆಗಳು ಈ ವಿಚಾರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಬೆನ್ನಿಗೆ ನಿಂತಿವೆ’ ಎಂದರು.

‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿಗಳು ಪ್ರತಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಜಿಡ್ಡುಗಟ್ಟಿದ ರಾಜಕೀಯ ವ್ಯವಸ್ಥೆಗೆ ಹೊಸ ಚೇತನ್ಯ ನೀಡುವ ನಿಟ್ಟಿನಲ್ಲಿ ಹೋರಾಟಗಾರರು ರಾಜಕೀಯಕ್ಕೆ ಧುಮುಕುವ ಅನಿವಾರ್ಯತೆ ಇದೆ’ ಎಂದು ಹೇಳಿದರು.

ರೈತ ಸಂಘದ ರಾಜ್ಯ ವಿಭಾಗ ಮಟ್ಟದ ಉಪಾಧ್ಯಕ್ಷ ಯಾಕೂಬ್‌ ಷರೀಫ್, ಮುಖಂಡರಾದ ವೆಂಕಟಸ್ವಾಮಿ, ರವಿಪ್ರಕಾಶ್, ಪ್ರತಿಶ್, ರಘುನಾಥ್‌ ರೆಡ್ಡಿ, ಎಚ್‌.ಎಸ್.ಖಾಜಿಸಾಬ್‌, ರೆಡ್ಡಪ್ಪ, ರಾಮಾಂಜನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.