ADVERTISEMENT

ಮತದಾರರ ಒಲೈಕೆಗೆ ತಂತ್ರ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 9:39 IST
Last Updated 9 ಫೆಬ್ರುವರಿ 2018, 9:39 IST

ಚಿಂತಾಮಣಿ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಕ್ಷೇತ್ರದಲ್ಲಿ ಮತದಾರರ ಓಲೈಕೆಗೆ ರಾಜಕಾರಣಿಗಳು ವಿವಿಧ ತಂತ್ರಗಳನ್ನು ಎಣೆಯುತ್ತಿರುವುದು ಕಂಡುಬರುತ್ತಿದೆ. ಚಿಂತಾಮಣಿ ವಿಧಾನಸಭಾ ಕ್ಷೇತ್ರ ಒಂದು ವಿಶಿಷ್ಟ ರೀತಿಯ ಕ್ಷೇತ್ರ. ಇಲ್ಲಿ ಪಕ್ಷಗಳಿಗಿಂತ ವ್ಯಕ್ತಿಗಳ ಕೇಂದ್ರೀಕೃತ ರಾಜಕೀಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಕಳೆದ ಚುನಾವಣೆಯಿಂದ ಈ ಪದ್ಧತಿ ಸ್ವಲ್ಪಮಟ್ಟಿಗೆ ಬದಲಾವಣೆಯಾಗಿದೆ ಎನ್ನುತ್ತಾರೆ ಮುಖಂಡ ನರಸಿಂಹಮೂರ್ತಿ.

ಇಂತಹ ಕ್ಷೇತ್ರದಲ್ಲಿ ಉಡುಗೊರೆ, ಕೊಡುಗೆಗಳನ್ನು ನೀಡಿ ಮತದಾರರನ್ನು ಒಲಿಸಿಕೊಳ್ಳುವ ಹೊಸ ವರಸೆಗಳು ಆರಂಭಗೊಂಡಿವೆ. ಚುನಾವಣೆ ದೃಷ್ಟಿಯಲ್ಲಿರಿಸಿಕೊಂಡು ರಾಜಕಾರಣಿಗಳು ಬಗೆ ಬಗೆಯ ತಂತ್ರಗಳ ಮೂಲಕ ಜನರನ್ನು ಓಲೈಸಿಕೊಳ್ಳುವ ಕಸರತ್ತು ನಡೆಸಿದ್ದಾರೆ.

ರಾಜಕಾರಣಿಗಳು ಅಡ್ಡದಾರಿಗಳಿಂದ ಸಂಪಾದಿಸಿದ ಹಣವನ್ನು ತಂದು ಸುರಿದು ಮತದಾರರನ್ನು ಭ್ರಷ್ಟರನ್ನಾಗಿಸುತ್ತಿದ್ದಾರೆ. ಹಣ ಚೆಲ್ಲಿ, ಉಡುಗೊರೆಗಳನ್ನು ಕೊಟ್ಟು ಹಾಗೂ ಆಸೆ, ಅಮಿಷ ತೋರಿಸಿ ಚುನಾವಣೆ ಗೆಲ್ಲುವುದಾದರೆ ಜನಸಾಮಾನ್ಯರ ಪಾಡೇನು? ಜನಸಾಮಾನ್ಯರು ಚುನಾವಣೆಯಲ್ಲಿ ಸ್ಪರ್ಧಿಸುವುದಾದರೂ ಹೇಗೆ? ಪ್ರಜಾಪ್ರಭುತ್ವವನ್ನೇ ಅಪಹಾಸ್ಯಕ್ಕೀಡು ಮಾಡುವ ಪ್ರಯತ್ನವನ್ನು ಭಾವಿ ಅಭ್ಯರ್ಥಿಗಳು ನಡೆಸುತ್ತಿದ್ದಾರೆ ಎಂದು ಹಿರಿಯ ಪ್ರಜ್ಞಾವಂತ ರಮೇಶಬಾಬು ವಿಷಾದ
ವ್ಯಕ್ತಪಡಿಸುತ್ತಾರೆ.

ADVERTISEMENT

ಮತದಾರರಿಗೆ ವಿವಿಧ ಪ್ರಲೋಭನೆ ಒಡ್ಡುವ ಕಾರ್ಯ ನಡೆಯುತ್ತಿದೆ. ಮೊದಲು ಜನರನ್ನು ಬೇಡಿ ಮತ ಪಡೆಯಲಾಗುತ್ತಿತ್ತು. ಆದರೆ ಈಗ ಜನರಿಗೆ ಏನನ್ನಾದರೂ ನೀಡಿ ಮತ ಪಡೆಯುವ ಓಲೈಕೆ ರಾಜಕಾರಣ ನಡೆಯುತ್ತಿದೆ ಎಂದು ಅವರು ಖೇದ ವ್ಯಕ್ತಪಡಿಸುತ್ತಾರೆ.

ಜನರನ್ನು ಉಚಿತವಾಗಿ ಪ್ರವಾಸ, ತೀರ್ಥಯಾತ್ರೆಗಳಿಗೆ ಕರೆದೊಯ್ಯುವುದು, ಕ್ರಿಕೆಟ್‌ ಪಂದ್ಯಾವಳಿಗಳನ್ನು ಆಯೋಜಿಸುವುದು, ಹಬ್ಬ ಹರಿದಿನಗಳಿಗೆ ಅಗತ್ಯವಾದ ಸಾಮಗ್ರಿ ನೀಡುವುದು, ದೇವಾಲಯಗಳಿಗೆ ಭೇಟಿ ನೀಡಿ, ಅಭಿವೃದ್ಧಿಯ ಹೆಸರಿನಲ್ಲಿ ಹಣ ನೀಡುವುದು, ಸ್ತ್ರೀಶಕ್ತಿ ಸಂಘ ಸೇರಿದಂತೆ ಸಂಘಸಂಸ್ಥೆಗಳಿಗೆ ಸಹಾಯ ಮಾಡುವುದು. ವೈಯಕ್ತಿಕವಾಗಿ ಮನೆಗಳಿಗೆ ಭೇಟಿ ಮಾಡಿ ಹಣ ನೀಡುವುದು ಹೀಗೆ ಉಡುಗೊರೆಗಳ ಕಥೆಗಳು ಲೀಲಾಜಾಲವಾಗಿ ಜನರ ಬಾಯಿಗಳಲ್ಲಿ ನಲಿದಾಡುತ್ತಿವೆ.

ಯೋಚಿಸಿ ಮತದಾನ ಮಾಡಿ

ಕ್ಷೇತ್ರದಲ್ಲಿ ಸ್ವಯಂಘೋಷಿತ ಅಭ್ಯರ್ಥಿಗಳಿಗೆ ಕ್ಷೇತ್ರದ ಸಮಗ್ರ ಚಿತ್ರಣದ ಪರಿಚಯವಿಲ್ಲ. ಮೂಲಭೂತ ಸಮಸ್ಯೆಗಳಾದ ಕುಡಿಯುವ ನೀರು, ರಸ್ತೆಗಳು, ಜನರಿಗೆ ಉದ್ಯೋಗ, ನೀರಾವರಿ ಯೋಜನೆಗಳು, ರೈತರ ಸಮಸ್ಯೆಗಳು, ಶೈಕ್ಷಣಿಕ ಸಮಸ್ಯೆಗಳ ಕುರಿತು ಚರ್ಚೆ ನಡೆಸುತ್ತಿಲ್ಲ. ತನ್ನ ಸಾಧನೆ ಏನು? ಮುಂದಿನ ಯೋಜನೆಗಳೇನು? ಎಂದು ತಿಳಿಸುವುದಿಲ್ಲ. ಸಮಾಜಸೇವೆ, ದಾನ ಧರ್ಮಗಳ ಹೆಸರಿನಲ್ಲಿ ಹಣ ಚೆಲ್ಲಿ ಮತ ಕೇಳುತ್ತಿರುವುದರ ಬಗ್ಗೆ ಮತದಾರರು ಚಿಂತನೆ ನಡೆಸಬೇಕು. ಅವರು ನೀಡುವ 2–3 ಸಾವಿರ ಹಣ ಎಷ್ಟು ದಿನ ಇರುತ್ತದೆ ಎಂಬುದನ್ನು ಯೋಚಿಸಿ ಮತದಾನ ಮಾಡಬೇಕು ಎನ್ನುತ್ತಾರೆ ಹಿರಿಯ ಮತದಾರ ಶ್ಯಾಂಪ್ರಕಾಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.