ADVERTISEMENT

ಈಡೇರದ ‘ಮಿಲ್ಕ್ ರೂಟ್’ ಕನಸು

ಹಸು ಸಾಕಾಣೆ ವರ್ಷದಿಂದ ವರ್ಷಕ್ಕೆ ಇಳಿಮುಖ– ಮನೆಗಳಲ್ಲಿ ತಾಜಾ ಹಾಲು ಮಾಯ

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 11:56 IST
Last Updated 3 ಜೂನ್ 2018, 11:56 IST
ಶೃಂಗೇರಿ ತಾಲ್ಲೂಕಿನ ತೋರಣಗದ್ದೆ ನಟರಾಜ್ ರಾವ್ ಮನೆಯಲ್ಲಿ ಹೈನುಗಾರಿಕೆಯಲ್ಲಿ ನಿರತರರಾಗಿರುವುದು.
ಶೃಂಗೇರಿ ತಾಲ್ಲೂಕಿನ ತೋರಣಗದ್ದೆ ನಟರಾಜ್ ರಾವ್ ಮನೆಯಲ್ಲಿ ಹೈನುಗಾರಿಕೆಯಲ್ಲಿ ನಿರತರರಾಗಿರುವುದು.   

ಕೃಷಿಗೆ ಪೂರಕವಾದ ಹೈನುಗಾರಿಕೆಗೆ ತಾಲ್ಲೂಕಿನಲ್ಲಿ ಮಿಲ್ಕ್ ರೂಟ್ ಆಗದೆ ಈ ಭಾಗದ ಜನರ ಹಲವಾರು ವರ್ಷದ ಬೇಡಿಕೆ ಕನಸಾಗಿಯೇ ಉಳಿದಿದೆ.

ತಾಲ್ಲೂಕಿಗೆ ಪ್ರತಿ ದಿನವೂ ಹಾಸನ ಡೈರಿಯಿಂದ ಸಾವಿರಾರು ಲೀಟರ್ ಹಾಲನ್ನು ಪಡೆಯಲಾಗುತ್ತಿದೆಯಾದರೂ ಇಲ್ಲಿಂದ ಒಂದು ಲೀಟರ್ ಹಾಲನ್ನು ಸಂಗ್ರಹಿಸುತ್ತಿಲ್ಲ. ಇದರಿಂದ ಹೈನುಗಾರಿಕೆಗೆ ತೀವ್ರ ಹಿನ್ನಡೆಯಾಗಿದ್ದು, ಸಾವಯವ ಕೃಷಿಗೂ ಪೆಟ್ಟು ಬಿದ್ದಿದೆ. ಹೈನುಗಾರಿಕೆಗೆ ಹೇಳಿ ಮಾಡಿಸಿದ ವಾತಾವರಣ ತಾಲ್ಲೂಕಿನಲ್ಲಿದ್ದು, ಹಸಿರು ಹುಲ್ಲು ಮತ್ತು ಒಣ ಹುಲ್ಲು ಹೇರಳವಾಗಿ ದೊರಕುತ್ತದೆ. ತಾಲ್ಲೂಕಿನ ಜನರ ಮುಖ್ಯ ಉದ್ಯೋಗ ಕೃಷಿಯಾಗಿರುವುದರಿಂದ ರೈತರು, ಕಾರ್ಮಿಕರು ಹಸು ಸಾಕಣೆ ಮಾಡುವುದು ಸೂಕ್ತವಾಗಿದೆ. ತಾಲ್ಲೂಕಿನಲ್ಲಿ ಹೈನುಗಾರಿಕೆ ಮಾಡುತ್ತಿರುವ ಕುಟುಂಬಗಳು ಸಾಕಷ್ಟು ಇದ್ದು, ಈಗ ಖಾಸಗಿಯಾಗಿ ಹಾಲು ಮಾರಿ ಜೀವನ ಸಾಗಿಸಬೇಕಿದೆ. ಆದರೆ, ಮಿಲ್ಕ್ ರೂಟ್ ಇಲ್ಲದೆ ಇರುವುದರಿಂದ ಕೆಎಂಎಫ್ ನೀಡುವ ಅನೇಕ ಸೌಲಭ್ಯಗಳು ರೈತರಿಗೆ ದೊರಕದೆ ಹೈನುಗಾರಿಕೆ ದುಬಾರಿಯಾಗುತ್ತಿದೆ. ರೈತರಿಗೆ ಉಪ ಉದ್ಯೋಗವಾಗಿ ಹೈನುಗಾರಿಕೆ ಮಾಡಿದರೂ ಸೂಕ್ತ ಮಾರುಕಟ್ಟೆ ಇಲ್ಲದೆ ಹಸು ಸಾಕಣೆಯಿಂದ ಹಿಂದೆ ಸರಿಯುತ್ತಿದ್ದಾರೆ.

ಮುಖ್ಯ ವಾಣಿಜ್ಯಬೆಳೆ ಅಡಕೆಗೆ ರೋಗ ಬಂದ ನಂತರ ಬದಲಿ ಉದ್ಯೋಗವನ್ನು ರೈತರು ಕಂಡುಕೊಳ್ಳುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ. ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವುದು ರೈತರಿಗೆ ಸುಲಭವಾಗಿತ್ತು. ಆದರೆ, ಉತ್ಪಾದನೆಯಾಗುವ ಹಾಲಿನ ಮಾರುಕಟ್ಟೆ ಮಾಡುವುದು ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಬದಲಿ ಉದ್ಯೋಗ ದೊರಕದೆ ರೈತರ ಅನೇಕ ಕುಟುಂಬದಲ್ಲಿ ಯುವಕರು ನಗರದತ್ತ ವಲಸೆ ಹೋಗಿದ್ದಾರೆ. ಮಲೆನಾಡಿನಲ್ಲಿ ಪಶುಗಳಿಗೆ ಅಗತ್ಯವಾಗಿರುವ ಹಸಿರು ಹುಲ್ಲಿನ ಕೊರತೆ ಇಲ್ಲದಿರುವುದು ಹೈನುಗಾರಿಕೆಗೆ ಉತ್ತಮ ವಾತಾವರಣ ಕಲ್ಪಿಸಿದೆ. ಆದರೆ, ಮಾರುಕಟ್ಟೆಯಲ್ಲಿ ದುಬಾರಿ ದರದ ಪಶು ಆಹಾರ ಖರೀದಿಸುವುದು ರೈತರಿಗೆ ಹೊರೆ
ಯಾಗುತ್ತಿದೆ ಎಂಬುದು ನಾಗರಿಕರ ಅಭಿಪ್ರಾಯ.

ADVERTISEMENT

ಮಿಲ್ಕ್ ರೂಟ್ ಆಗಬೇಕೆಂಬ ಕನಸು ಇವತ್ತು ನಿನ್ನೆಯದಲ್ಲ.  ಎರಡು ದಶಕದಿಂದ ಈ ಹೋರಾಟ ನಡೆದಿದ್ದರೂ, ಫಲಿತಾಂಶ ಶೂನ್ಯವಾಗಿದೆ. ಈ ಹಿಂದೆ ಬಾಳೆಹೊನ್ನೂರಿನಲ್ಲಿ ಹಾಲು ಸಂಗ್ರಹದ ಚಿಲ್ಲಿಂಗ್ ಸೆಂಟರ್ ಆರಂಭಿಸಲಾಗಿತ್ತಾದರೂ, ತಾಂತ್ರಿಕ ಕಾರಣದಿಂದ ಅದು ಸ್ಥಗಿತಗೊಂಡಿತು. ಚಿಕ್ಕಮಗಳೂರಿಗೆ ಪ್ರತ್ಯೇಕ ಡೈರಿಯನ್ನು ಸರ್ಕಾರ ಪ್ರಕಟಿಸಿದರೂ ಅದು ಕಾರ್ಯಗತಗೊಳ್ಳಲಿಲ್ಲ. ತಾಲ್ಲೂಕಿನ ಹಾಲನ್ನು ಶಿವಮೊಗ್ಗ ಡೈರಿಗೆ ಸೇರ್ಪಡೆಗೊಳಿಸಿ, ಹಾಲಿನ ಸಂಗ್ರಹ ಮಾಡಲು ಪ್ರಯತ್ನ ನಡೆಸಿದ್ದರೂ ಅದು ಸಹ ವಿಫಲವಾಗಿ, ಮಿಲ್ಕ್ ರೂಟ್ ನನೆಗುದಿಗೆ ಬಿದ್ದಿದೆ.

ಹೈನುಗಾರಿಕೆಗೆ ಪ್ರೋತ್ಸಾಹದ ಕೊರತೆ ಯಿಂದ ಹಸು ಸಾಕಣೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ರೈತರ ಮನೆಯಲ್ಲಿ ಪ್ಯಾಕೆಟ್ ಹಾಲನ್ನು ಕೊಳ್ಳುತ್ತಿದ್ದಾರೆ. ಇದರಿಂದ ಸ್ವಾಭಾವಿಕವಾಗಿ ಸಾವಯವ ಗೊಬ್ಬರ ಕಡಿಮೆಯಾಗುತ್ತಿದೆ. ಸರ್ಕಾರ ಸಾವಯವ ಕೃಷಿಗೆ ಉತ್ತೇಜನ ನೀಡುತ್ತಿದೆಯಾದರೂ, ಹೈನುಗಾರಿಕೆ ಕುಸಿತದಿಂದ ಸಾವಯವ ಕೃಷಿಗೆ ಹಿನ್ನಡೆಯಾಗಿದೆ. ಹಸು ಸಾಕಣೆ ಕಡಿಮೆಯಾಗಿರುವುದರಿಂದ ಭತ್ತದ ಒಣ ಹುಲ್ಲಿಗೂ ಬೇಡಿಕೆ ಕುಸಿತವಾಗಿದೆ ಎನ್ನುತ್ತಾರೆ ಸ್ಥಳೀಯರು.

ಸರ್ಕಾರ ಸ್ಪಂದಿಸಿದರೆ ಅನುಕೂಲ

‘ಮಿಲ್ಕ್ ರೂಟ್ ಆರಂಭಿಸಲು ಸ್ನೇಹಿತರೊಂದಿಗೆ 2004 ರಿಂದ 2006ವರೆಗೂ ನಿರಂತರ ಪ್ರಯತ್ನ ನಡೆಸಿದ್ದೇವೆ. ಬಳಿಕ ಮಾಜಿ ಶಾಸಕ ಡಿ.ಎನ್.ಜೀವರಾಜ್ ಮತ್ತು ಡಿ.ಎಚ್. ಶಂಕರಮಾರ್ತಿ ನೀಡಿದ್ದ ಭರವಸೆ ಮೇಲೆ ನಮ್ಮ ಪ್ರಯತ್ನ ನಿಲ್ಲಿಸಲಾಗಿತ್ತು ಎನ್ನುತ್ತಾರೆ’ ತೋರಣಗದ್ದೆ ಕೃಷಿಕ ನಟರಾಜ್ ರಾವ್.

ತಾಲೂಕಿನಲ್ಲಿ 1980ರ ದಶಕದಲ್ಲಿ ಹಾಸನ ಡೇರಿಯಿಂದ ಎರಡು ವರ್ಷ ಹಾಲು ಸಂಗ್ರಹಿಸಲಾಗಿತ್ತು. ಪಟ್ಟಣದಲ್ಲಿ ಕೆಎಂಎಫ್ ಕಚೇರಿಯನ್ನು ಆರಂಭಿಸಲಾಗಿತ್ತು. ಆದರೆ, ಸ್ಥಳಿಯ ಬಾಳೆಹೊನ್ನೂರಿನಲ್ಲಿ ಹಾಲು ಸಂಗ್ರಹ ಮಾಡುತ್ತಿದ್ದ ಕೆಲವೇ ವ್ಯಕ್ತಿಗಳು ಹಾಸನ ಡೇರಿಗೆ ಲಕ್ಷಾಂತರ ರೂ. ವಂಚಿಸಿದ್ದು, ಇದರಿಂದ ಶೃಂಗೇರಿಯನ್ನು ಹಾಸನ ಡೇರಿ ಬ್ಲಾಕ್ ಲಿಸ್ಟ್‌ಗೆ ಸೇರಿಸಿತ್ತು. ಆದರೆ ಯಾರೋ ಮಾಡಿದ ವಂಚನೆಗೆ ತಾಲೂಕಿನ ರೈತರನ್ನು ಹೊಣೆ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ನಿರಂತರ ಪ್ರಯತ್ನ ನಡೆಸಿದ್ದೆವು. ಆದರೆ, ಹೋರಾಟಕ್ಕೆ ಫಲ ಕೊನೆಗೂ ದೊರಕಲಿಲ್ಲ. ಈ ವಿಚಾರದಲ್ಲಿ ಹೋಲೆನರಸಿಪುರ ಶಾಸಕ ಎಚ್. ಡಿ. ರೇವಣ್ಣ ನಿರ್ಲಕ್ಷ ತೋರಿದ್ದರು. ಈಗ ಅವರ ಸರ್ಕಾರ ಬಂದಿರುವುದರಿಂದ ಶೃಂಗೇರಿ ಸುತ್ತಮುತ್ತಲಿನ ರೈತರ ಸಂಕಷ್ಟಕ್ಕೆ ನೇರವಾಗಬಾರದೇಕೆ? ಈ ವಿಚಾರಕ್ಕೆ ತುರ್ತಾಗಿ ಸ್ಪಂದಿಸಿದರೆ ಶೃಂಗೇರಿ ರೈತರಿಗೆ ಅನುಕೂಲವಾಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಅವರು.

ಉತ್ತಮ ವಾತಾವರಣ

ಜಿಲ್ಲೆಯ ಕಡೂರು, ಚಿಕ್ಕಮಗಳೂರು,ತರೀಕೆರೆ ತಾಲ್ಲೂಕುಗಳಿಂದ ಹಾಲನ್ನು ಸಂಗ್ರಹಿಸಲಾಗುತ್ತಿದೆ. ತಾಲ್ಲೂಕಿನಲ್ಲಿ ಅಂದಾಜಿನಂತೆ ಪ್ರತಿ ದಿನ 13 ರಿಂದ 14 ಸಾವಿರ ಲೀಟರ್ ಉತ್ಪಾದನೆಯಾಗುತ್ತಿದೆ. ಮಿಲ್ಕ್ ರೂಟ್ ಆಗಬೇಕೆಂಬ ಬೇಡಿಕೆಗೆ ಹಲವಾರು ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೈನುಗಾರಿಕೆ ಉತ್ತಮ ವಾತಾವರಣವೂ ಇಲ್ಲಿದ್ದು, ಮಿಲ್ಕ್ ರೂಟ್ ಆರಂಭವಾದರೆ ಹಲವಾರು ಜನರಿಗೆ ಉದ್ಯೋಗ ದೊರಕಲಿದೆ ಎನ್ನುತ್ತಾರೆ ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಪ್ರದೀಪ್.

ರಾಘವೇಂದ್ರ, ಶೃಂಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.