ADVERTISEMENT

ಎಗ್ಗಿಲ್ಲದೇ ನಡೆಯುತ್ತಿದೆ ಹೇಮಾವತಿಯ ಮಲಿನ ಕಾರ್ಯ

ಮಾಲಿನ್ಯ ಇಲಾಖೆಯ ಮೌನಕ್ಕೆ ಸಾರ್ವಜನಿಕರ ಆಕ್ರೋಶ!

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2014, 6:56 IST
Last Updated 26 ನವೆಂಬರ್ 2014, 6:56 IST

ಮೂಡಿಗೆರೆ: ದೇಶದೆಲ್ಲೆಡೆ ಸ್ವಚ್ಛ ಭಾರತದ ಘೋಷಣೆಯೊಂದಿಗೆ ರಸ್ತೆ, ಓಣಿ, ಕೇರಿ, ಹಳ್ಳ, ಕೊಳ್ಳ, ನದಿ ಪಾತ್ರಗಳೆಲ್ಲವೂ ಸ್ವಚ್ಛತೆಯ ಮಂತ್ರ ಜಪಿಸುತ್ತಿದ್ದರೆ, ತಾಲ್ಲೂಕಿನಲ್ಲಿ ಹರಿಯುವ ರಾಜ್ಯದ ಪ್ರಮುಖ ನದಿಗಳಲ್ಲಿ ಒಂದಾದ ಹೇಮಾ­ವತಿಗೆ ಮಾತ್ರ ಮಲಿನತೆಯಿಂದ ಸದ್ಯಕ್ಕೆ ಮುಕ್ತಿ ದೊರೆಯುವ ಭಾಗ್ಯ ಕಾಣದಂತಾಗಿದೆ!

ತಾಲ್ಲೂಕಿನ ಜಾವಳಿಯ ಬಳಿ ಜನ್ಮ ಕಾಣುವ ಹೇಮಾವತಿ ನದಿಯು, ಬಾಳೂರು, ಹೊರಟ್ಟಿ, ಸಬ್ಲಿ ಮಾರ್ಗವಾಗಿ ಬಣಕಲ್‌ ಮೂಲಕ ಫಲ್ಗುಣಿ, ಸಬ್ಬೇನಹಳ್ಳಿ, ಮುಗ್ರಹಳ್ಳಿ, ಕಿತ್ತಲೆಗಂಡಿ, ಉಗ್ಗೆಹಳ್ಳಿ, ಅಗ್ರಹಾರ, ದೋಣುಗೋಡು ಮೂಲಕ ಸಕಲೇಶಪುರ ತಾಲ್ಲೂಕಿಗೆ ಸೇರ್ಪಡೆ­ಯಾ­ಗು­ತ್ತದೆ.

ಈ ನದಿಯ ಉಗಮ ಸ್ಥಾನದಿಂದ ಹತ್ತು ಕಿ.ಮೀ. ದೂರದ ಬಣಕಲ್‌ ಗ್ರಾಮದಲ್ಲಿ ಸುಮಾರು ಒಂದು ಕಿ.ಮೀ. ದೂರ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಹರಿಯುತ್ತಿದ್ದು, ನಿತ್ಯವೂ ಇಲ್ಲಿ ಹಂದಿ, ಕೋಳಿ ಸಾಗಣೆ ಮಾಡಿದ ವಾಹನ­ಗಳು, ಕರಾವಳಿಯಿಂದ ಇಂಧನ ಪೂರೈಕೆ ಮಾಡಿ ಹಿಂತಿರುಗುವ ಟ್ಯಾಂಕರ್‌ಗಳು, ಲಾರಿಗಳು ಸೇರಿದಂತೆ ನೂರಾರು ವಾಹನಗಳನ್ನು ಹರಿ­ಯುವ ನೀರಿನಲ್ಲಿ ನಿಲ್ಲಿಸಿ ತೊಳೆಯುವ ಮೂಲಕ ನದಿಯ ನೀರನ್ನು ಕಲುಷಿತಗೊಳಿಸಲಾಗುತ್ತಿದೆ.

ಕೋಳಿ, ತರಕಾರಿ, ಹಣ್ಣು ಮುಂತಾದ ವಸ್ತು­ಗಳನ್ನು ಜಿಲ್ಲೆಯಿಂದ ಕರಾವಳಿ ಪ್ರದೇಶಕ್ಕೆ ಸಾಗಿ­ಸುವ ವಾಹನಗಳು, ಹಿಂತಿರುಗುವಾಗ ಶುಚಿತ್ವ­ಕ್ಕಾಗಿ ಇದೇ ಸ್ಥಳದಲ್ಲಿ ನಿಲುಗಡೆಗೊಳ್ಳುತ್ತಿದ್ದು, ಕೊಳೆತ ಹಣ್ಣು, ತರಕಾರಿ, ಸತ್ತ ಕೋಳಿಗಳನ್ನು ನದಿಯಲ್ಲೇ ಎಸೆಯುವ ಪರಿಪಾಠ ಬೆಳೆಸಿಕೊಂಡಿ­ದ್ದಾರೆ.

ಹಲವು ಬಾರಿ ಸತ್ತ ಕೋಳಿಗಳು ನದಿಯಲ್ಲಿ ತೇಲಿ ಬರುತ್ತಿರುವ ಬಗ್ಗೆ ಸ್ಥಳೀಯರು ದೂರಿದ್ದಾರೆ. ಜೊತೆಗೆ ಟ್ಯಾಂಕರ್‌ಗಳನ್ನು ನದಿಯ ನೀರಿನಲ್ಲಿ ಶುಚಿಗೊಳಿಸುವುದರಿಂದ ತ್ಯಾಜ್ಯ ಇಂಧನ ಉತ್ಪನ್ನಗಳು ಎಗ್ಗಿಲ್ಲದೇ ನದಿಯ ಒಡಲು ಸೇರುತ್ತಿವೆ.

ತಾಲ್ಲೂಕು ಕೇಂದ್ರವೂ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಹೇಮಾವತಿಯು ಕುಡಿಯುವ ನೀರಿನ ಮೂಲವಾಗಿದ್ದು, ಇಂತಹ ಕಲುಷಿತ ನೀರಿನ ಬಳಕೆ ಆರೋಗ್ಯದ ಮೇಲೆ ಪರಿಣಾಮ ಬೀರುವಂತಾಗಿದೆ. ನದಿಯ ನೀರನ್ನು ಕಲುಷಿತ­ಗೊಳಿಸುತ್ತಿರುವ ಬಗ್ಗೆ ಎಚ್ಚೆತ್ತುಕೊಂಡಿದ್ದ ಬಣಕಲ್‌ ಗ್ರಾ.ಪಂ. ಹಲವು ಬಾರಿ ನದಿಪಾತ್ರಕ್ಕೆ ತೆರಳದಂತೆ ಟ್ರಂಚ್‌ ನಿರ್ಮಿಸಿದ್ದರೂ ಕಿಡಿಗೇಡಿ­ಗಳು ಟ್ರಂಚ್‌ ಬಂದ್‌ ಮಾಡಿ ಸ್ಥಳಕ್ಕೆ ತೆರಳುತ್ತಾರೆ ಎಂಬುದು ಗ್ರಾ.ಪಂ. ಸದಸ್ಯರ ಅಳಲು.

ನದಿಯ ನೀರು ಕಲುಷಿತವಾಗುತ್ತಿರುವ ಬಗ್ಗೆ ಪರಿಸರಾಸಕ್ತರು ಮತ್ತು ಗ್ರಾಮಸ್ಥರು ಮಾಲಿನ್ಯ ನಿಯಂತ್ರಣ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಜತೆಗೆ ಒಂದು ಬಾರಿಯೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂಬುದು ಸ್ಥಳೀಯರು ಆರೋಪಿ ಸುತ್ತಾರೆ.

‘ಪ್ರತಿ ದಿನ ಸಂಜೆಯಾಗುತ್ತಿದ್ದಂತೆ ಹೇಮಾ ವತಿಯ ತೀರದಲ್ಲಿ ವಾಹನಗಳು ಸಾಲುಗಟ್ಟಿ ನಿಂತು ನದಿಯ ನೀರಿನಲ್ಲಿ ಶುಚಿಯಾಗುತ್ತವೆ. ಈ ವೇಳೆ ನದಿಯ ನೀರು ಕೆಟ್ಟ ವಾಸನೆಯಿಂದ ಕೂಡಿರುತ್ತದೆ, ನೈಜ ಬಣ್ಣ ಬದಲಾಗಿರುತ್ತದೆ. ನದಿಗೆ ಎಸೆಯುವ ಸತ್ತ ಕೋಳಿಗಳು ಇಕ್ಕೆಲದ ಗಿಡ ಬೇರುಗಳಿಗೆ ಸಿಲುಕಿ ಕೊಳೆಯುವು­ದರಿಂದ ಕೆಲವೊಮ್ಮೆ ವಾರಗಟ್ಟಲೆ ನೀರು ವಾಸನೆ ಯುಕ್ತವಾಗಿರುತ್ತದೆ. ಸಂಜೆಯ ವೇಳೆ­ಯಲ್ಲಿ ಮಾಲಿನ್ಯ ಇಲಾಖೆಯ ಅಧಿಕಾರಿಗಳಾ­ಗಲೀ, ಸ್ಥಳೀಯ ಪೊಲೀಸರಾಗಲೀ ದಾಳಿ ನಡೆಸಿ ವಾಹನಗಳನ್ನು ವಶಪಡಿಸಿಕೊಂಡು ದೂರು ದಾಖಲಿಸಿ ಮಾಲಿನ್ಯವನ್ನು ಕಟ್ಟುನಿಟ್ಟಾಗಿ ತಡೆಯ­ಬೇಕು’ ಎನ್ನುತ್ತಾರೆ ಗ್ರಾಮಸ್ಥ ಸಂಜಯ್‌.

ಹಲವು ಗ್ರಾಮಗಳಿಗೆ ಕುಡಿಯುವ ನೀರಿನ ಪ್ರಮುಖ ಮೂಲವಾಗಿರುವ ಹೇಮಾವತಿಯ ಕಲುಷಿತವು ಆರೋಗ್ಯದ ಮೇಲೆ ಪರಿಣಾಮ ಬೀರುವ ಅಪಾಯದ ಜೊತೆಗೆ ಜಲಚರಗಳ ಮಾರಣಕ್ಕೂ ಕಾರಣವಾಗುವುದರಿಂದ ಕೂಡಲೇ ಇಲಾಖೆ ಎಚ್ಚೆತ್ತುಕೊಂಡು ಕಟ್ಟುನಿಟ್ಟಿನ ಕ್ರಮ ಅನುಸರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.